ಕರ್ನಾಟಕ

karnataka

ಕಚ್ಚಾವಸ್ತು ಕೊಡಿಸುವುದಾಗಿ ನಂಬಿಸಿ ಕಾಂಟ್ರಾಕ್ಟರ್​​ಗೆ ಅಪರಿಚಿತನಿಂದ 18 ಲಕ್ಷ ರೂ. ವಂಚನೆ

By ETV Bharat Karnataka Team

Published : Feb 24, 2024, 11:03 AM IST

ಕಚ್ಚಾವಸ್ತುಗಳನ್ನು ಕೊಡಿಸುವುದಾಗಿ ನಂಬಿಸಿ ಕಾಂಟ್ರಾಕ್ಟರ್​ವೊಬ್ಬರಿಗೆ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ದಾವಣಗೆರೆಯಲ್ಲಿ ಪ್ರಕರಣ ದಾಖಲಾಗಿದೆ.

fraud
ವಂಚನೆ

ದಾವಣಗೆರೆ:ಸಿವಿಲ್ ಕಾಂಟ್ರಾಕ್ಟರ್​ವೊಬ್ಬರಿಗೆ ಕೆಲಸಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಕೊಡಿಸುವುದಾಗಿ ನಂಬಿಸಿ, ಬರೋಬ್ಬರಿ 18 ಲಕ್ಷ ರೂ. ಮೋಸ ಮಾಡಿರುವ ಬಗ್ಗೆ ಇಲ್ಲಿನ ಸಿಇಎನ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯ ಅಂಬಿಕಾನಗರದ ನಿವಾಸಿಯಾದ ಸಿವಿಲ್ ಕಾಂಟ್ರಾಕ್ಟರ್ ಶುಭಾಶ್​​​​ಚಂದ್ರ ಎಂಬುವರು ಅಪರಿಚಿತ ವ್ಯಕ್ತಿಯಿಂದ 18 ಲಕ್ಷ ಕಳೆದುಕೊಂಡವರು. ದೂರವಾಣಿ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೊಬ್ಬ ನಿತ್ಯದ ಕಾಂಟ್ರಾಕ್ಟರ್ ಕೆಲಸಕ್ಕೆ ಅವಶ್ಯಕ ಕಚ್ಚಾವಸ್ತುಗಳನ್ನು ಕಳಿಸುವುದಾಗಿ ತಿಳಿಸಿದ್ದ. ಆದರೆ, ಶುಭಾಶ್ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ.

ಬಳಿಕ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಗುಜರಾತ್‌ನ ವಡೋದರದಲ್ಲಿ ತಮ್ಮ ಮುಖ್ಯ ಕಚೇರಿ ಇದೆ ಎಂದು ನಂಬಿಸಿದ್ದಾನೆ. ಮೆಟಲ್ ಬೀಮ್ ಕ್ರಷ್ ಬ್ಯಾರಿಯರ್ ಎಂಬ ಕಚ್ಚಾವಸ್ತುಗಳನ್ನು ಪೂರೈಸುವುದಾಗಿ ಹೇಳಿ 'ನೀತು ಎಂಟ‌ರ್ ಪ್ರೈಸಸ್' ಎಂಬ ಕಂಪನಿಗೆ ಸಂಬಂಧಿಸಿದ ಲೋಗೊ ಇರುವ ದಾಖಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದಾನೆ.

18 ಲಕ್ಷ ರೂ. ಮುಂಗಡ ನೀಡಿದ ಕಾಂಟ್ರಾಕ್ಟರ್:ಇದನ್ನೆಲ್ಲ ನಂಬಿದಶುಭಾಶ್ ಮೊದಲಿಗೆ ತಮಗೆ ಬೇಕಾದ ವಸ್ತುಗಳನ್ನು ಪಟ್ಟಿ ಮಾಡಿ, ಅಪರಿಚಿತ ವ್ಯಕ್ತಿಗೆ ಕಳುಹಿಸಿದ್ದಾರೆ. ಅದನ್ನು ನೋಡಿದ ವ್ಯಕ್ತಿಯು ಎಲ್ಲ ವಸ್ತುಗಳನ್ನು ಕಳುಹಿಸಿಕೊಡಲು ಒಟ್ಟು 26.10 ಲಕ್ಷ ರೂ. ಹಣ ಭರಿಸಬೇಕಾಗುತ್ತದೆ ಎಂದಿದ್ದಾನೆ. ಬಳಿಕ ಮುಂಗಡವಾಗಿ 18 ಲಕ್ಷ ರೂ. ನೀಡುವಂತೆ ತಿಳಿಸಿದ್ದಾನೆ. ಇದನ್ನು ನಂಬಿದ ಸುಭಾಶ್ ಮುಂಗಡವಾಗಿ ಅಪರಿಚಿತನ ಬ್ಯಾಂಕ್ ಖಾತೆಗೆ 18 ಲಕ್ಷ ರೂ. ಕಳುಹಿಸಿದ್ದಾರೆ.

ಆದರೆ, ಹಣ ಕಳುಹಿಸಿ 9 ದಿನಗಳಾದರೂ ಕೂಡ ಬೇಕಾದ ಕಚ್ಚಾ ವಸ್ತುಗಳು ಕೈ ಸೇರಲಿಲ್ಲ. ಬಳಿಕ ಸುಭಾಶ್ ಅಪರಿಚಿತ ವ್ಯಕ್ತಿ ನೀಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ಡ್​ ಆಫ್‌ ಆಗಿತ್ತು. ಆಗ ತಾನು ಮೋಸ ಹೋಗಿರುವುದನ್ನು ಅರಿತ ಕಾಂಟ್ರಾಕ್ಟರ್, ಸಿಇಎನ್ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರತ್ಯೇಕ ಪ್ರಕರಣ, ಮನೆಗಳ್ಳರ ಬಂಧನ:ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕಲಪನಹಳ್ಳಿ ಗ್ರಾಮದ ಇಷ್ಟಲಿಂಗಯ್ಯ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗದು ಹಾಗೂ ದೇವರ ಹುಂಡಿಯಲ್ಲಿದ್ದ ಹಣವನ್ನು ದೋಚಿ ಖದೀಮರು ಪರಾರಿಯಾಗಿದ್ದರು. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದಾವಣಗೆರೆ ನಗರದ ಸಾದಿಕ್, ಸಮೀಉಲ್ಲಾ ಹಾಗೂ ಗೌಸ್​​ಪೀರ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1,91,000 ರೂ. ಮೌಲ್ಯದ 28.13 ಗ್ರಾಂ ಬಂಗಾರದ ಆಭರಣ, ಒಂದು ಹಿತ್ತಾಳೆ ಕೊಳಗ, ನೀರೆತ್ತುವ ಮೋಟಾರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‌ ವಶಕ್ಕೆ ಪಡಯಲಾಗಿದೆ. ಆರೋಪಿಗಳ ಮೇಲೆ ಈ ಹಿಂದೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ 3 ಹಾಗೂ ಬಸವನಗರ ಠಾಣೆಯಲ್ಲಿ 2 ಸೇರಿ ಒಟ್ಟು 5 ಕೇಸ್​​​ ದಾಖಲಾಗಿದ್ದವು.

ಇದನ್ನೂ ಓದಿ:ಪುತ್ತೂರು: ಉದ್ಯೋಗ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚನೆ, ಮೂವರು ಸೆರೆ

ABOUT THE AUTHOR

...view details