ಕರ್ನಾಟಕ

karnataka

ಶ್ರೀಗಳ ಚಿಂತನ ಮಂಥನ ಸಭೆಗೆ ಅಧಿಕಾರಿಗಳ ತಡೆ; ದಿಂಗಾಲೇಶ್ವರ ನೇತೃತ್ವದಲ್ಲಿ ಪ್ರತಿಭಟನೆ - Dingaleshwar Swamiji

By ETV Bharat Karnataka Team

Published : May 4, 2024, 5:32 PM IST

ಚಿಂತನ ಮಂಥನ ಸಭೆಗೆ ತಡೆ ನೀಡಿದ್ದರಿಂದ ದಿಂಗಾಲೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ELECTION FLYING SQUAD  PROTEST  MEETING  DHARWAD
ದಿಂಗಾಲೇಶ್ವರ ಸ್ವಾಮೀಜಿ (Etv Bharat)

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ (ETV Bharat)

ಹುಬ್ಬಳ್ಳಿ:ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಧರ್ಮ ಚಿಂತನ ಸಭೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಅನುಮತಿ ಪಡೆಯದೆ ಸಭೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳ ಆಕ್ಷೇಪ ವ್ಯಕ್ತಪಡಿಸಿದರು. ಸಭೆ ಆರಂಭ ಆಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಬಸವಪ್ರಭು ಹಿರೇಮಠ, ಸಿಪಿಐ ಧರೇಗೌಡ ಸಭೆ ನಡೆಸಲು ಅನುಮತಿ ಪಡೆದಿದ್ದರೆ ತೋರಿಸಿ ಎಂದರು.

ನಿನ್ನೆಯಿಂದ ನಾವು ಅನುಮತಿಗಾಗಿ ಚುನಾವಣಾಧಿಕಾರಿಗೆ ಪತ್ರ ಬರೆದು ಕೋರಿದ್ದೆವು. ಬೆಳಗ್ಗೆ ಕೊಡುತ್ತೇವೆ ಎಂದು ಹೇಳಿದವರು ಕೊಟ್ಟಿಲ್ಲ. ಕೊಡದೇ ಇರುವುದು ಅವರ ತಪ್ಪು. ನೂರಾರು ಸ್ವಾಮೀಜಿಗಳು ಬಂದಿದ್ದಾರೆ. ಸಭೆ ನಡೆಸಿಯೇ ತಿರುತ್ತೇವೆ ಎಂದು ದಿಂಗಾಲೇಶ್ವರರು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳ ಕ್ರಮ ಖಂಡಿಸಿದ ಶ್ರೀಗಳು ಮತ್ತು ಇತರ ಸ್ವಾಮೀಜಿಗಳು ಸಭೆ ಮೊಟಕುಗೊಳಿಸಿದರು. ಅನುಮತಿ ನೀಡದೇ ಇರುವ ಚುನಾವಣಾಧಿಕಾರಿಗಳ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸೋಣ ಎಂದು ಚೆನ್ನಮ್ಮ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.

''ಅನುಮತಿ ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ನಿರಾಕರಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿಗಳು, ಚೆನ್ನಮ್ಮ ವೃತ್ತದಿಂದ ಮಹಾನಗರ ಪಾಲಿಕೆವರೆಗೆ ಪ್ರತಿಭಟನೆ ನಡೆಸಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಚುನಾವಣಾ ಅಧಿಕಾರಿಗಳು ಸ್ವಾಮೀಜಿಗಳ ಸಭೆಗೆ ಅನುಮತಿ ಕೊಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ನಿರಾಕರಿಸಿದ್ದಾರೆ. ಪೊಲೀಸರು, ಚುನಾವಣಾ ಅಧಿಕಾರಿಗಳು ಜೋಶಿಯವರ ಮನೆಯ ಆಳಿನಂತೆ ವರ್ತಿಸುತ್ತಿದ್ದಾರೆ. ಸ್ವಾಮೀಜಿಗಳ ಧರ್ಮ ಚಿಂತನೆ ಸಭೆಗೆ ದುರುದ್ದೇಶದಿಂದ ಅಡ್ಡಿಪಡಿಸಿದ್ದಾರೆ'' ಎಂದರು.

''ಬ್ರಿಟಿಷ್ ಸರ್ಕಾರದಂತೆ ವರ್ತನೆ ಮಾಡುತ್ತಿದ್ದಾರೆ. ಜೋಶಿಯವರು ಶಾಂತ ರೀತಿಯಿಂದ ಸಭೆ ಮಾಡಲು ಬಿಟ್ಟಿಲ್ಲ. ಅವರ ವಿರುದ್ಧ ನಮ್ಮ ಧರ್ಮಯುದ್ಧ ಸಾರಿದ್ದೇವೆ. ಇಡೀ‌ ನಾಡಿಗೆ ಧಾರವಾಡದಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸುತ್ತೇವೆ‌. ಜೋಶಿಯವರು ನ್ಯಾಯ, ನೀತಿ, ಧರ್ಮದ ವಿರುದ್ಧ ಇದ್ದಾರೆ. ಹೀಗಾಗಿ ನಮ್ಮನ್ನು ಕಂಡರೆ ಭಯ ಕಾಡುತ್ತಿದೆ. ಸೋಲಿನ‌ ಭಯದಲ್ಲಿ ಹತಾಶರಾಗಿ ಮಾಡಬಾರದ ಕೆಟ್ಟ ಕೆಲಸ ಮಾಡುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

ಓದಿ:ನೇಹಾ ಹತ್ಯೆ, ಪ್ರಜ್ವಲ್​ ಪ್ರಕರಣದ್ದೇ ಚರ್ಚೆ; ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ - open campaign end tomorrow

ABOUT THE AUTHOR

...view details