ETV Bharat / state

ನೇಹಾ ಹತ್ಯೆ, ಪ್ರಜ್ವಲ್​ ಪ್ರಕರಣದ್ದೇ ಚರ್ಚೆ; ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ - open campaign end tomorrow

author img

By ETV Bharat Karnataka Team

Published : May 4, 2024, 2:01 PM IST

Updated : May 4, 2024, 3:02 PM IST

open - campaign-end-tomorrow-in-state
ಎರಡನೇ ಹಂತದ ಚುನಾವಣೆ (Etv Bharat)

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆ ಬೀಳಲಿದೆ.

ಬೆಂಗಳೂರು: ರಾಜ್ಯದ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದ್ದು, ನಾಳೆ ಸಂಜೆ 6 ಗಂಟೆಗೆ (ಭಾನುವಾರ) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಮತದಾನ ನಡೆದಿತ್ತು. ಇದೀಗ ಎರಡನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಕೊನೆಯ ದಿನ ಅಭ್ಯರ್ಥಿಗಳು ಮನೆ, ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.

ಎರಡನೇ ಹಂತದ ಚುನಾವಣಾ ಕಣದಲ್ಲಿ 227 ಅಭ್ಯರ್ಥಿಗಳಿದ್ದಾರೆ. ಇವರ ಪೈಕಿ 206 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಎರಡನೇ ಹಂತದ ಚುನಾವಣೆಗಾಗಿ 28,269 ಮತಗಟ್ಟೆಗಳನ್ನು ತೆರೆಯಲಾಗಿದೆ. 12 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಂಡಾಯದ ಕಾರಣ ಶಿವಮೊಗ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ.

ಕಾಂಗ್ರೆಸ್, ಬಿಜೆಪಿ ಪ್ರಮುಖ ನಾಯಕರೆಲ್ಲರೂ ನಾಳೆ ಸಂಜೆ ನಂತರ ಚುನಾವಣೆ ನಡೆಯುತ್ತಿರುವ ಕ್ಷೇತ್ರ ಬಿಟ್ಟು ಹೊರಡಲಿದ್ದಾರೆ. ರಾಜ್ಯದ 14 ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಹಲವಾರು ನಾಯಕರು, ಸಚಿವರು ಹಾಗೂ ಶಾಸಕರು ಉತ್ತರ ಭಾಗದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರಚಾರ ಸಭೆ, ಬಹಿರಂಗ ಸಮಾವೇಶ, ರೋಡ್ ಶೋ, ತಮ್ಮ ತಮ್ಮ ಸಮುದಾಯಗಳ ಸಭೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಯಾಚಿಸಿದ್ದು, ಇಂದು ಮತ್ತು ನಾಳೆ ಪ್ರಚಾರದ ವೇಗ ಮತ್ತಷ್ಟು ಹೆಚ್ಚಾಗಲಿದೆ.

ರಾಜಕೀಯ ಪಕ್ಷಗಳ ನಾಯಕರು ಹಾಗೂ ಮುಖಂಡರು ಬಿಸಿಲಿನ ಹೆಚ್ಚು ತಾಪಮಾನವಿದ್ದರೂ ಲೆಕ್ಕಿಸದೆ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಬಹಿರಂಗ ಪ್ರಚಾರದ ಜೊತೆಗೆ ನಾನಾ ರೀತಿಯ ತಂತ್ರ, ಕಾರ್ಯತಂತ್ರಗಳ ಮೂಲಕ ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಪಕ್ಷೇತರರು ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ 14 ಕ್ಷೇತ್ರಗಳಲ್ಲೂ ಪ್ರಚಾರದ ಕಾವು ಏರತೊಡಗಿದೆ.

ನೇಹಾ ಹತ್ಯೆ, ಪ್ರಜ್ವಲ್ ರೇವಣ್ಣ ಪ್ರಕರಣ ಸದ್ದು: ಮೊದಲ ಹಂತದ ಚುನಾವಣೆಯಲ್ಲಿದ್ದ ವಿಷಯಗಳು ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಬದಲಾಗಿತ್ತು. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣವನ್ನು ಬಿಜೆಪಿ ಪ್ರಧಾನವಾಗಿ ಪರಿಗಣಿಸಿದ್ದರೆ, ಕಾಂಗ್ರೆಸ್ ಪ್ರಜ್ವಲ್ ರೇವಣ್ಣ ಪೆನ್​​ ಡ್ರೈವ್ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುತ್ತಿದೆ. ಕೊನೆ ಹಂತದಲ್ಲಿ ಇನ್ನಷ್ಟು ರಾಜಕೀಯ ದಾಳಗಳು ಉರುಳುವ ಸಾಧ್ಯತೆಯೂ ಇದೆ.

ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ ಹಾಗೂ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿದರೆ ಉಳಿದ 11 ಕ್ಷೇತ್ರಗಳು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಕ್ಕೆ ಸೇರಿವೆ. ಪ್ರಸ್ತುತ 14 ಲೋಕಸಭಾ ಕ್ಷೇತ್ರಗಳಲ್ಲೂ ಪ್ರಜ್ವಲ್‌ ರೇವಣ್ಣ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಇದನ್ನೇ ಪ್ರಚಾರದಲ್ಲಿ ಅಸ್ತ್ರವಾಗಿ ಮಾಡಿಕೊಂಡಿವೆ.

ಈ ನಿಟ್ಟಿನಲ್ಲಿ ಪ್ರಜ್ವಲ್‌ ಪ್ರಕರಣ ರಾಜಕೀಯವಾಗಿ ಈ ಭಾಗದಲ್ಲಿ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಕೆಯಾಗುತ್ತಿಲ್ಲ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದರ ಕುರಿತಾಗಿ ಚರ್ಚೆಗಳು ನಡೆದರೂ ಅದರ ಪರಿಣಾಮ ಏನು ಎಂಬುದು ಕೂಡಾ ಪ್ರಮುಖ ಅಂಶವಾಗಿದೆ. ಆದರೆ ನೇಹಾ ಪ್ರಕರಣವನ್ನು ಬಿಜೆಪಿ ಈ ಭಾಗದಲ್ಲಿ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿರುವುದಕ್ಕೆ ಕೌಂಟರ್‌ ನೀಡಲು ಪೆನ್ ಡ್ರೈವ್ ಪ್ರಕರಣವನ್ನು ಕಾಂಗ್ರೆಸ್‌ ನಾಯಕರು ಬಳಕೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ಭವಾನಿ ರೇವಣ್ಣಗೆ ಎಸ್​ಐಟಿ ನೋಟಿಸ್ - SIT Notice to Bhavani Revanna

Last Updated :May 4, 2024, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.