ಕರ್ನಾಟಕ

karnataka

ಕಾಂಗ್ರೆಸ್​ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ - ವಿಪಕ್ಷ ನಾಯಕ ಆರ್ ಅಶೋಕ್

By ETV Bharat Karnataka Team

Published : Mar 15, 2024, 4:12 PM IST

Updated : Mar 15, 2024, 4:55 PM IST

ಮೋದಿಯವರನ್ನ ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

opposition-leader-r-ashok
ವಿಪಕ್ಷ ನಾಯಕ ಆರ್ ಅಶೋಕ್

ವಿಪಕ್ಷ ನಾಯಕ ಆರ್ ಅಶೋಕ್

ದಾವಣಗೆರೆ :ಕಾಂಗ್ರೆಸ್​ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಇಚ್ಛಿಸಿ ಇಡೀ ದೇಶದಲ್ಲಿ 400ಕ್ಕೂ ಹೆಚ್ಚು ಸೀಟು ಗೆಲ್ಲುವ ಸಲುವಾಗಿ, ದಾವಣಗೆರೆಗೆ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದರು.

ಟಿಕೆಟ್ ನೀಡಿದ ಬಳಿಕ ಏನೇ ಗೊಂದಲ ಇದ್ದರೂ ಮೋದಿ ಅವರನ್ನ ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ. ಟಿಕೆಟ್ ಘೋಷಣೆಯಾದ ಬಳಿಕ ಪ್ರತಿಯೊಂದು ಕಡೆ ಈ ರೀತಿಯ ಕೆಲ ಗೊಂದಲಗಳು ಇರುತ್ತವೆ. ಕಾಂಗ್ರೆಸ್​ನಲ್ಲೂ ಟಿಕೆಟ್ ಘೋಷಣೆಯಾದ ಬಳಿಕ ಈ ರೀತಿಯ ಗೊಂದಲ ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಕೆಲ ದಿನಗಳ ಬಳಿಕ ಎಲ್ಲವೂ ಸುಧಾರಣೆಯಾಗುತ್ತದೆ. ಇನ್ನು ನಮ್ಮ ಪಕ್ಷದಲ್ಲಿ ಯಾರೂ ಕೂಡ ರೆಬಲ್ ಆಗಿ ನಿಲ್ಲುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಅತೃಪ್ತ ಬಣದ ನೇತೃತ್ವ ವಹಿಸಿರುವ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಎಸ್. ಎ ರವೀಂದ್ರನಾಥ್ ಕೂಡ ಹಿರಿಯರು. ಇಬ್ಬರೊಂದಿಗೆ ಮಾತನಾಡುತ್ತೇನೆ. ಇನ್ನು ಈ ಹಿಂದೆ ಎಂ ಪಿ ರೇಣುಕಾಚಾರ್ಯ ಸಿದ್ದೇಶ್ವರ್ ಅವರ ಶಿಷ್ಯ. ಕಳೆದ ಚುನಾವಣೆ ಗೊಂದಲದಿಂದ ಹೀಗೆ ಆಗಿದೆ ಎಂದು ಹೇಳಿದರು.

ಕೇಂದ್ರ ನಾಯಕರು ಈಶ್ವರಪ್ಪ ಅವರನ್ನು ಸಂಪರ್ಕ ಮಾಡಿದ್ದಾರೆ :ಈಶ್ವರಪ್ಪ 45 ವರ್ಷ ಪಕ್ಷದಲ್ಲಿ ದುಡಿದಿದ್ದಾರೆ. ಸಚಿವರು, ಶಾಸಕರು, ಡಿಸಿಎಂ ಆಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಹಾವೇರಿಯಿಂದ ಮಗನಿಗೆ ಟಿಕೆಟ್​ ಸಿಕ್ಕಿಲ್ಲ ಎಂದು ಹೀಗೆ ಮಾತನಾಡಿರಬಹುದು. ಎಲ್ಲಾ ಸರಿಯಾಗುತ್ತೆ ಎಂದರು.

ಕೇಂದ್ರ ನಾಯಕರು ಈಗಾಗಲೇ ಈಶ್ವರಪ್ಪ ಅವರನ್ನು ಸಂಪರ್ಕ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಸರಿಯಾಗುತ್ತೆ ಎಂದರು. ಬೆಂಗಳೂರಿನ ಅರಮನೆ ಮೈದಾನದ ವಿವಾದ ಪ್ರಕರಣಕ್ಕೆ ಮರು ಜೀವ ನೀಡಲು ಹೊರಟ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೂ ಕೂಡ ದ್ವೇಷದ ರಾಜಕಾರಣ ಮಾಡಬಾರದು. ದ್ವೇಷದ ಬಾಣ ತಿರುಗಿ ನಿಮ್ಮ ಕಡೆ ಬರಬಹುದು. ಅಧಿಕಾರ ಇವತ್ತು ಇರುತ್ತೆ ನಾಳೆ ಹೋಗುತ್ತೆ. ಯಾರು ಇಲ್ಲಿ ಶಾಶ್ವತವಾಗಿ ಇರಲ್ಲ. ಸಿದ್ದರಾಮಯ್ಯ ಈ ಹಿಂದೆ ವಿರೋಧ ಪಕ್ಷದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಮೈಸೂರು ರಾಜರ ಮೇಲೆ ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆ ಬೆಳಗಾವಿಯಲ್ಲಿ ಫಿಕ್ಸ್ :ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜೊತೆ ಈಗಾಗಲೇ ಹೈಕಮಾಂಡ್ ಮಾತನಾಡಿದೆ. ಬೆಳಗಾವಿಯಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದರು. ಕಾಂಗ್ರೆಸ್​ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ. ಬೆಂಗಳೂರು ಗ್ರಾಮಾಂತರಕ್ಕೆ ಗೆಲ್ಲುವಂತಹ ಅಭ್ಯರ್ಥಿಗೆ ಬಿಜೆಪಿ ಟಿಕೆಟ್​ ನೀಡಿದೆ. ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಡಿ ಕೆ ಸುರೇಶ್​ಗೆ ಟಾಂಗ್ ಕೊಟ್ರು.

ಅತೃಪ್ತರನ್ನು ನಮ್ಮ ಹಿರಿಯರು ಕರೆದು ಮಾತನಾಡಿಸುತ್ತಾರೆ - ಬೈರತಿ ಬಸವರಾಜ್ : ಹಾಲಿ ಸಂಸದ ಜಿ ಎಂ‌ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್​ಗೆ ಹೈಕಮಾಂಡ್ ಮಣೆ ಹಾಕಿದ ಬೆನ್ನಲ್ಲೇ ಅತೃಪ್ತ ಬಣದ ಆಕ್ರೋಶ ತಾರಕಕ್ಕೇರಿದೆ. ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ನೇತೃತ್ವದ ಅತೃಪ್ತ ಬಣ ಬಿಜೆಪಿ ಘೋಷಣೆ ಮಾಡಿರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಎಂದು ಪಟ್ಟು ಹಿಡಿದಿದೆ.

ದಾವಣಗೆರೆ ಜಿಲ್ಲಾ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆಗೆ ವಿಪಕ್ಷ ನಾಯಕ ಆರ್ ಅಶೋಕ್ ಹಾಗು ಜಿಲ್ಲಾ ಚುನಾವಣಾ ಉಸ್ತುವಾರಿ ಬೈರತಿ ಬಸವರಾಜ್ ಆಗಮಿಸಿದರೂ ಕೂಡ ಅತೃಪ್ತರ ಬಣ ಇತ್ತ ತಲೆಹಾಕಿಲ್ಲ. ಈ ವಿಚಾರ ಈಗಾಗಲೇ ಸಂಸದ ಜಿ ಎಂ‌ ಸಿದ್ದೇಶ್ವರ್ ಅವರು ರಾಜ್ಯ ನಾಯಕರ ಗಮನಕ್ಕೆ ತಂದಿದ್ದು, ಸರಿಪಡಿಸುವುದಾಗಿ ರಾಜ್ಯ ನಾಯಕರು ಮಾತು ಕೊಟ್ಟಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ದಾವಣಗೆರೆಯಲ್ಲಿ ಚುನಾವಣಾ ಉಸ್ತುವಾರಿ ಬೈರತಿ ಬಸವರಾಜ್ ಪ್ರತಿಕ್ರಿಯಿಸಿ, ಅತೃಪ್ತರನ್ನು ನಮ್ಮ ಹಿರಿಯರು ಕರೆದು ಮಾತನಾಡುವ ಕೆಲಸ ಮಾಡಲಿದ್ದಾರೆ. ದೇಶದ ಪ್ರತಿಯೊಬ್ಬ ಮತದಾರರರೂ ಕೂಡ ಬಿಜೆಪಿಗೆ ಮತ ಹಾಕಲು ಕಾತರದಿಂದ ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಬಿಜೆಪಿ ಪಕ್ಷದಲ್ಲಿ ಡ್ಯಾಮೇಜ್ ಮುಂದುವರೆಯೋದಿಲ್ಲ. ಟಿಕೆಟ್ ಕೇಳೋದು ಸಹಜ. ಸಿಕ್ಕಿಲ್ಲ ಎಂದರೆ ಬೇಸರ ಕೂಡ ಸಹಜ. ಅವರನ್ನೆಲ್ಲ ನಮ್ಮ ಪಕ್ಷದ ನಾಯಕರು ಮಾತನಾಡಿಸಿ ಸರಿಪಡಿಸುತ್ತಾರೆ ಎಂದರು.

ಇದನ್ನೂ ಓದಿ :ಜೆಡಿಎಸ್​ಗೆ ಎಷ್ಟು ಸ್ಥಾನ, ಯಾವ ಕ್ಷೇತ್ರ ಎನ್ನುವುದು ಇಂದು ನಿರ್ಧಾರವಾಗುತ್ತೆ: ಆರ್​ ಅಶೋಕ್

Last Updated : Mar 15, 2024, 4:55 PM IST

ABOUT THE AUTHOR

...view details