ಕರ್ನಾಟಕ

karnataka

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಕರೆತರಲು ಎಸ್ಐಟಿ ಪ್ರಯತ್ನ ಮಾಡುತ್ತಿದೆ- ಡಾ.ಜಿ. ಪರಮೇಶ್ವರ್ - HASSAN PEN DRIVE CASE

By ETV Bharat Karnataka Team

Published : May 1, 2024, 12:33 PM IST

Updated : May 1, 2024, 3:31 PM IST

''ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಕರೆತರಲು ಎಸ್ಐಟಿ ಪ್ರಯತ್ನ ಮಾಡುತ್ತಿದೆ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

G Parameshwara Prajwal Revanna  SIT  Bengaluru
ಡಾ.ಜಿ. ಪರಮೇಶ್ವರ್

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಕರೆತರಲು ಎಸ್ಐಟಿ ಪ್ರಯತ್ನ ಮಾಡುತ್ತಿದೆ- ಡಾ.ಜಿ. ಪರಮೇಶ್ವರ್

ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ''ಯಾರನ್ನೇ ಆದರೂ ಏಕಾಏಕಿ ಬಂಧಿಸುವುದಿಲ್ಲ. ಅದಕ್ಕೆ ಸಂಬಂಧಿಸಿದ ಪುರಾವೆಗಳು, ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಮುಖ್ಯವಾಗುತ್ತವೆ'' ಎಂದು ಹೇಳಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರಕರಣ ಯಾವ ಸೆಕ್ಷನ್ ಅಡಿಯಲ್ಲಿ ಬರುತ್ತದೆ? ಅದರಲ್ಲಿ ಬಂಧಿಸಲು ಅವಕಾಶ ಇದೆಯೇ? ಜಾಮೀನು ಪಡೆಯುವಂತಹ ಪ್ರಕರಣವೇ? ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ. ಸಿಆರ್​ಪಿಸಿ ಸೆಕ್ಷನ್ 41a ಅಡಿ‌ ಎಸ್​ಐಟಿ ನೋಟಿಸ್ ಕೊಟ್ಟಿದ್ದಾರೆ. ಅದರಂತೆ, ಆರೋಪ ಹೊತ್ತವರು 24 ಗಂಟೆಯ ಒಳಗೆ ಬಂದು ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗದೇ ಹೋದರೆ ಎಸ್​ಐಟಿ ತಂಡ ಮುಂದಿನ ಪ್ರಕ್ರಿಯೆ ಮಾಡಲಿದೆ. ನಾವು ಎಸ್​ಐಟಿ ರಚನೆ ಮಾಡಿ ತನಿಖೆಗೆ ವಹಿಸಿದ್ದೇವೆ'' ಎಂದರು.

''ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವುದು ಗೊತ್ತಾಗಿದೆ. ಪ್ರಜ್ವಲ್ ಅವರನ್ನು ಕರೆತರಲು ಎಸ್ಐಟಿ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಕೇಂದ್ರದ ಸಹಾಯ ಬೇಕಾಗಬಹುದು ಅಥವಾ ಎಸ್​ಐಟಿ ತಂಡದವರೇ ಕರೆದುಕೊಂಡು ಬರಬಹುದು'' ಎಂದು ಪರಮೇಶ್ವರ್ ತಿಳಿಸಿದರು.

ಎಸ್​ಐಟಿ ರಚನೆ ಬಳಿಕವೂ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಲೀಕ್ ಆದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ''ಅದೆಲ್ಲವನ್ನು ಎಸ್​ಐಟಿ ತಂಡ ಗಮನಿಸುತ್ತದೆ. ಅದಕ್ಕೆ ನಾವೇನೂ ಹೇಳಲು ಬರುವುದಿಲ್ಲ'' ಎಂದರು.

''ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವಂತಹದ್ದು ಏನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಇದರಲ್ಲಿ ಬಹಳ ಜನರ ಜೀವನದ ಪ್ರಶ್ನೆ ಇದೆ. ಇಷ್ಟ ಬಂದ ಹಾಗೆ ತನಿಖೆ‌ ಮಾಡಲು ಆಗುವುದಿಲ್ಲ. ಹಾಗಾಗಿಯೇ ಎಸ್​ಐಟಿ ರಚನೆ ಮಾಡಿದ್ದೇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತನಿಖಾ ವರದಿ ಬರುವವರೆಗೂ ಹೇಳಿಕೆ ಕೊಡಬಾರದು:''ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಆರೋಪ ಪ್ರತ್ಯಾರೋಪಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬಹಳ ಜನ ಅದರ ಬಗ್ಗೆ ಹೇಳಿಕೆ ಕೊಡ್ತಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ತನಿಖಾ ವರದಿ ಬಂದ ಮೇಲೆ ಏನು ಸತ್ಯಾಸತ್ಯತೆ ಇದೆ ಎಂಬುದರ ಮೇಲೆ ಕ್ರಮ ಆಗುತ್ತದೆ‌. ತನಿಖಾ ವರದಿ ಬರುವವರೆಗೂ ಯಾರೂ ಹೇಳಿಕೆ ಕೊಡಬಾರದು'' ಎಂದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್ ಅಂತರ ಕಾಯ್ದುಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಅದು ಅವರ ಪಕ್ಷದ ಆಂತರಿಕ ವಿಚಾರ. ಯಾವ ನಿಲುವನ್ನಾದರೂ ತೆಗೆದುಕೊಳ್ಳಲಿ. ಅದು ಅವರಿಗೆ ಬಿಟ್ಟಿದ್ದು'' ಎಂದು ವ್ಯಂಗ್ಯವಾಡಿದರು.

''ಚುನಾವಣೆ ಮುಗಿದ ನಂತರವೂ ಯಾವ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಪದೇ ಪದೇ ಪ್ರತಿಪಕ್ಷದವರು ಚುನಾವಣಾ ಭಾಷಣಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಸೇರಿದಂತೆ ನಾವೂ ಸಹಿತ ಮತ್ತೆ ಹೇಳುತ್ತಿದ್ದೇವೆ. ಚುನಾವಣೆ ನಂತರವೂ ಈ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ'' ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಲೋಕಸಮರ: ಕಾರ್ಯಚಟುವಟಿಕೆ ಇಲ್ಲದೆ ವಿಧಾನಸೌಧ ಬಿಕೋ; ನೀತಿ ಸಂಹಿತೆ ಸಡಿಲಿಕೆಗೆ ಮನವಿಗೆ ಚಿಂತನೆ - Vidhana Soudha

Last Updated :May 1, 2024, 3:31 PM IST

ABOUT THE AUTHOR

...view details