ಕರ್ನಾಟಕ

karnataka

ನರೇಂದ್ರ ಮೋದಿ ಸುಳ್ಳುಗಾರ, ಹತ್ತು ವರ್ಷ ಸಂವಿಧಾನ ವಿರೋಧಿ ಆಡಳಿತ: ಸಿಎಂ ಸಿದ್ದರಾಮಯ್ಯ ಆಕ್ರೋಶ - CM Siddaramaiah

By ETV Bharat Karnataka Team

Published : Apr 30, 2024, 9:42 AM IST

Updated : Apr 30, 2024, 11:12 AM IST

''ನರೇಂದ್ರ ಮೋದಿ ಸುಳ್ಳುಗಾರ, ಹತ್ತು ವರ್ಷ ಸಂವಿಧಾನ ವಿರೋಧಿ ಆಡಳಿತ ನಡೆಸಿದ್ದಾರೆ'' ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Narendra Modi  Koppal  Lok Sabha election 2024  DK Shivakumar
ನರೇಂದ್ರ ಮೋದಿ ಸುಳ್ಳುಗಾರ, ಹತ್ತು ವರ್ಷ ಸಂವಿಧಾನ ವಿರೋಧಿ ಆಡಿಳಿತ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಕೊಪ್ಪಳ:''ಕೇಂದ್ರದಲ್ಲಿ ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿ ಆಗಿ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ಮಾಡಿದ್ದಾರೆ. ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ದಲಿತರು, ಬಡವರು, ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ'' ಎಂದು ಸಿಎಂ ಸಿದ್ಧರಾಮಯ್ಯ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದರು.

ಕೊಪ್ಪಳದ ಕುಷ್ಟಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿ, ''ಬೆಲೆ ಏರಿಕೆ ಪರಿಣಾಮ ಸಾಮಾನ್ಯರ ಬದುಕನ್ನು ಬೀದಿಗೆ ತಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಆಶೀರ್ವಾದ ಮಾಡಿದರು. ಬಿಜೆಪಿ ರಾಜ್ಯದಲ್ಲಿ ಗೆಲ್ಲುವ ಆಸೆ ಇಟ್ಟುಕೊಂಡಿದ್ದರು. ಅವರ ಆಸೆ ಹುಸಿ ಮಾಡಿ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ಐದು ಗ್ಯಾರಂಟಿ ಘೋಷಣೆ ಮಾಡಿ ಗ್ಯಾರಂಟಿ ಚೆಕ್​ಗೆ ಸಹಿ ಮಾಡಿ ಮನೆ ಮನೆಗೆ ಹಂಚಿಕೆ ಮಾಡಿದ್ದೆವು. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಜಾರಿ ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ'' ಎಂದರು.

ಕಳೆದ ಹತ್ತು ವರ್ಷದಲ್ಲಿ ಮೋದಿ ಏನೂ ಮಾಡಿಲ್ಲ- ಸಿದ್ದರಾಮಯ್ಯ:ಕಳೆದ ಹತ್ತು ವರ್ಷದಲ್ಲಿ ಸಮುದಾಯಗಳ ಮಧ್ಯೆ ದ್ವೇಷ ಬೆಳೆಸುವ ಕೆಲಸವನ್ನು ಬಿಟ್ಟು ನರೇಂದ್ರ ಮೋದಿ ಮತ್ತೇನನ್ನೂ ಮಾಡಿಲ್ಲ. ಮೋದಿ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಆದರೆ, ಕೊಡಲಿಲ್ಲ. ಬದಲಿಗೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ನಾಲ್ಕು ವರ್ಷ ಇರಲಿದ್ದು, ಪ್ರತಿ ತಿಂಗಳು ಬರುತ್ತವೆ. ನಾವು ನುಡಿದಂತೆ ನಡೆದಿದ್ದೇವೆ. ಮೋದಿ‌ ಸುಳ್ಳುಗಾರ. ಎಲ್ಲಿದೆ ಅಚ್ಛೇ ದಿನ್, ರೈತರ ಆದಾಯ ದ್ವಿಗುಣವಾಗಲಿಲ್ಲ, ಅಗತ್ಯ ವಸ್ತುಗಳ ಬೆಲೆ ಇಳಿಯಲಿಲ್ಲ. ಜನರ ಖಾತಗೆ ಹಣ ಬರಲಿಲ್ಲ. ಹತ್ತು ವರ್ಷ ಸುಳ್ಳು ಹೇಳುವುದರಲ್ಲೇ ಕಳೆದರು'' ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ:''ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಮೊದಲ ವರ್ಷ 36 ಸಾವಿರ ಕೋಟಿ ರೂ. ವ್ಯಯ ಆಯ್ತು. ಶಕ್ತಿ ಯೋಜನೆಯಡಿ 200 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತು. ಇದು ಬಿಜೆಪಿ ಜನರಿಗೆ ಮಾಡಿದ ದೊಡ್ಡ ದ್ರೋಹ. ಆದರೂ ನಾವು ಐದು ಕೆಜಿ ಅಕ್ಕಿ ಮೊತ್ತವನ್ನು ನಿಮ್ಮ ಖಾತೆಗೆ ಹಾಕುತ್ತಿದ್ದೇವೆ. 1.5 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿವೆ. ಗೃಹ ಲಕ್ಷ್ಮೀ ಯೋಜನೆಯಡಿ 1.20 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2 ಸಾವಿರ ರೂ. ಹಾಕಲಾಗುತ್ತಿದೆ. ಯುವನಿಧಿಯಡಿ ಯುವಕರಿಗೆ ಸಹಾಯಧನ, ಗೃಹ ಜ್ಯೋತಿ ಅಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ನಾವು ನುಡಿದಂತೆ ನಡೆಯುತ್ತೇವೆ'' ಎಂದು ತಿಳಿಸಿದರು.

''ರಾಜ್ಯದಲ್ಲಿ ಬಿಜೆಪಿ ಈ ಹಿಂದೆ ಮೂರು ವರ್ಷ ಹತ್ತು ತಿಂಗಳು ಅಧಿಕಾರ ನಡೆಸಿದರೂ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ. ಬಡವರು, ರೈತರು, ದಲಿತರು, ಅಲ್ಪಸಂಖ್ಯಾತ, ಹಿಂದುಳಿದವರು, ರೈತರು, ಮಹಿಳೆಯರಿಗೆ ಏನೂ ಮಾಡಿಲ್ಲ. ಬದಲಿಗೆ ರಾಜ್ಯ ಲೂಟಿ ಹೊಡೆಯುತ್ತಿದ್ದರು. ಗುತ್ತಿಗೆದಾರರು ತನಿಖೆಗೆ ಆಗ್ರಹಿಸಿದರು. ಬೊಮ್ಮಾಯಿ ತನಿಖೆ ನಡೆಸಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಆಯೋಗ ರಚಿಸಿ ತನಿಖೆಗೆ ಸೂಚಿಸಿದ್ದೇವೆ. ತಪ್ಪಿತಸ್ಥರು ಎಂದು ಗೊತ್ತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾಜ್ಯ ರಕ್ಷಿಸುತ್ತೇವೆ'' ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಪಿಎಂ ಅಭ್ಯರ್ಥಿ ಯಾರೆಂದು ಕೇಳುವ ನೈತಿಕತೆ ನಿಮಗಿಲ್ಲ:ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಸೇರಿ ಇತರ ನಾಯಕರು ಮೋದಿಗೆ ಯಾವುದರಲ್ಲಿ ಕಡಿಮೆ ಇದ್ದಾರೆ? ಕಾಂಗ್ರೆಸ್​ನಲ್ಲಿ ಪಿಎಂ‌ ನಾಯಕರಿಲ್ಲ ಎಂದು ಸುಳ್ಳು ಹೇಳುತ್ತಾರೆ. ರಾಜ್ಯದಲ್ಲಿ‌ ಬಿಜೆಪಿ ಅಧಿಕಾರದಲ್ಲಿದ್ದಾಗ ಮೂರು ಜನ ಸಿಎಂ ಬದಲಿಸಿದರು. 2013- 2018 ವರೆಗೆ ನಾನೊಬ್ಬನೇ ಸಿಎಂ ಆಗಿ ಆಡಳಿತ ಮಾಡಿರುವೆ. ಇದರಿಂದ ಯಾರಲ್ಲಿ ನಾಯಕರ ಕೊರತೆ ಇದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್​ನಲ್ಲಿ ಪಿಎಂ ಅಭ್ಯರ್ಥಿ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ'' ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು.

''ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ, ಯುವಕರಿಗೆ ವರ್ಷಕ್ಕೆ ಒಂದು ಲಕ್ಷ‌ರೂ ಕೊಡುತ್ತೇವೆ. ರೈತರ ಎಲ್ಲ ಸಾಲ ಮನ್ನಾ ಮಾಡುತ್ತೇವೆ. ಪ್ರವಾಹ, ಬರ ಬಂದಾಗ ರಾಜ್ಯಕ್ಕೆ ಬರದವರು ಚುನಾವಣೆ ಬಂದಾಗಲಷ್ಟೇ ರಾಜ್ಯಕ್ಕೆ ಬರುತ್ತಾರೆ. ಸುಳ್ಳು ಹೇಳಿ ಮತ ಪಡೆಯುತ್ತಾರೆ. ಇದಕ್ಕೆ ನೀವು ಅವಕಾಶ ನೀಡಬೇಡಿ. ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಿ ಕೇಂದ್ರದಲ್ಲಿ ನಮಗೆ ಅಧಿಕಾರ ಮಾಡಲು ಅವಕಾಶ ಕೊಡಿ'' ಎಂದರು.

ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ ವಾಗ್ದಾಳಿ:''ಕಮಲ ಕೆಸರಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಅದರಂತೆ ನೀವೆಲ್ಲ ಆಶೀರ್ವಾದ ಮಾಡಿದ್ದಿರಿ. ಅದರಂತೆ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಎಲ್ಲ ಯೋಜನೆ ಜಾರಿ ಮಾಡಿದ್ದೇವೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಪ್ಪಳದ ಕುಷ್ಟಗಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿ, ''ಕೆಲ ತಿಂಗಳ ಹಿಂದೆ ಗವಿಸಿದ್ದೇಶ್ವರ ಜಾತ್ರೆ ಕಣ್ತುಂಬಿಕೊಳ್ಳಲು ಕೊಪ್ಪಳಕ್ಕೆ ಬಂದಿದ್ದೆ. ನನ್ನ ನಲವತ್ತು ವರ್ಷದ ರಾಜಕಾರಣದಲ್ಲಿ ಅಷ್ಟು ದೊಡ್ಡ ಜನಸಂಖ್ಯೆ ಸೇರಿರುವುದನ್ನ ನಾನು ಕಂಡಿರಲಿಲ್ಲ. ಗವಿಸಿದ್ದೇಶ್ವರ ಶ್ರೀಗಳಿಗೆ ಇಲ್ಲಿಂದಲೇ ನಮಿಸುವೆ. ಕೊಪ್ಪಳದ ರೈತರ ಜೀವನಾಡಿ ತುಂಗಭದ್ರಾ ನದಿ ನೀರು ಖಾಲಿ ಆಗಿದೆ. ನವಲಿ ಜಲಾಶಯ ನಿರ್ಮಿಸಬೇಕಿದೆ. ಈ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದೇವೆ. ಚುನಾವಣೆ ಮುಗಿದ ಬಳಿಕ ಆಂಧ್ರ, ತೆಲಂಗಾಣ ಸರ್ಕಾರದೊಂದಿಗೆ ಮಾತನಾಡಿ ಮುಂದುವರೆಯಲಾಗುವುದು. ಸುಮಾರು 30 ಟಿಎಂಸಿ ಅಡಿ ನೀರು ಪ್ರತಿವರ್ಷ ನಷ್ಟ ಮಾಡಿಕೊಳ್ಳಲು ನಾವು ಇಷ್ಟಪಡುವುದಿಲ್ಲ'' ಎಂದರು.

ಸಂಗಣ್ಣ ಕರಡಿ ಪಕ್ಷ ಸೇರ್ಪಡೆಯಿಂದ ಶಕ್ತಿ ಬಂದಿದೆ-ಡಿಕೆಶಿ: ''ಕಳೆದ‌ ಬಾರಿ ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಕುದುರೆ ಸೋತಿತ್ತು. ಸಂಗಣ್ಣ ಕರಡಿ ಗೆದ್ದಿದ್ದರು. ಈಗ ಸಂಗಣ್ಣ ನಮ್ಮೊಂದಿಗಿದ್ದಾರೆ. ನಮಗೆ ಇನ್ನಷ್ಟು ಶಕ್ತಿ ಬಂದಿದೆ'' ಎಂದ ಅವರು, ''ನೀವು ಆಶೀರ್ವಾದ ಮಾಡಿ. ಸಿಎಂ ಸಿದ್ದರಾಮಯ್ಯ ಬಸವಣ್ಣ ಅವರ ತತ್ವ ಅನುಸಾರ ಕೆಲಸ ಮಾಡುತ್ತಿದ್ದಾರೆ. ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ‌ನಾಯಕನೆಂದು ಘೋಷಿಸಿದ್ದೇವೆ'' ಎಂದರು.

ಕೇಂದ್ರ ಸರಕಾರ ನಮ್ಮ ರಾಜ್ಯದ ಯೋಜನೆಗಳಿಗೆ ಸಹಕರಿಸಿಲ್ಲ:''ರಾಜ್ಯದ ಜ್ವಲಂತ ಸಮಸ್ಯೆಗಳಾದ ಮಹದಾಯಿ, ಮೇಕೆದಾಟು ಯೋಜನೆಗಳು ನನೆಗುದಿಗೆ ಬಿದ್ದಿವೆ. ಈ ಹಿಂದೆ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ಯೋಜನೆಗಳಿಗೆ ಸಹಕರಿಸಿಲ್ಲ. ಬಿಜೆಪಿ ರೈತರ ಆದಾಯ ದ್ವಿಗುಣ ಮಾಡುತ್ತೇವೆ. ಖಾತೆಗೆ 15 ಲಕ್ಷ‌ ರೂ.‌ ಹಾಕುತ್ತೇವೆ. ಉದ್ಯೋಗ ಕೊಡುತ್ತೇವೆ. ಆದರೆ, ಅವರು ಮಾಡಿದ್ದೇನು? ಅವರು ಹೇಳಿದ ಯಾವೊಂದು ಕೆಲಸ ಮಾಡಲಿಲ್ಲ. ನಾವು ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆ ಕೊಟ್ಟಿದ್ದೇವೆ. ಮನಮೋಹನಸಿಂಗ್ ಸರ್ಕಾರ ಆಹಾರ ಭದ್ರತೆ, ನರೇಗಾ, 371(ಜೆ) ಜಾರಿ ಮಾಡಿದರು. ಆದರೆ, ಬಿಜೆಪಿಯವರು ಒಂದಾದರು ಜನಪರ ಯೋಜನೆ ಜಾರಿ ತಂದಿದ್ದೀರಾ? ಇಲ್ಲ. ಧರ್ಮ, ಜಾತಿ ಜಗಳ ಹಚ್ಚುತ್ತಾರೆ. ಅವರು ಕತ್ತರಿ ಜನರ ಮನಸ್ಸು ಕತ್ತರಿಸುತ್ತಾರೆ. ನಾವು ಸೂಜಿ ಇದ್ದಂತೆ ಮತ್ತೆ ಒಂದು ಮಾಡಲು ಹೊಲಿಗೆ ಹಾಕುತ್ತೇವೆ'' ಎಂದು ಹೇಳಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಐದು ಯೋಜನೆ ಜಾರಿ:''ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಐದು ಯೋಜನೆಗಳನ್ನ ಜಾರಿ ಮಾಡುತ್ತೇವೆ. ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ.‌ ಕೊಡುತ್ತೇವೆ. ಭಾಗ್ಯದ ಲಕ್ಷ್ಮೀ ಬಾರಮ್ಮ.. ನಮ್ಮಮ್ಮ ನೀ ಸೌಭಾಗ್ಯ ಲಕ್ಷ್ಮೀ ಬಾರಮ್ಮ‌ ಎಂದು ಬಾಗಿಲು ತೆಗೆದು ಲಕ್ಷ್ಮೀಯನ್ನು ಮನೆ ಒಳಗೆ ಕರೆದುಕೊಳ್ಳಿ. ಅದು ಬಿಟ್ಟು ಬಾಗಿಲು ಮುಚ್ಚಿಕೊಂಡು ಕೂತರೆ ಲಕ್ಷ್ಮೀ ಮುಂದೆ ಹೋಗುತ್ತಾಳೆ. ಬಿಜೆಪಿ ರಾಜ್ಯಾಧ್ಯಕ್ಷ, ಯಡಿಯೂರಪ್ಪನ ಮಗ ವಿಜಯೇಂದ್ರ ಗ್ಯಾರಂಟಿ ಯೋಜನೆ ನಿಂತು ಹೋಗುತ್ತದೆ ಎನ್ನುತ್ತಾರೆ. ನಮ್ಮ ಯೋಜನೆ ನಿಲ್ಲಿಸುವ ತಾಕತ್ತು ನಿಮಗಿಲ್ಲ. ಜನ ಅಷ್ಟು ಸುಲಭಕ್ಕೆ ನಮ್ಮ ಸರ್ಕಾರ ಕೈ ಬಿಡುವುದಿಲ್ಲ.‌ ಜನರದು ನಮ್ಮದು ಭಕ್ತ ಮತ್ತು ಭಗವಂತನ ಸಂಬಂಧ. ಹೆಚ್​ಡಿಕೆ ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎನ್ನುತ್ತಾರೆ. ಈಗ ಯಾರು ದಾರಿ ತಪ್ಪಿದ್ದಾರೆಂಬುದನ್ನು ಅವರೇ ನೋಡಿಕೊಳ್ಳಲಿ'' ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ಇದನ್ನೂ ಓದಿ:ಮೋದಿ ಕಾಂಗ್ರೆಸ್​ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಮಲ್ಲಿಕಾರ್ಜುನ ಖರ್ಗೆ - Mallikarjuna kharge

Last Updated : Apr 30, 2024, 11:12 AM IST

ABOUT THE AUTHOR

...view details