ಕರ್ನಾಟಕ

karnataka

ಮೂವರನ್ನು ಬಲಿ ಕಾ ಬಕ್ರಾ ಮಾಡಲು ಬಿಜೆಪಿಯಲ್ಲಿ ಸಿದ್ಧತೆ: ಲಕ್ಷ್ಮಣ ಸವದಿ ಲೇವಡಿ - Lakshmana Savadi Displeasure

By ETV Bharat Karnataka Team

Published : Mar 25, 2024, 5:47 PM IST

Updated : Mar 25, 2024, 7:59 PM IST

ಬಿಜೆಪಿ ಪಕ್ಷದಲ್ಲಿ ಇದ್ದ ತತ್ವ ಸಿದ್ಧಾಂತಗಳು ಈಗ ಇಲ್ಲ. ಪಕ್ಷ ಗೆಲ್ಲಲು ಯಾರು ಬೇಕೋ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

MLA Lakshmana Savadi
ಶಾಸಕ ಲಕ್ಷ್ಮಣ ಸವದಿ

ಚಿಕ್ಕೋಡಿ: "ರಂಜಾನ್ ತಿಂಗಳಲ್ಲಿ ಬಿಜೆಪಿ ನಾಯಕರು ಮೂವರನ್ನು ಬಲಿ ಕಾ ಬಕ್ರಾ ಮಾಡುವುದಕ್ಕೆ ಸಿದ್ಧತೆ ಮಾಡಿದ್ದಾರೆ" ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಲಕ್ಷ್ಮಣ ಸವದಿ

ಸೋಮವಾರ ಅಥಣಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ಮೂರು ಬಲಿ ಕಾ ಬಕ್ರಾ ತಯಾರು ಮಾಡಲಾಗಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್, ತುಮಕೂರಲ್ಲಿ ವಿ.ಸೋಮಣ್ಣ, ಕೊಪ್ಪಳದಲ್ಲಿ ಡಾ.ಬಸವರಾಜ್ ಕ್ಯಾವಟರ್ ಬಲಿ ಕಾ ಬಕ್ರಾ ಆಗುತ್ತಾರೆ. ಬಿಜೆಪಿ ಪಕ್ಷ ಯಾವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ ಮಾಡುತ್ತದೆ ಗೊತಿಲ್ಲ. ನಾನು 25 ವರ್ಷ ಬಿಜೆಪಿ ಪಕ್ಷದಲ್ಲಿ ಇದ್ದ ಕಾರಣ ನನಗೂ ಸದ್ಯದ ಆ ವ್ಯವಸ್ಥೆ ನೋಡಿ ಮರುಕು ಹುಟ್ಟಿದೆ. ಮನಸಿಗೆ ಒಂದು ರೀತಿಯ ಘಾಸಿ ಆಗುತ್ತದೆ. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದ ಈ ಪಕ್ಷವನ್ನು ಬೆಳೆಸುತ್ತೇನೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ" ಎಂದು ಶಾಸಕ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪಗೆ ಟಾಂಗ್:"ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಅಲ್ಲಿ ವಿ. ಸೋಮಣ್ಣ ಅವರಿಗೆ ಟಿಕೆಟ್ ಕೊಡಲಾಗಿದೆ. ಇದರಿಂದ ಹಲವು ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಆ ಅಸಮಾಧಾನ ಹೋಗಲಾಡಿಸಲು ಯಡಿಯೂರಪ್ಪ ಅವರು ಸಂಧಾನಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಮಾಧ್ಯಮದವರು ಬಿಎಸ್​ವೈ ಅವರಿಗೆ ಮಾಧುಸ್ವಾಮಿ ಪ್ರಚಾರಕ್ಕೆ ಹೋಗುತ್ತಾರಾ ಎಂದು ಕೇಳಿದರೆ, ಯಡಿಯೂರಪ್ಪ ಮಾಧುಸ್ವಾಮಿ ಪ್ರಚಾರಕ್ಕೆ ಹೋಗುತ್ತಾರಾ ಗೊತ್ತಿಲ್ಲ. ಸೋಮಣ್ಣ ಅವರನ್ನು ಗೆಲ್ಲಿಸುತ್ತೇವೆ ಅಂತ ಹೇಳುವುದಿಲ್ಲ. ಇದರಿಂದಲೇ ಗೊತ್ತಾಗುತ್ತದೆ. ರಂಜಾನ್ ತಿಂಗಳಲ್ಲಿ ಬಲಿ ಕಾ ಬಕ್ರಾಗಳು ತಯಾರಾಗಿದ್ದಾರೆ" ಎಂದು ಸವದಿ ವ್ಯಂಗ್ಯವಾಡಿದರು.

ಜರ್ನಾದನ ರೆಡ್ಡಿ ಬಿಜೆಪಿ ಪಕ್ಷಕ್ಕೆ ವಾಪಸ್​ ಆದ ಕುರಿತು ಮಾತನಾಡಿ, "ಪ್ರಾದೇಶಿಕ ಪಕ್ಷಗಳಿಗೆ ಈ ರಾಜ್ಯದಲ್ಲಿ ಯಾವುದೇ ನೆಲೆ ಇಲ್ಲದೇ ಇರುವುದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮನವರಿಕೆ ಆಗಿರುವುದರಿಂದ ಬಿಜೆಪಿ ಪಕ್ಷಕ್ಕೆ ಮತ್ತೆ ವಾಪಸ್​ ಆಗಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ತತ್ವ ಸಿದ್ಧಾಂತ ಉಳಿದಿಲ್ಲ. ಚಾರಿತ್ರ್ಯವಂತರು ಚಾರಿತ್ರ್ಯಹೀನರು ಎಂಬುವುದನ್ನು ಬಿಜೆಪಿ ನೋಡುತ್ತಿಲ್ಲ. ಬಿಜೆಪಿ ಪಕ್ಷ ಗೆಲ್ಲುವುದಕ್ಕೆ ಯಾರನ್ನು ಬೇಕಾದರೂ ಸೇರಿಸಿಕೊಳ್ಳುತ್ತಿದೆ. ಎಲ್ಲರನ್ನೂ ಬಿಜೆಪಿ ಸ್ವಾಗತ ಮಾಡುತ್ತಿದೆ. ಸದ್ಯಕ್ಕೆ ಬಿಜೆಪಿಯಲ್ಲಿ ಪವರ ಪಾಲಿಟಿಕ್ಸ್ ನಡೆಯುತ್ತಿದೆ. ತಮ್ಮ ಪಕ್ಷವನ್ನು ದಡ ಸೇರಿಸಲು ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ ಅಷ್ಟೇ. ರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ನಾವು ಆಹ್ವಾನ ನೀಡಿಲ್ಲ" ಎಂದು ಲಕ್ಷ್ಮಣ್ ಸವದಿ ಹೇಳಿದರು.

"ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿದೆ. ಇದರಿಂದ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ. ಚಿಕ್ಕೋಡಿ, ಬೆಳಗಾವಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಚ್ಚಳವಾಗಿದೆ. ಬೆಳಗಾವಿಯಲ್ಲಿ ಮಂಗಳ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸಿ ಅವಮಾನ ಮಾಡಿದ್ದಾರೆ. ಬೆಳಗಾವಿಯಲ್ಲಿ ತುಂಬಾ ಜನರು ಆಕಾಂಕ್ಷಿಗಳಿದ್ದರೂ ಬಿಜೆಪಿ ಪಕ್ಷ ಆಕಾಂಕ್ಷಿಗಳಿಗೆ ಟಿಕೆಟ್ ಕೊಟ್ಟಿಲ್ಲ. ಬಿಜೆಪಿಯಲ್ಲಿ ವ್ಯವಸ್ಥಿತವಾಗಿ ಕೆಲವರನ್ನು ರಂಜಾನ್ ತಿಂಗಳಲ್ಲಿ ಬಲಿ ಕಾ ಬಕ್ರಾ ಮಾಡುತ್ತಾರೆ ಕಾದು ನೋಡಿ" ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ : ಸಂತೋಷ್ ಲಾಡ್ - Santhosh lad

Last Updated : Mar 25, 2024, 7:59 PM IST

ABOUT THE AUTHOR

...view details