ಕರ್ನಾಟಕ

karnataka

ಕೊಂಡಾಣ ಪುಣ್ಯಕ್ಷೇತ್ರದ ಭಂಡಾರಮನೆ ಕಟ್ಟಡ ಜೆಸಿಬಿಯಿಂದ ಧ್ವಂಸ: ಕಿಡಿಗೇಡಿಗಳ ಕೃತ್ಯಕ್ಕೆ ಭಕ್ತರ ಆಕ್ರೋಶ

By ETV Bharat Karnataka Team

Published : Mar 3, 2024, 10:11 PM IST

ಮಂಗಳೂರು ತಾಲೂಕಿನ ಕೋಟೆಕಾರು ಪ.ಪಂ ವ್ಯಾಪ್ತಿ ತುಳುನಾಡಿನ ಪುರಾಣ ಪ್ರಸಿದ್ಧ ಕಾರಣೀಕ ಕೊಂಡಾಣ ಕ್ಷೇತ್ರದ ಭಂಡಾರಮನೆ ಕಟ್ಟಡವನ್ನು ಜೆಸಿಬಿಯಿಂದ ಕಿಡಿಗೇಡಿಗಳು ನೆಲಸಮಗೊಳಿಸಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

Bhandaramane building has been destroyed
ಭಂಡಾರಮನೆ ಕಟ್ಟಡ ಧ್ವಂಸಗೊಳಿಸಿರುವುದು

ಉಳ್ಳಾಲ (ಮಂಗಳೂರು):ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೇವರ ಕ್ಷೇತ್ರದ ಪಕ್ಕದ ಜಾಗದಲ್ಲಿ ನಿರ್ಮಿಸುತ್ತಿದ್ದ ಭಂಡಾರಮನೆ ಕಟ್ಟಡವನ್ನು ಕಿಡಿಗೇಡಿಗಳು ಜೆಸಿಬಿಯಿಂದ ನೆಲಸಮಗೊಳಿಸಿ ದುಷ್ಕೃತ್ಯ ಮೆರೆದಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಈ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡಿದ್ದು, ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಉಳ್ಳಾಲ ಠಾಣೆ ಪೊಲೀಸರು ಬಿಗಿಭದ್ರತೆ ಕಲ್ಪಿಸಿದ್ದಾರೆ. ಇದರೊಂದಿಗೆ ಎರಡು ಪೊಲೀಸ್ ತುಕಡಿ ಸಹ ನಿಯೋಜಿಸಲಾಗಿದೆ.

ಭಂಡಾರಮನೆ ನಿರ್ಮಾಣ:ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣ ಭಂಡಾರಮನೆಯು ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಅದರಲ್ಲಿ ಕ್ಷೇತ್ರದ ದೇವರಿಗೆ ಸಂಬಂಧಿಸಿದ 15 ಕೋಟಿಗೂ ಮಿಕ್ಕಿ ಬೆಲೆ ಬಾಳುವ ಒಡವೆಗಳಿದ್ದು ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ ಇದಕ್ಕೆ ಭಂಡಾರಮನೆಯವರು ಸಮ್ಮತಿ ನೀಡಿರಲಿಲ್ಲ.

ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಬೇರೆ ಭಂಡಾರಮನೆ ನಿರ್ಮಿಸಬೇಕೆಂದು ನಿರ್ಧರಿಸಿ ಕಾರಣೀಕ ಕೊಂಡಾಣ ಕ್ಷೇತ್ರ ಪಕ್ಕದ ಜಮೀನನ್ನು ವ್ಯವಸ್ಥಾಪನಾ ಸಮಿತಿಯವರು ಖರೀದಿಸಿದ್ದರು. ಆ ಜಾಗದಲ್ಲಿ ಜನವರಿ 8 ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ತಕ್ಷಣ ದಾನಿಗಳ ದೇಣಿಗೆಯಿಂದ ಭಂಡಾರಮನೆಯನ್ನು ನಿರ್ಮಿಸಲು ಶುರು ಮಾಡಲಾಯಿತು. ಈಗ ಶೇ 80 ರಷ್ಟು ಕಟ್ಟಡದ ಕಾಮಗಾರಿ ಪೂರ್ಣಗೊಂಡಿತ್ತು.

ಆದರೆ ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದು, ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಕಳೆದ ಎರಡು ದಿವಸಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರಿಸಿದ್ದರು. ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ವಿಮುಕ್ತರಾಗುತ್ತಿದ್ದಂತೆ, ಭಾನುವಾರ ಬೆಳಗ್ಗೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆಯನ್ನು ನೆಲಸಮ ಮಾಡಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್​, ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ.ಪಂ ಮುಖ್ಯಾಧಿಕಾರಿ ಆನಂದ್ ಮತ್ತು ಸ್ಥಳೀಯರು ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕ್ಷೇತ್ರದ ಭಕ್ತ ಕೆ.ಪಿ ಸುರೇಶ್ ಮಾತನಾಡಿ, ಭಂಡಾರಮನೆಯನ್ನು ನೆಲಸಮಗೊಳಿಸಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಕಾನೂನು ಪ್ರಕಾರ ಭಂಡಾರ ಮನೆ ನಿರ್ಮಿಸಲಾಗಿತ್ತು. ಹಿಂದೆ ಭಂಡಾರಮನೆ ನಿರ್ಮಿಸುವುದನ್ನು ವಿರೋಧಿಸಿ ಕೋರ್ಟಿನಲ್ಲಿ ಯಾರೂ ದಾವೆ ಹೂಡಿದ್ದರೋ, ಅವರ ಬೆಂಬಲಿಗರು ಈ ದುಷ್ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರೀ ಸಂಖ್ಯೆಯಲ್ಲಿ ದೈವಸ್ಥಾನದ ಭಕ್ತರ ಜಮಾವಣೆಗೊಂಡಿದ್ದು, ಇಲ್ಲಿ ಮತ್ತೆ ಭಂಡಾರಮನೆ ಪುನರ್ ನಿರ್ಮಿಸುವ ಮೂಲಕ ದೈವಗಳ ಕೋಟಿಗಟ್ಟಲೆ ಬೆಲೆ ಬಾಳುವ ಒಡವೆಗಳನ್ನ ಸೇಫ್ ಲಾಕರಲ್ಲಿ ಇಡುವಂತಾಗಬೇಕೆಂದು ಎಂದು ಕ್ಷೇತ್ರದ ಭಕ್ತರು ಆಗ್ರಹಿಸಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.

ಮೂವರು ವಶಕ್ಕೆ ಪಡೆದು ವಿಚಾರಣೆ:ಭಂಡಾರುಮನೆ ಕಟ್ಟಡ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಉಳ್ಳಾಲ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು: ಯು.ಟಿ.ಖಾದರ್

ABOUT THE AUTHOR

...view details