ಕರ್ನಾಟಕ

karnataka

ಲೋಕಸಭೆಯಲ್ಲಿ ಗೆದ್ದು ರಾಜ್ಯ ವಿಧಾನಸಭೆಯಲ್ಲೂ ಕಮಲ ಅರಳಿಸಬೇಕು: ಭೂಪೇಂದ್ರ ಯಾದವ್

By ETV Bharat Karnataka Team

Published : Jan 27, 2024, 2:53 PM IST

''ಲೋಕಸಭೆ ಗೆದ್ದ ನಂತರ, ರಾಜ್ಯ ವಿಧಾನಸಭೆಯಲ್ಲೂ ಕಮಲ ಅರಳಿಸಬೇಕು'' ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದರು.

Bhupendra Yadav  Lok Sabha  state assembly  ಕೇಂದ್ರ ಸಚಿವ ಭೂಪೇಂದ್ರ ಯಾದವ್  ಲೋಕಸಭೆ ಚುನಾವಣೆ  ರಾಜ್ಯ ವಿಧಾನಸಭೆ ಚುನಾವಣೆ
ಕೇಂದ್ರ ಸಚಿವ ಭೂಪೇಂದ್ರ ಯಾದವ್

ಬೆಂಗಳೂರು: ''ಕಾಂಗ್ರೆಸ್ ಕೇವಲ ಗಾಂಧಿ ಪರಿವಾರಕ್ಕಾಗಿ ಅಧಿಕಾರ ನಡೆಸಿದೆ. ಅಲ್ಪಸಂಖ್ಯಾತರಿಗೆ ಸೀಮಿತವಾಗಿ ಅಧಿಕಾರ ಮಾಡಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರ ಗೆಲ್ಲಬೇಕು. ಬಳಿಕ ವಿಧಾನಸಭೆಯಲ್ಲಿಯೂ ಕಮಲವನ್ನು ಅರಳಿಸಬೇಕು'' ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕರೆ ನೀಡಿದರು.

ನಗರದ ಅರಮನೆ ಮೈದಾನದ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಅಯೋಧ್ಯೆಯಲ್ಲಿ 500 ವರ್ಷಗಳ ಸಂಘರ್ಷದ ಬಳಿಕ ರಾಮಮಂದಿರ‌ ನಿರ್ಮಾಣ ಆಗಿದೆ. ದೇಶದ ಸಾಂಸ್ಕೃತಿಕ ಸಂಕಲ್ಪ ಮುಂದುವರಿಸಲು, ಭಾರತೀಯರ ಪ್ರತಿಷ್ಠೆ ಮುಂದುವರಿಸಲು ರಾಮಮಂದಿರ ಆಗಿದೆ. ಕರ್ನಾಟಕದ ಅರುಣ್ ಯೋಗಿರಾಜ್ ರಾಮನ ಬಾಲವಿಗ್ರಹ ಕೆತ್ತಿದ ಶಿಲ್ಪಿ, ಇದು ಹೆಮ್ಮೆಯ ವಿಷಯ'' ಎಂದು ಭೂಪೇಂದ್ರ ಯಾದವ್ ಅವರು ಅರುಣ್ ಯೋಗಿರಾಜ್​ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

''ಮೋದಿ ಅವರ ನೇತೃತ್ವದಲ್ಲಿ ಈ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ದೇಶದ ಬಡವರಿಗೆ ಹತ್ತು ವರ್ಷಗಳಲ್ಲಿ ಹಲವು ಯೋಜನೆಗಳನ್ನು ತರಲಾಗಿದೆ. ಆರ್ಥಿಕ ಸುಧಾರಣೆ ದೆಸೆಯಿಂದ ಜಿಎಸ್​ಟಿ ಜಾರಿಯಾಗಿದೆ. ಕಾಂಗ್ರೆಸ್ ದೇಶವನ್ನು ಜಾತಿಗಳಲ್ಲಿ ಹಂಚುವ ಕೆಲಸ ಮಾಡುತ್ತಿದೆ. ಒಬಿಸಿಗೆ ಮೀಸಲಾತಿ ಕೊಡುವ ವಿಚಾರದಲ್ಲೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ದೇಶದ ಅಭಿವೃದ್ಧಿ ಯೋಜನೆಗಳನ್ನು ಕಾಂಗ್ರೆಸ್ ವಿರೋಧಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿದೆ. ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕಿದೆ'' ಎಂದು ಕಿಡಿಕಾರಿದರು.

''ಕಾಂಗ್ರೆಸ್​ನ ಸ್ಯೂಡೋ ಸೆಕ್ಯುಲರಿಸಂ ದೇಶಕ್ಕೆ ಅಪಾಯಕಾರಿಯಾಗಿದೆ. ಕಾಂಗ್ರೆಸ್ ಬಹುಸಂಖ್ಯಾತ, ಅಲ್ಪಸಂಖ್ಯಾತ ಅಂತ ಭೇದಭಾವ ಮಾಡಿತು. ಅಲ್ಪಸಂಖ್ಯಾತರ ಓಲೈಕೆಗೆ ಹೆಚ್ಚಿನ ಒತ್ತು ಕೊಟ್ಟಿತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್​ನ ಬೂಟಾಟಿಕೆ ಬಯಲಾಯಿತು. ದೇಶದಲ್ಲಿ ಒಂದೇ ಭರವಸೆಯ ಗ್ಯಾರಂಟಿ ಅಂದರೆ, ಅದು ಮೋದಿ ಗ್ಯಾರಂಟಿ ಮಾತ್ರ'' ಎಂದರು.

''ಕೇಂದ್ರದ ಅನುದಾನ ಬಂದರೂ ಇಲ್ಲಿ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಮುಂದಾಗುತ್ತಿಲ್ಲ. ಕರ್ನಾಟಕಕ್ಕೆ ಜಿಎಸ್​ಟಿ ಬಾಕಿ ಕೊಟ್ಟಾಗಿದೆ. ಆದರೆ ಕರ್ನಾಟಕ ಸರ್ಕಾರ ಇನ್ನು ಬಾಕಿ ಇದೆ ಎಂದು ಸುಳ್ಳು ಹೇಳೋದನ್ನ ಮುಂದುವರೆಸಿದೆ. ಕೇಂದ್ರದ ಅನುದಾನಗಳು ಇಲ್ಲಿಗೆ ಬರುತ್ತಿವೆ. ಈ ಸರ್ಕಾರ ಇದರಲ್ಲೂ ಸುಳ್ಳು ಹೇಳುತ್ತಿದೆ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವೇ ಅಡ್ಡಿಯಾಗಿದೆ'' ಎಂದು ಟೀಕಿಸಿದರು.

''ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್​ನ ಸುಳ್ಳುಗಳು ಜನತೆಗೆ ಗೊತ್ತಾಯ್ತ. ಹಾಗಾಗಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲಾಯಿತು. ಕಾಂಗ್ರೆಸ್​ನ ಗ್ಯಾರಂಟಿಗಳು ವಿಫಲವಾಗಿವೆ. ಈ‌ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಸಿಗೋದು ಖಚಿತ ಮತ್ತೆ ಮೋದಿ ಪ್ರಧಾನಿ ಆಗುವುದೂ ಖಚಿತ. ಕಾಂಗ್ರೆಸ್ ಕೇವಲ ಗಾಂಧಿ ಪರಿವಾರಕ್ಕಾಗಿ ಅಧಿಕಾರ ನಡೆಸಿದೆ. ಅಲ್ಪಸಂಖ್ಯಾತರಿಗೆ ಸೀಮಿತವಾಗಿ ಅಧಿಕಾರ ಮಾಡಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರ ಗೆಲ್ಲಬೇಕು. ಬಳಿಕ ವಿಧಾನಸಭೆಯಲ್ಲಿಯೂ ಕಮಲವನ್ನು ಅರಳಿಸಬೇಕು'' ಎಂದು ಭೂಪೇಂದ್ರ ಯಾದವ್ ಹೇಳಿದರು.

ತಡವಾಗಿ ಆಗಮಿಸಿ ಕಡೆಯ ಸಾಲಿನಲ್ಲಿ ಕುಳಿತ ಶೋಭಾ ಕರಂದ್ಲಾಜೆ:ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ತಡವಾಗಿ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೇದಿಕೆಯ ಮೇಲೆ ತೆರಳದೇ ಸಭೆಯ ಕಡೆಯ ಸಾಲಿನಲ್ಲಿ ಆಸೀನರಾದರು. ಭೂಪೇಂದ್ರ ಯಾದವ್ ಅವರನ್ನು ಬೀಳ್ಕೊಡಲು ಸಭೆಯ ದ್ವಾರದವರೆಗೂ ಬಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮರಳಿ ಒಳಗಡೆ ತೆರಳುವಾಗ ಶೋಭಾ ಕರಂದ್ಲಾಜೆ ಕಡೆಯ ಸಾಲಿನಲ್ಲಿರುವುದನ್ನು ಗಮನಿಸದೇ ತೆರಳಿದರು. ಆದರೆ, ಶೋಭಾ ಕರಂದ್ಲಾಜೆ ಆಗಮಿಸಿದ್ದನ್ನು ನೋಡಿದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ ಖುದ್ದಾಗಿ ಆಗಮಿಸಿ ಶೋಭಾ ಕರಂದ್ಲಾಜೆ ಅವರನ್ನು ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಆದರೆ, ಅದನ್ನು ನಯವಾಗಿ ತಿರಸ್ಕರಿಸಿ ಕಡೆಯ ಸಾಲಿನ ಕಡೆಯ ಆಸನದಲ್ಲೇ ಕುಳಿತರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕೂಡ ಬಂದು ಶೋಭಾ ಕರಂದ್ಲಾಜೆ ಜೊತೆ ಮಾತನಾಡಿದರೂ ಅವರು ಮುಂಭಾಗಕ್ಕೆ ತೆರಳದೇ ಕಡೆಯ ಸಾಲಿನಲ್ಲೇ ಕುಳಿತು ಸಭೆಯಲ್ಲಿ ಭಾಗಿಯಾದರು.

ಜೋಶಿ, ಶೆಟ್ಟರ್ ಹಸ್ತಲಾಘವ:ಇನ್ನು ವೇದಿಕೆ ಕಾರ್ಯಕ್ರಮ ಆರಂಭದ ವೇಳೆ ವೇದಿಕೆಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆತ್ಮೀಯವಾಗಿ ಮಾತನಾಡುತ್ತಾ ಹಸ್ತಲಾಘವ ನಡೆಸಿ ಗಮನ ಸೆಳೆದರು. ಪರಸ್ಪರ ಆಂತರಿಕವಾಗಿ ವಿರೋಧಿಗಳು ಎಂದು ಹೇಳಲಾಗುತ್ತಿದ್ದ ನಾಯಕರಿಬ್ಬರ ಸಮಾಗಮ ವಿಶೇಷವಾಗಿತ್ತು.

ಇದನ್ನೂ ಓದಿ:ಬಿ.ವೈ. ರಾಘವೇಂದ್ರ ಪುನರಾಯ್ಕೆ ವಿಚಾರ: ಶಾಮನೂರು ಹೇಳಿಕೆ ಸ್ವಾಗತಿಸಿದ ಯಡಿಯೂರಪ್ಪ

ABOUT THE AUTHOR

...view details