ಕರ್ನಾಟಕ

karnataka

ಬೆರಳ ತುದಿಯಲ್ಲಿ ಭೂ ದಾಖಲೆಗಳು : ಡಿಜಿಟಲೀಕರಣದತ್ತ ಮುಖಮಾಡಿದ ಕಂದಾಯ ಇಲಾಖೆ

By ETV Bharat Karnataka Team

Published : Feb 22, 2024, 6:20 PM IST

ಇದೀಗ ಭೂ ಸುರಕ್ಷಾ ಯೋಜನೆ ಮೂಲಕ ನೂರಾರು ವರ್ಷಗಳ ದಾಖಲೆ ಪತ್ರಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕರಣ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.

ಹುಬ್ಬಳ್ಳಿ
ಹುಬ್ಬಳ್ಳಿ

ಜಿಲ್ಲಾಧಿಕಾರಿ ದಿವ್ಯ ಪ್ರಭು

ಹುಬ್ಬಳ್ಳಿ : ಕಂದಾಯ ಇಲಾಖೆಯಲ್ಲಿ ಒಂದು ಸಣ್ಣ ದಾಖಲೆ ಪತ್ರಕ್ಕಾಗಿ ವಾರಗಟ್ಟಲೇ ಅಲೆದಾಡಬೇಕಾಗಿತ್ತು. ಅಷ್ಟೇ ಅಲ್ಲದೇ ಖೊಟ್ಟಿ ದಾಖಲೆ ಪತ್ರಗಳ ಹಾವಳಿ, ದಾಖಲೆ ತಿದ್ದುಪಡಿ ಪ್ರಕರಣ ಕೂಡ ಹೆಚ್ಚಾಗಿತ್ತು. ಇದಕ್ಕೆ ಸರ್ಕಾರ ಇತಿಶ್ರೀ ಹಾಡಲು ಮುಂದಾಗಿದ್ದು, ಬೆರಳ ತುದಿಯಲ್ಲಿಯೇ ಎಲ್ಲಾ ದಾಖಲೆ ಪತ್ರಗಳು ಸಿಗುವ ಕಾರ್ಯಕ್ಕೆ ಕೈ ಹಾಕಿದೆ.

ದೇಶ ಡಿಜಿಟಲೀಕರಣದತ್ತ ಹೆಜ್ಜೆ ಹಾಕುತ್ತಿದೆ. ಪ್ರಪಂಚದ ಯಾವುದೇ ಮೂಲೆಯ ವಿಷಯವನ್ನು ಕ್ಷಣಾರ್ಧದಲ್ಲಿ ಬೆರಳ ತುದಿಯಿಂದ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಇದೀಗ ಭೂ ಸುರಕ್ಷಾ ಯೋಜನೆ ಮೂಲಕ ನೂರಾರು ವರ್ಷಗಳ ದಾಖಲೆ ಪತ್ರಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕರಣ ಮಾಡಲು ಮುಂದಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಬೆರಳ ತುದಿಯಲ್ಲಿ ಭೂದಾಖಲೆಗಳನ್ನು ಜನರಿಗೆ ಸಿಗುವ ಹಾಗೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ಪಾರದರ್ಶಕತೆ ಕಾಯ್ದುಕೊಳ್ಳಲು ಡಿಜಿಟಲೀಕರಣ: ''ಜಿಲ್ಲೆಯ ‌ಪ್ರತಿಯೊಂದು ತಾಲೂಕು ಕೇಂದ್ರದ ತಹಶೀಲ್ದಾರ್ ಕಚೇರಿಯ ದಾಖಲೆ ಕೊಠಡಿಗಳನ್ನು ಪ್ರವೇಶಿಸಿದರೆ ದಶಕಗಳಷ್ಟು ಪುರಾತನವಾದ ಕಡತಗಳು ಸಿಗುತ್ತವೆ. ಕೈ ಬರಹದ ಆ ದಾಖಲೆಗಳನ್ನು ಬಟ್ಟೆಯಲ್ಲಿ ಕಟ್ಟಿ ಇಡಲಾಗಿತ್ತು. ಅದರಲ್ಲಿ ಹಲವು ದಾಖಲೆ ಪತ್ರಗಳು‌ ಮಾಸಿ, ಹರಿದು, ಇಲಿಗಳ ಬಾಯಿಗೆ, ನೀರಿನಲ್ಲಿ ತೋಯ್ದು ಅಸ್ಪಷ್ಟವಾಗಿವೆ. ಇವುಗಳನ್ನು ರಕ್ಷಿಸುವ ಕಾರ್ಯಕ್ಕೆ ಕಂದಾಯ ಇಲಾಖೆ ಹೆಜ್ಜೆ ಇಟ್ಟಿದೆ.

ಸಾರ್ವಜನಿಕರಾದ ರುಕ್ಮಿಣಿ ಚಲವಾದಿ ಮಾತನಾಡಿದರು..

ಕೆಲವುಗಳನ್ನು ಹುಡುಕಿ ಕೊಡುವುದೇ ದೊಡ್ಡ ಕೆಲಸ. ಧೂಳು ಕೊಡವಿ ಪತ್ತೆಹಚ್ಚುವ ಹೊತ್ತಿಗೆ ದಿನವೇ ಕಳೆದು ಬಿಡುತ್ತದೆ. ಅದಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ. ಇನ್ನು ಮುಂದೆ ಆ ತಾಪತ್ರಯ ಇರುವುದಿಲ್ಲ. ಹಳೆಯ ಕಡತಗಳನ್ನು ಒಂದೊಂದಾಗಿ ಸ್ಕ್ಯಾನ್ ಮಾಡಲಾಗುತ್ತದೆ. ಒಮ್ಮೆ ಡಿಜಿಟಲೀಕರಣ ಆಗಿಬಿಟ್ಟರೆ, ಕಂಪ್ಯೂಟರ್ ಬಟನ್ ಕ್ಲಿಕ್ ಮಾಡಿದರೆ ಸಾಕು ನಿಮಗೆ ಬೇಕಾದ ದಾಖಲೆ ಕಣ್ಮುಂದೆ ಬರುತ್ತದೆ. ಅದರ ಪ್ರಿಂಟ್ ತೆಗೆದು ಸಂಬಂಧಪಟ್ಟವರಿಗೆ ಕೊಡುವುದು ಸುಲಭವಾಗಲಿದೆ. ಜನರ ಬಾಗಿಲಿಗೆ ಸೇವೆ ಸಲ್ಲಿಸುವುದರ ಜೊತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಡಿಜಿಟಲೀಕರಣ ಮಾಡಲಾಗುತ್ತಿದೆ'' ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಈಗಾಗಲೇ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಒಂದು ತಾಲೂಕಿನಲ್ಲಿ ಈ ಯೋಜನೆ ಜಾರಿಗೊಳಿಸಿದ್ದು, ಸದ್ಯ ಹುಬ್ಬಳ್ಳಿಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್​ ಕಚೇರಿಯಲ್ಲಿ ಪ್ರತ್ಯೇಕವಾದ ರೆಕಾರ್ಡ್ ರೂಮ್ ತೆರೆದಿದ್ದು, ಕಂದಾಯ ಇಲಾಖೆಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ ನೀಡಿ, ಹಳೆಯ ಕಡತಗಳಿಗೆ ಹೊಸ ಸ್ವರೂಪ ಕೊಡುವ ಕೆಲಸ ಆರಂಭಿಸಿದೆ.

ಭ್ರಷ್ಟಾಚಾರ ತಡೆಗಟ್ಟಲು ಸಹಕಾರಿ : ಮುಖ್ಯವಾಗಿ ರೆಕಾರ್ಡ್ ರೂಮ್​ನಲ್ಲಿ ರೈತರ ಪಹಣಿ, ಭೂ ಮಂಜೂರಾತಿ ಕಡತಗಳು, ಮ್ಯೂಟೇಶನ್ ದಾಖಲೆಗಳು, ಭೂಸ್ವಾದೀನ ಕಡತಗಳು, ಇನಾಮು ಭೂಮಿಗೆ ಸಂಬಂಧಿಸಿದವು. ಸ್ಮಶಾನ ಭೂಮಿಯ ದಾಖಲೆಗಳು, ತಹಶೀಲ್ದಾರ ಕೋರ್ಟ್​ನ ಆದೇಶಗಳು, ಪ್ರತಿನಿತ್ಯದ ಕಡತಗಳು ಹೀಗೆ ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಬೇಕಾಗುವ, ಅವರ ಬದುಕಿಗೆ ಉಪಯುಕ್ತವಾದ ಕಾಗದ ಪತ್ರಗಳು ಇನ್ನುಮುಂದೆ ಡಿಜಿಟಲ್ ಆಗಲಿವೆ. ಇದರಿಂದ ಸಾರ್ವಜನಿಕರಿಗೂ ಸಾಕಷ್ಟು ಅನುಕೂಲವಾಗಲಿದೆ. ಇದರಿಂದ ‌ಭ್ರಷ್ಟಾಚಾರ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಸಾರ್ವಜನಿಕರಾದ ರುಕ್ಮಿಣಿ ಚಲವಾದಿ ಅವರು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ :ಬಜೆಟ್‌ನಲ್ಲಿ 'ಭೂ ಸುರಕ್ಷಾ ಯೋಜನೆ' ಘೋಷಣೆ: ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ

ABOUT THE AUTHOR

...view details