ETV Bharat / state

ಬಜೆಟ್‌ನಲ್ಲಿ 'ಭೂ ಸುರಕ್ಷಾ ಯೋಜನೆ' ಘೋಷಣೆ: ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ

author img

By ETV Bharat Karnataka Team

Published : Feb 16, 2024, 3:16 PM IST

ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್​​ನಲ್ಲಿ ಕಂದಾಯ ಇಲಾಖೆಗೆ 16,173 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಇನ್ನುಳಿದಂತೆ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ.

siddaramaiah-budget-revenue-deaprtment-highlight
siddaramaiah-budget-revenue-deaprtment-highlight

ಬೆಂಗಳೂರು: ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು ನೋಂದಣಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸಿ, ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕೃತ ದಾಖಲೆಗಳನ್ನು ನಾಗರಿಕರೇ ಸ್ವತಃ ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ಭೂ ಸುರಕ್ಷಾ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

2024-25ನೇ ಸಾಲಿನ ಬಜೆಟ್​ ಭಾಷಣದಲ್ಲಿ ಅವರು, ಈ ಬಾರಿ ಬಜೆಟ್​​ನಲ್ಲಿ ಕಂದಾಯ ಇಲಾಖೆಗೆ 16,173 ಕೋಟಿ ರೂ ಮೀಸಲಿರಿಸಲಾಗಿದೆ. ಆಕಾರ್‌ಬಂದ್ ಮತ್ತು ಆ‌ರ್.ಟಿ.ಸಿ.ಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಹಿಡುವಳಿದಾರರಿಗೆ ತ್ವರಿತ ಸೇವೆ ಒದಗಿಸಲು ಆಕಾರ್‌ಬಂದ್‌ಗಳ ಗಣಕೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದರು.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಆ‌ರ್.ಟಿ.ಸಿ ವಿತರಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಬಾಕಿ ಉಳಿದಿರುವ ಗ್ರಾಮಗಳನ್ನು ಪೋಡಿ ಅಭಿಯಾನ 2.0 ರಡಿ ಪೋಡಿ ಮುಕ್ತ ಮಾಡಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು.

ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಯಾವುದೇ ತಕರಾರು ಇಲ್ಲದೆ ಇರುವ ಜಮೀನುಗಳಿಗೆ ಸರ್ಕಾರದಿಂದ ಸ್ವಯಂಪ್ರೇರಿತವಾಗಿ 1ರಿಂದ 5 ರ ವರೆಗಿನ ದಾಖಲೆಗಳನ್ನು ಸಿದ್ಧಪಡಿಸಲಾಗುವುದು. ರಾಜ್ಯದಲ್ಲಿನ ಸುಮಾರು 30,700 ಗ್ರಾಮ ಠಾಣಾ ಪ್ರದೇಶಗಳನ್ನು ಹಂತಹಂತವಾಗಿ ಡೋನ್ ಮುಖಾಂತರ ಸರ್ವೆ ಮಾಡಿಸಿ ಆಸ್ತಿ ಮತ್ತು ಹಕ್ಕು ದಾಖಲಾತಿಗಳನ್ನು ಭೂ ಮಾಲೀಕರಿಗೆ ವಿತರಿಸುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು.

ಆಡಳಿತ ನೀಡುವ ನಿಟ್ಟಿನಲ್ಲಿ ನೋಟೀಸುರಹಿತ-ಮ್ಯುಟೇಷನ್‌ಗಳು (ಪೌತಿ ಖಾತೆ ಮತ್ತು ಜೆ-ಸ್ಲಿಪ್ ಮುಖಾಂತರ ಆಗುವ ಮ್ಯುಟೇಷನ್‌ಗಳನ್ನು ಹೊರತುಪಡಿಸಿ) ನಿಗದಿತ ತಂತ್ರಾಂಶದಲ್ಲಿ ಸ್ವಯಂ-ಚಾಲಿತವಾಗಿ ಅನುಮೋದನೆಯಾಗುವಂತೆ ಕ್ರಮವಹಿಸಲಾಗುವುದು. ಆಧುನಿಕ ಉಪಕರಣಗಳ ಮುಖಾಂತರ ಕಡಿಮೆ ಅವಧಿಯಲ್ಲಿ-ಭೂಮಾಪನ ಕಾರ್ಯಗಳನ್ನು ಕೈಗೊಂಡು ನಿಖರವಾದ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಒದಗಿಸಲಾಗುವುದು ಮತ್ತು ಇದಕ್ಕೆ ಅಗತ್ಯವಾದ ಡೋನ್ ಮತ್ತಿತರ ಉಪಕರಣಗಳನ್ನು ಎಲ್ಲಾ ಜಿಲ್ಲೆಗಳಲ್ಲಿನ ಭೂಮಾಪನಾ ಕಚೇರಿಗಳಿಗೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಬೆಂಗಳೂರು ಬಿಸಿನೆಸ್ ಕಾರಿಡಾರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ: ಸಿದ್ದರಾಮಯ್ಯ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.