ಕರ್ನಾಟಕ

karnataka

ವಿಚಾರಣೆ ಸಂದರ್ಭದಲ್ಲಿ ಥಳಿತ ಆರೋಪ: ಇಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

By ETV Bharat Karnataka Team

Published : Feb 3, 2024, 6:51 AM IST

ವಿಚಾರಣೆ ವೇಳೆ ಥಳಿತ ಆರೋಪ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.

Etv Bharat
Etv Bharat

ಬೆಂಗಳೂರು:ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಥಳಿಸಿದ್ದಾರೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ನಗರದ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದ ಎಫ್‌ಐಆರ್ ರದ್ದು ಕೋರಿ ಇಡಿ ಉಪ ನಿರ್ದೇಶಕ ಮನೋಜ್ ಮಿಟ್ಟಲ್ ಮತ್ತು ಸಹಾಯಕ ನಿರ್ದೇಶಕ ಅಜಯ್ ಕುಮಾರ್‌ ವೈದ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಾದ ಆಲಿಸಿದ ಬಳಿಕ ನ್ಯಾಯಾಲಯ ವಿಲ್ಸನ್ ಗಾರ್ಡನ್ ಪೊಲೀಸರ ತನಿಖೆಗೆ ತಡೆ ನೀಡಿದ್ದಲ್ಲದೇ ದೂರುದಾರ ವೈ.ಬಿ.ಅಶ್ವಥ್ ನಾರಾಯಣ್‌ಗೆ ನೋಟಿಸ್ ಜಾರಿಗೊಳಿಸಿತು. ವಿಚಾರಣೆ ವೇಳೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್.ವಿ.ರಾಜು, ಮೂಲ ದೂರುದಾರರು ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಪ್ಲಾಸ್ಟಿಕ್ ಪೈಪ್​​ನಲ್ಲಿ ಹೊಡೆದಿದ್ದಾರೆಂದು ದೂರಿರುವುದು ಆಧಾರ ರಹಿತ ಆರೋಪವಾಗಿದೆ. ಈ ಆರೋಪ ಪುಷ್ಟೀಕರಿಸುವುದಕ್ಕೆ ಯಾವುದೇ ರೀತಿಯ ಪುರಾವೆಗಳನ್ನು ಒದಗಿಸಿಲ್ಲ. ಹಾಗಾಗಿ ಪೊಲೀಸರ ತನಿಖೆಗೆ ತಡೆ ನೀಡಬೇಕು ಎಂದು ಕೋರಿದ್ದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಗೆ ತಡೆ ನೀಡಿದೆ. ಅಲ್ಲದೇ, ಈ ಸಂಬಂಧ ಆಕ್ಷೇಪ ಸಲ್ಲಿಸುವಂತೆ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು ?ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿಚಾರಣೆ ವೇಳೆ ಇಡಿ ಅಧಿಕಾರಿಗಳಾದ ಮನೋಜ್ ಮಿಟ್ಟಲ್ ಮತ್ತು ಅಜಯ್ ಕುಮಾರ್ ವೈದ್ಯ ಲಾಠಿಯಿಂದ ಹಾಗೂ ಪ್ಲಾಸಿಕ್ ಪೈಪ್​​ನಿಂದ ಹೊಡೆದಿದ್ದಾರೆಂದು ಕೊಮುಲ್ ನಿರ್ದೇಶಕ ವೈ.ಬಿ.ಆಶ್ವಥ್ ನಾರಾಯಣ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಪ್ರಕಾರ ಅರ್ಜಿದಾರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೊರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:27 ವರ್ಷದ ಬಳಿಕ ಕರ್ನಾಟಕ ಹೈಕೋರ್ಟ್‌ಗೆ ಕನ್ನಡಿಗ​ ಮುಖ್ಯ ನ್ಯಾಯಮೂರ್ತಿ

ABOUT THE AUTHOR

...view details