ETV Bharat / state

27 ವರ್ಷದ ಬಳಿಕ ಕರ್ನಾಟಕ ಹೈಕೋರ್ಟ್‌ಗೆ ಕನ್ನಡಿಗ​ ಮುಖ್ಯ ನ್ಯಾಯಮೂರ್ತಿ

author img

By ETV Bharat Karnataka Team

Published : Feb 1, 2024, 11:07 AM IST

ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಬಹಳ ವರ್ಷಗಳ ನಂತರ ಕನ್ನಡಿಗರೇ ಆಗಿರುವ ಪಿ.ಎಸ್.ದಿನೇಶ್‌ ಕುಮಾರ್ ನೇಮಕಗೊಂಡಿದ್ದಾರೆ.

P.S. Dinesh Kumar
ಮುಖ್ಯನ್ಯಾಯಮೂರ್ತಿಯಾಗಿ ಪಿ.ಎಸ್​. ದಿನೇಶ್‌ ಕುಮಾರ್​

ಬೆಂಗಳೂರು: ನ್ಯಾಯಮೂರ್ತಿ ಪಿ.ಎಸ್​.ದಿನೇಶ್‌ ಕುಮಾರ್​ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿರುವುದರಿಂದ ರಾಜ್ಯ ನ್ಯಾಯಾಂಗ ವಲಯದಲ್ಲಿ ದಾಖಲೆ ನಿರ್ಮಾಣವಾಗಿದೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಹಕೀಮ್​ ಅವರ ಬಳಿಕ, ಅಂದರೆ ಸರಿಸುಮಾರು 27 ವರ್ಷಗಳ ನಂತರ ರಾಜ್ಯದಲ್ಲೇ ಕಾನೂನು ಪದವಿ ಪಡೆದು, ವಕೀಲರಾಗಿ ಸೇವೆ ಸಲ್ಲಿಸಿದ ನಂತರ ಇದೀಗ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನ್ಯಾ.ಪಿ.ಎಸ್.ದಿನೇಶ್ ನೇಮಕಗೊಂಡಿದ್ದಾರೆ.

ನ್ಯಾ.ಎಸ್‌.ಎ.ಹಕೀಮ್​ 1996ರ ಮೇ 3ರಿಂದ 9ರವರೆಗೆ ಕೇವಲ ಆರು ದಿನಗಳ ಕಾಲ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಇವರ ನಂತರ ಕನ್ನಡಿಗರೊಬ್ಬರು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾದ ಉದಾಹರಣೆ ಇಲ್ಲ. ಕೇವಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದು, ನಿವೃತ್ತರಾದ ಹಾಗೂ ಬೇರೊಂದು ರಾಜ್ಯದ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾದ ನಿದರ್ಶನವಿದೆ. ಆದರೀಗ 27 ವರ್ಷಗಳ ನಂತರ ಕನ್ನಡಿಗರಾದ ಪಿ.ಎಸ್‌.ದಿನೇಶ್‌ ಕುಮಾರ್​ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದಾರೆ.

1996ರ ಮೇ 10ರ(ಎಸ್‌.ಎ.ಹಕೀಮ್‌ ಅವರ) ನಂತರ ಈವರೆಗೂ ಒಟ್ಟು 15 ಮಂದಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಅವರಲ್ಲಿ ಯಾರೊಬ್ಬರೂ ಕರ್ನಾಟಕದವರಾಗಿರಲಿಲ್ಲ. ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ (ಹಾಲಿ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ) ಪ್ರಸನ್ನ ಬಿ.ವರಾಳೆ ಮೂಲತಃ ಬೆಳಗಾವಿಯ ನಿಪ್ಪಾಣಿಯರಾದವರೂ ಮುಂಬೈನಲ್ಲಿ ಕಾನೂನು ಪದವಿ ಪಡೆದವರು. ಅಲ್ಲಿನ ಕೋರ್ಟ್‌ ನ್ಯಾಯಮೂರ್ತಿಯಾಗಿ 2022ರ ಅ.15ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಸುಮಾರು 16 ತಿಂಗಳ ಕಾಲ ಕರ್ನಾಟಕ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ, 2024ರ ಜ.24ರಂದು ಸುಪ್ರಿಂ ಕೋರ್ಟ್‌ಗೆ ಪದೋನ್ನತಿ ಪಡೆದರು. ಅವರಿಂದ ತೆರವಾದ ಸ್ಥಾನಕ್ಕೆ ಪಿ.ಎಸ್‌.ದಿನೇಶ್‌ ಕುಮಾರ್‌ ನೇಮಕಗೊಂಡಿದ್ದಾರೆ.

1985ರ ನಂತರ..: 1984ರ ಮುನ್ನ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಂಪ್ರದಾಯವಿದ್ದು, ನಂತರ ಅದಕ್ಕೆ ಬ್ರೇಕ್​ ಬಿದ್ದಿತ್ತು. 1984ರ ಫೆ.6ರಿಂದ 1985ರ ಸೆ.16ರವರೆಗೆ ಕನ್ನಡಿಗರೇ ಆದ ವಿ.ಎಸ್‌.ಮಳೀಮಠ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ ಕೇರಳ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದರು. ತದನಂತರ ನ್ಯಾ.ಎಸ್‌.ಎ.ಹಕೀಮ್‌ 1996ರ ಮೇ 3ರಿಂದ 1996ರ ಕೊನೆಯವರೆಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಳಿಕ ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಂಪ್ರದಾಯ ಹೊರಟು ಹೋಗಿತ್ತು.

ಮುಂದುವರಿದ ಪರಂಪರೆ: ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದವರು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕವಾಗುತ್ತಾರೆ ಎಂಬ ಪರಂಪರೆ ನ್ಯಾ.ಪಿ.ಬಿ.ವರಾಳೆ ಅವರಿಂದಲೂ ಮುಂದುವರಿದಿದೆ. 1996ರ ಈಚೆಗೆ ಹೊರ ರಾಜ್ಯದ 15 ನ್ಯಾಯಮೂರ್ತಿಗಳು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಅವರ ಪೈಕಿ ಆರ್‌.ಪಿ. ಸೇಠಿ, ಪಿ.ವಿ.ರೆಡ್ಡಿ, ಸಿರಿಯಾಕ್‌ ಜೋಸೆಫ್‌, ಜೆ.ಎಸ್‌.ಖೇಹರ್‌ (ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು), ವಿಕ್ರಂಜಿತ್‌ ಸೇನ್‌, ದಿನೇಶ್‌ ಮಹೇಶ್ವರಿ, ಅಭಯ್‌ ಶ್ರೀನಿವಾಸ್‌ ಓಕಾ, ಪ್ರಸನ್ನ ಬಿ.ವರಾಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಪದೋನ್ನತಿ ಪಡೆದಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳಾದ ನ್ಯಾ.ಶಿವರಾಜ್‌ ಪಾಟೀಲ್‌​ ಅವರಿಗೆ ನಾಲ್ವರು ಶಿಷ್ಯರು: ಸುಪ್ರಿಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್​ ವಿ.ಪಾಟೀಲ್​ ವಕೀಲರಾಗಿದ್ದಾಗ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿದ್ದವರ ಪೈಕಿ ನಾಲ್ವರು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದಾರೆ. ಅವರಲ್ಲಿ ಮೋಹನ ಶಾಂತನ ಗೌಡರ್‌ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡು, ಸೇವಾವಧಿಯಲ್ಲಿಯೇ ಸಾವನ್ನಪ್ಪಿದ್ದರು. ಮತ್ತೊಬ್ಬರು ನ್ಯಾ.ಎನ್‌.ಕೆ.ಪಾಟೀಲ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡು ನಿವೃತ್ತರಾದವರು. ಅವರೂ ಸಹ ಇತ್ತೀಚೆಗೆ ನಿಧನರಾಗಿದ್ದಾರೆ. ನ್ಯಾಯಮೂರ್ತಿ ರವಿ ಎಸ್‌.ಮಳಿಮಠ್‌ ಸದ್ಯ ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಇದೀಗ ಪಿ.ಎಸ್‌.ದಿನೇಶ್‌ ಕುಮಾರ್‌ ಅವರು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿ, ತಮ್ಮ ಗುರುಗಳ ಹಿರಿಮೆ ಹೆಚ್ಚಿಸಿದ್ದಾರೆ.

ನ್ಯಾ.ದಿನೇಶ್ ಕುಮಾರ್ ಹಿನ್ನೆಲೆ: ದಿನೇಶ್​ ಕುಮಾರ್​ 1990ರಲ್ಲಿ ಕಾನೂನು ಪದವಿ ಪಡೆದು ವಕೀಲಿಕೆ ಆರಂಭಿಸಿದ್ದರು. 1998ರಲ್ಲಿ ಕೇಂದ್ರ ಸರ್ಕಾರಿ ವಕೀಲರಾಗಿದ್ದರು. 2003ರಲ್ಲಿ ಕೇಂದ್ರ ಸರ್ಕಾರದ ಹಿರಿಯ ವಕೀಲರಾದರು. ಸಿಬಿಐ, ಬಿಎಸ್‌ಎನ್‌ಎಲ್‌, ಯುಪಿಎಸ್‌ಸಿ, ಯುಜಿಸಿ, ಎಐಸಿಟಿಇ, ಎನ್‌ಸಿಟಿಇ, ಕೆಪಿಟಿಸಿಎಲ್‌, ಕೆಎಸ್‌ಆರ್‌ಟಿಸಿ, ಬೆಸ್ಕಾಂ, ಬಿಡಿಎ ಅನ್ನು ಪ್ರತಿನಿಧಿಸಿದ್ದರು. 2015ರ ಜ.2ರಂದು ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2016ರ ಡಿ.20ರಂದು ಕಾಯಂಗೊಂಡಿದ್ದರು. ಇದೀಗ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು ಫೆ.24ಕ್ಕೆ ನಿವೃತ್ತರಾಗಲಿದ್ದಾರೆ.

ಇದನ್ನೂ ಓದಿ: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್.ದಿನೇಶ್ ಕುಮಾರ್ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.