ಕರ್ನಾಟಕ

karnataka

ತಸ್ತೀಕ್ ಹಣ ವಾಪಸ್ ನೀಡುವಂತೆ ಕಣ್ಣನ್ ಅವರಿ​ಗೆ ನೋಟಿಸ್‌ ನೀಡಿದ್ದು ತಹಶೀಲ್ದಾರ್ ತಪ್ಪು: ಸಿಎಂ

By ETV Bharat Karnataka Team

Published : Jan 24, 2024, 7:20 AM IST

Updated : Jan 24, 2024, 8:30 PM IST

ಹಿರೇಮಗಳೂರು ಕಣ್ಣನ್​ ಅವರಿಗೆ ವೇತನದಲ್ಲಿ ಭಾಗಶಃ ಹಿಂತಿರುಗಿಸುವಂತೆ ​ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Hiremagaluru Kannan
ಹಿರೇಮಗಳೂರು ಕಣ್ಣನ್

ಹಿರೇಮಗಳೂರು ಕಣ್ಣನ್‌ ಅಸಮಾಧಾನ

ಚಿಕ್ಕಮಗಳೂರು:ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಸ್ ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಅವರು, "ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಸ್ ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆಯೇ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು. ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ " ಎಂದಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?: ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಹಿರೇಮಗಳೂರು ಕಣ್ಣನ್​ ಅವರಿಗೆ ಹೆಚ್ಚುವರಿ ಆಗಿ ಪಾವತಿಯಾಗಿರುವ ವೇತನ ಹಿಂತಿರುಗಿಸುವಂತೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಈ ನೋಟಿಸ್‌ ಹಿಂಪಡೆಯುವುದಾಗಿ ಸಚಿವ ರಾಮಲಿಂಗಾರೆಡ್ಡಿ ಕೂಡ ಹೇಳಿದ್ದಾರೆ. ಕಣ್ಣನ್​ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಹಿರೇಮಗಳೂರು ಕಣ್ಣನ್​ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದು, ಸ್ಥಳೀಯ ತಹಶೀಲ್ದಾರ್ ಅವರ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನೋಟಿಸ್‌ ವಿವರ: ಹಿರೇಮಗಳೂರು ಕಣ್ಣನ್​ ಅವರ ವೇತನ ತಡೆ ಹಿಡಿದು, 4,500 ರೂಪಾಯಿಯಂತೆ 10 ವರ್ಷಕ್ಕೆ 4,74,000 ರೂ. ಹಣವನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು ಎಂದು ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿತ್ತು. ಸರ್ಕಾರ ಪ್ರತಿ ತಿಂಗಳು 7,500 ರೂ. ವೇತನ ನೀಡುತ್ತಿತ್ತು. ಹೆಚ್ಚುವರಿ ಆಗಿ ಪಾವತಿಯಾಗಿರುವ ಹೆಚ್ಚುವರಿ ಹಣವನ್ನು ವಾಪಸ್ ನೀಡುವಂತೆ ತಿಳಿಸಿ ಈ ತಿಂಗಳ ವೇತನವನ್ನು ತಡೆಹಿಡಿದು ಸ್ಥಳೀಯ ತಹಶೀಲ್ದಾರ್ ನೋಟಿಸ್ ನೀಡಿದ್ದರು.

ಹಿರೇಮಗಳೂರು ಕಣ್ಣನ್​ ಈ ದೇಗುಲದಲ್ಲಿ ದಿನನಿತ್ಯವೂ ಸೀತಾ ರಾಮ ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರ ಘೋಷಗಳಿಂದ ಪೂಜೆ ಸಲ್ಲಿಸುವುದು ವಿಶೇಷ. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ನೂರಾರು ಭಕ್ತರು ಕಲ್ಯಾಣ ರಾಮರ ದರ್ಶನ ಪಡೆಯುತ್ತಾರೆ. ಅಲ್ಲದೇ ಕಣ್ಣನ್‌ ಅವರ ಪ್ರವಚನ ಇಡೀ ನಾಡಿನಾದ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ಅವರನ್ನು ನೋಡಲು, ಕನ್ನಡ ಮಂತ್ರಘೋಷ ಕೇಳಲು, ಕನ್ನಡದಲ್ಲಿ ಮಾತನಾಡುವ ಶೈಲಿ ನೋಡಲು ಭಕ್ತರು ಕಾತುರದಿಂದ ಕಾಯುವುದು ದೇವಸ್ಥಾನದಲ್ಲಿ ಸರ್ವೇ ಸಾಮಾನ್ಯವಾಗಿದೆ.

ಹಿರೇಮಗಳೂರು ಕಣ್ಣನ್​ ಬೇಸರ: ಈ ಕುರಿತು ಹಿರೇಮಗಳೂರು ಕಣ್ಣನ್​ ಬೇಸರ ವ್ಯಕ್ತಪಡಿಸಿ, "44 ವರ್ಷಗಳಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲ ಎಂದು ಸಂಬಳ ತಡೆ ಹಿಡಿದು, ಅರ್ಚಕರಿಗೆ ನೀಡಿದ ವೇತನ ವಾಪಸ್ ಕೇಳುವುದು ಸರಿಯಲ್ಲ" ಎಂದರು. "ನಾನು ಕೆಲಸಕ್ಕೆ ಸೇರಿದ ಸಮಯದಲ್ಲಿ ತಿಂಗಳಿಗೆ 50 ರೂಪಾಯಿ ತೆಗೆದುಕೊಳ್ಳುತ್ತಿದ್ದೆ. ನಂತರ 75 ರೂ., ತದನಂತರ 150 ರೂಪಾಯಿ ತೆಗೆದುಕೊಂಡಿದ್ದೇನೆ. ಹಲವು ವರ್ಷಗಳ ನಂತರ 1 ಸಾವಿರ ಹಣ ತೆಗೆದುಕೊಳ್ಳುತ್ತಿದ್ದೆ. ಕಳೆದ 44 ವರ್ಷದಿಂದ ದೇವಸ್ಥಾನದಲ್ಲಿ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನಂಥವರಿಗೆ ಈ ರೀತಿ ಸರ್ಕಾರ ಮಾಡಿದರೆ ಬೇರೆಯವರ ಕಥೆ ಏನು?, ನನಗೆ ಧ್ವನಿ ಇರುವ ಕಾರಣ ನಾನು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದೇನೆ. ಧ್ವನಿ ಇಲ್ಲದವರು ಏನು ಮಾಡಬೇಕು?. ಸರ್ಕಾರದ ಈ ನಡೆ ಸರಿ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜ್ಯ ಸರ್ಕಾರ ಹಿರೇಮಗಳೂರು ಕಣ್ಣನ್​ ಕ್ಷಮೆ ಕೇಳಬೇಕು: ಕೆ.ಎಸ್.ಈಶ್ವರಪ್ಪ

Last Updated : Jan 24, 2024, 8:30 PM IST

ABOUT THE AUTHOR

...view details