ಲೋಕಸಭೆ ಚುನಾವಣೆಗೆ ಪತ್ನಿ ಗೀತಾ ಪರ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಮತ ಪ್ರಚಾರ ನಡೆಸಿದರು. ಶಿವಮೊಗ್ಗ:"38 ವರ್ಷ ಸಂಸಾರ ನಡೆಸಿದ್ದಕ್ಕಿಂತ ಹೆಚ್ಚು ಅನುಭವ ಬೇಕೇ?" ಎಂದು ಗೀತಾ ಅವರಿಗೆ ರಾಜಕೀಯದ ಅನುಭವ ಇಲ್ಲ ಎಂದವರಿಗೆ ಪತಿ ಶಿವರಾಜ್ ಕುಮಾರ್ ಪರೋಕ್ಷವಾಗಿ ಟಾಂಗ್ ಕೊಟ್ಟರು. "ಜೀವನವೇ ಒಂದು ಅನುಭವ. ಸಂಸಾರವನ್ನು ಸರಿಯಾಗಿ ನಡೆಸಿಕೊಂಡು ಹೋಗುವವರಿಗೆ ಆಡಳಿತದ ಅನುಭವ ಇರುತ್ತದೆ. ಹೆಣ್ಣನ್ನು ಭೂಮಿ ತಾಯಿಗೆ ಹೋಲಿಸುತ್ತಾರೆ. ಅದಕ್ಕೆ ಒಮ್ಮೆ ಗೀತಾರನ್ನು ಎಂ.ಪಿ ಮಾಡಬಾರದೇ?" ಎಂದು ಮನವಿ ಮಾಡಿದರು. "ಗೀತಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಒಂದು ಅವಕಾಶ ನೀಡಿ" ಎಂದು ವಿನಂತಿಸಿಕೊಂಡರು.
ಬುಧವಾರ ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ಆಯೋಜಿಸಲಾದ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ತಮ್ಮ ತಂದೆಯ ಕಾಲಾವಧಿಯನ್ನು ಮೆಲುಕು ಹಾಕುತ್ತಾ ತಮ್ಮ ಭಾಷಣ ಪ್ರಾರಂಭಿಸಿದ ಗೀತಾ ಶಿವರಾಜ್‌ಕುಮಾರ್, "ನಮ್ಮ ತಂದೆಯ ರಾಜಕೀಯವನ್ನು ನೋಡಿಕೊಂಡು ಬೆಳೆದಿದ್ದೇನೆ. ನನ್ನನ್ನು ನಿಮ್ಮ ಮನೆ ಮಗಳಂತೆ ಕಾಣಿ. ಪಕ್ಷದ ಪದಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ತಂದೆ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅದು ಈಗಲೂ ಮುಂದುವರೆದಿದೆ. ಹಿಂದಿನ ಚುನಾವಣೆಯಲ್ಲಿ ಕೇವಲ 15 ದಿನ ಪ್ರಚಾರ ಮಾಡಿದ್ದೆ. ಆಗ ಸಾಕಷ್ಟು ಅವಕಾಶ ಸಿಗದ ಕಾರಣ ಈಗ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ. ನನಗೆ ಮತ ನೀಡಿ ದೆಹಲಿಗೆ ಕಳುಹಿಸಿದರೆ, ನಾನು ಕ್ಷೇತ್ರದ ಮೊದಲ ಮಹಿಳಾ ಸಂಸದೆಯಾಗುತ್ತೇನೆ" ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತಬೇಟೆ "ನಾನು ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ನಮ್ಮೂರಿಗೆ ಬರುತ್ತಿದ್ದೇನೆಂದು ಪ್ರಚಾರ ಮಾಡಲ್ಲ. ನಮ್ಮ ತಂದೆಯ ಸ್ಥಾನವನ್ನು ನನ್ನ ತಮ್ಮ ಮಧು ತುಂಬಿದ್ದಾನೆ. ನಾನು ನಿಮ್ಮ ಮಗಳು. ನನಗೆ ನೀವು ಮತ ನೀಡಲೇಬೇಕು. ನಾನು ಮಹಿಳೆಯರು ಮತ್ತು ಮಕ್ಕಳ ದನಿಯಾಗುತ್ತೇನೆ. ನಿಮ್ಮ ಸೇವೆಗೆ ಒಂದು ಅವಕಾಶ ನೀಡಿ. ತಂದೆ, ತಮ್ಮನಿಗೆ ಕೆಟ್ಟ ಹೆಸರು ತರುವಂತೆ ನಡೆದುಕೊಳ್ಳುವುದಿಲ್ಲ" ಎಂದು ಭರವಸೆ ನೀಡಿದರು.
'ಗೀತಕ್ಕನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ'-ಮಧು ಬಂಗಾರಪ್ಪ: "ಬಂಗಾರಪ್ಪನವರಂತೆ ಗೀತಕ್ಕ ಸಹ ನಿಮ್ಮ ಸೇವೆಗೆ ಬಂದಿದ್ದಾರೆ. ಹೋರಾಟದ ಧ್ವನಿಯಾಗುತ್ತಾರೆ. ನಾನು ಎಂಟು ಚುನಾವಣೆಯಲ್ಲಿ ಸೋತಿದ್ದೇನೆ. ಬಂಗಾರಪ್ಪನವರು ಸೋತು ಸಹ ರಾಜಕೀಯ ಮಾಡಿದ್ದರು. ಶರಾವತಿ ಸಂತ್ರಸ್ತರ ಪರವಾಗಿ ಹಾಲಿ ಸಂಸದರು ಏನು ಮಾಡಿದ್ದಾರೆ?. ನಮ್ಮದು ನುಡಿದಂತೆ ನಡೆದ ಸರ್ಕಾರ. ಗೀತಾ ಶಿವರಾಜ್‌ಕುಮಾರ್ ಅವರು 24ರಿಂದ ಗ್ರಾಮ ಪಂಚಾಯತ್ ಮಟ್ಟದವರೆಗೆ ಪ್ರಚಾರ ನಡೆಸುತ್ತಾರೆ. ನಿಮ್ಮ ಮಡಿಲಿಗೆ ಗೀತಕ್ಕನನ್ನು ಹಾಕುತ್ತಿದ್ದೇವೆ. ಬಂಗಾರಪ್ಪನವರ ಧ್ವನಿಯಾಗಿ ಸಂಸತ್ನಲ್ಲಿ ಇರುತ್ತಾರೆ. ಮುಂದಿನ 45 ದಿನ ಪಕ್ಷಕ್ಕೆ ಸೇವೆಯ ಧಾರೆ ಎರೆದರೆ ಗೀತಕ್ಕ ಸಂಸದರಾಗುತ್ತಾರೆ" ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. "ನರೇಂದ್ರ ಮೋದಿಯವರು ಬಂದಾಗ ವಿಐಎಸ್ಎಲ್ ಬಗ್ಗೆ ಮಾತನಾಡಲಿಲ್ಲ. ರಾಘವೇಂದ್ರ ಅವರು ಮೋದಿ ಹೆಸರಿನಲ್ಲಿ ಗೆದ್ದವರು. ತಮ್ಮ ಬಲದ ಮೇಲೆ ಗೆದ್ದಿಲ್ಲ. ಶರಾವತಿ ಸಂತ್ರಸ್ತರಿಗೆ ನ್ಯಾಯ ದೊರೆಯಬೇಕಾದರೆ, ಗೀತಕ್ಕ ಗೆಲ್ಲಬೇಕು" ಎಂದರು.
ಇದನ್ನೂ ಓದಿ:ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್‌ಕುಮಾರ್ ಚುನಾವಣಾ ರ‍್ಯಾಲಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಎಂ.ಶ್ರೀಕಾಂತ್, ಮಂಜುನಾಥ ಗೌಡ ಸೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.