ಕರ್ನಾಟಕ

karnataka

ಕುಮಾರಸ್ವಾಮಿ ಅವರು ರಾಜ್ಯದ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು: ಮುಖ್ಯಮಂತ್ರಿ ಚಂದ್ರು - Lok Sabha Election 2024

By ETV Bharat Karnataka Team

Published : Apr 14, 2024, 10:27 PM IST

ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಪರ ಪ್ರಚಾರದ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.

mukhyamantri chandru
ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ''ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಹೇಳಿಕೆ ಖಂಡನೀಯ. ಈ ಹೇಳಿಕೆಯನ್ನು ಹಿಂಪಡೆದು ರಾಜ್ಯದ ಎಲ್ಲ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು'' ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಪರ ಪ್ರಚಾರದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಹಿಳೆಯರ ಕುರಿತು ಮಾತನಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಕುಮಾರಸ್ವಾಮಿ ಅವರು ತಕ್ಷಣ ರಾಜ್ಯದ ಮಹಿಳೆಯರ ಕ್ಷಮೆಯಾಚಿಸುವ ಮೂಲಕ ತಮ್ಮ ಘನತೆ ಉಳಿಸಿಕೊಳ್ಳಬೇಕು. ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಬೇರೆ ಬೇರೆ ಅರ್ಥಗಳಲ್ಲಿ ಉಲ್ಲೇಖಿಸಲು ಹೊರಟು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ'' ಎಂದು ತಿಳಿಸಿದರು.

''ನಮ್ಮ ಮಾತುಗಳು ನೆರೆದ ನೂರಾರು ಜನರಿಗೆ ಸ್ಫೂರ್ತಿ ನೀಡುವಂತಿರಬೇಕು. ಆದರೆ ರಾಜಕೀಯವಾಗಿ ವಿರೋಧಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂತಹ ವರ್ತನೆಯಿಂದ ಕೆಟ್ಟ ಸಂದೇಶವನ್ನು ಜನತೆಗೆ ಕೊಟ್ಟಂತಾಗುತ್ತದೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ'' ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.

ಇದನ್ನೂಓದಿ:ಎಕ್ಸಟ್ರಾ ಪೆಗ್ ಎಂದರೆ ಎನರ್ಜಿ ಡ್ರಿಂಕ್ : ಸಂಜಯ್ ಪಾಟೀಲ್ ಸಮರ್ಥನೆ - Former MLA Sanjay Patil

ABOUT THE AUTHOR

...view details