ಕರ್ನಾಟಕ

karnataka

ದಾವಣಗೆರೆ ಲೋಕಸಭೆ ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳಿಂದ ಕಸರತ್ತು; ಗರಿಗೆದರಿದ ರಾಜಕೀಯ ಚಟುವಟಿಕೆ

By ETV Bharat Karnataka Team

Published : Feb 21, 2024, 10:38 PM IST

Updated : Feb 22, 2024, 1:20 PM IST

ಬಿಜೆಪಿ ಕಾಂಗ್ರೆಸ್​ ಎರಡು ಪಕ್ಷಗಳಲ್ಲಿ ದಾವಣಗೆರೆ ಲೋಕಸಭೆಯಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ವರಿಷ್ಠರ ಮನವೊಲಿಸಿ ಟಿಕೆಟ್ ಗಿಟ್ಟಿಸಲು ಶತಪ್ರಯತ್ನ ಮುಂದುವರಿಸಿದ್ದಾರೆ. ಆಕಾಂಕ್ಷಿಗಳು ಗ್ರಾಮೀಣ, ನಗರ ಪ್ರದೇಶದಲ್ಲಿ ಸಮಾಜ ಸೇವೆ ಕಾಯಕ್ರಮ ಹಮ್ಮಿಕೊಂಡು ಮತದಾರರನ್ನು ತನ್ನತ್ತ ಸೆಳೆಯುತ್ತಿದ್ದಾರೆ.

Davangere District
ದಾವಣಗೆರೆ ಜಿಲ್ಲೆ

ದಾವಣಗೆರೆ ಲೋಕಸಭೆ ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳಿಂದ ಕಸರತ್ತು

ದಾವಣಗೆರೆ:ಲೋಕಸಭೆ ಚುನಾವಣೆ ಘೋಷಿಸಲು ದಿನಗಣನೆ ಶುರುವಾಗಿದೆ. ಇದರಿಂದ ಮಧ್ಯೆ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ಏರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳಲ್ಲೂ ಆಸೆ ಗರಿಗೆದರುತ್ತಿದೆ. ಕಾಂಗ್ರೆಸ್- ಬಿಜೆಪಿ ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಈ ಬಾರಿ ನಡೆಯುವ ಲೋಕಸಭಾ ಕ್ಷೇತ್ರದ ಚುನಾವಣೆಗೆ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಆದರೆ ಉಭಯ ಪಕ್ಷಗಳಲ್ಲಿ ವರಿಷ್ಠರ ಮನವೊಲಿಕೆ ಸರ್ಕಸ್ ಮುಂದುವರಿದಿದೆ.

ದಾವಣಗೆರೆ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆ ಆಗಿತ್ತು. ಆದರೆ ಕಳೆದ 15 ವರ್ಷಗಳಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತ ಬಂದಿದ್ದು, ಕಾಂಗ್ರೆಸ್ ಭದ್ರ ಕೋಟೆ ಎನ್ನುವ ಹೆಸರು ಮರೀಚಿಕೆ ಆಗಿದೆ. ಈ ಬಾರಿ ಕ್ಷೇತ್ರವನ್ನು ಮರಳಿ ಪಡೆಯಬೇಕೆಂದು ಜಿಲ್ಲಾ ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ.

ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್

ಲೋಕಸಭೆ ಚುನಾವಣೆಗೆ ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಟಿಕೆಟ್​ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವುದರಿಂದ​ ಜೆಡಿಎಸ್​ನಿಂದ ಯಾರು ಕೂಡ ಆಕಾಂಕ್ಷಿಗಳು ಇಲ್ಲದಂತಾಗಿದೆ. ಬಿಜೆಪಿಯಲ್ಲಿ ಕೆ. ಬಿ. ಕೊಟ್ರೇಶ್, ಡಾ ರವಿ, ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಹಾಗೂ ಅವರ ಪುತ್ರ ಅನಿತ್ ಸೇರಿದಂತೆ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್​ಗಾಗಿ ಅವರು ವರಿಷ್ಠರ ಹಿಂದೆ ಬಿದ್ದಿದ್ದಾರೆ. ಇತ್ತ ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಕೂಡ ನಾನು ಆಕಾಂಕ್ಷಿ, ತನಗೇ ಬಿಜೆಪಿ ಟಿಕೆಟ್ ನೀಡಬೇಕೆಂದು ಒತ್ತಡ ಹೇರುತ್ತಿರುವುದು ಬಿಜೆಪಿ ವರಿಷ್ಠರಿಗೆ ಬಿಸಿ ತುಪ್ಪವಾಗಿದೆ.

ಇತ್ತ ಕಾಂಗ್ರೆಸ್‌ ಪಾಳೆಯದಲ್ಲಿಯೂ ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ನ ಸಂಸ್ಥಾಪಕ ವಿನಯ್‌ ಕುಮಾರ್ ಹೆಸರು ಹೆಚ್ಚು ಪ್ರಚಲಿತದಲ್ಲಿದೆ.

ಮಾಜಿ ಶಾಸಕ ರೇಣುಕಾಚಾರ್ಯ

ಮತದಾರರನ್ನು ಸೆಳೆಯಲು ಆಕಾಂಕ್ಷಿಗಳ ಜಿದ್ದಾಜಿದ್ದಿ:ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ ಬಿ ಕೊಟ್ರೇಶ್ ಅವರು ಈಗಾಗಲೇ ಪ್ರಬಲ ಆಕಾಂಕ್ಷಿ ಎಂದು ಘೋಷಿಸಿಕೊಳ್ಳುವ ಮೂಲಕ ಎ ಕೆ ಫೌಂಡೇಶನದಿಂದ ಸಮಾಜ ಸೇವೆ ಹಮ್ಮಿಕೊಂಡು ಮತದಾರರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಇನ್ನು ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ಪುತ್ರರಾದ ವೈದ್ಯ ಡಾ ರವಿ ಕೂಡ ಪ್ರೀತಿ ಆರೈಕೆ ಟ್ರಸ್ಟ್ ಮೂಲಕ ದಾವಣಗೆರೆ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳುತ್ತಿದ್ದಾರೆ. ಇತ್ತ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ಆದರೆ ಹೈಕಮಾಂಡ್ ಏನೂ ನಿರ್ಧಾರ ಮಾಡಿದರೂ, ನಾನು ಬದ್ಧ ಎಂದು ವಿವಿಧ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್‌ ಶಾಮನೂರು

ಮತದಾರರತ್ತ ಕೈ ಆಕಾಂಕ್ಷಿಗಳ ಚಿತ್ತ:ಕಾಂಗ್ರೆಸ್‌ನ ಆಕಾಂಕ್ಷಿಗಳ ವಿಚಾರಕ್ಕೆ ಬಂದ್ರೇ ಹಾಲಿ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್‌ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಆಕಾಂಕ್ಷಿ ಅಲ್ಲ ಎನ್ನುತ್ತಿದ್ದರೂ, ಸಹ ಎಸ್‌ಎಸ್‌ಕೇರ್ ಟ್ರಸ್ಟ್ ಹೆಸರಿನಲ್ಲಿ ಜಿಲ್ಲೆಯಾದ್ಯಂತ ಆರೋಗ್ಯ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇನ್ ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ ಬಿ ವಿನಯ್‌ಕುಮಾರ್ ಪಾದಯಾತ್ರೆ ಹಮ್ಮಿಕೊಂಡು ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಜಿ ಬಿ ವಿನಯ್ ಕುಮಾರ್

ಕಾಂಗ್ರೆಸ್​​​ ಗ್ಯಾರಂಟಿ ನಂಬಿದ್ರೆ, ಮೋದಿ ನೆಚ್ಚಿಕೊಂಡ ಬಿಜೆಪಿ;ಸದ್ಯ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ನೇರ ಪೈಪೋಟಿ ಇದೆ. ಬಿಜೆಪಿಯಲ್ಲಿ ಮೋದಿ ಹವಾ ಜೋರಾಗಿದ್ದು, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ವಿಷಯ ಅಭ್ಯರ್ಥಿ ಗೆಲುವಿಗೆ ವರದಾನವಾಗಲಿದೆ ಎಂದು ಬಿಜೆಪಿ ಆಕಾಂಕ್ಷಿಗಳ ಲೆಕ್ಕಾಚಾರ ಆಗಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರ ಕೆಲಸ ಮಾಡುತ್ತೇವೆ ಎನ್ನುವ ಮಾತು ಪ್ರತಿಯೊಬ್ಬ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳಿಂದ ಕೇಳಿಬರುತ್ತಿದೆ.

ಕೆ ಬಿ ಕೊಟ್ರೇಶ್

ಇತ್ತ ಕಾಂಗ್ರೆಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಜಾರಿ ಮಾಡಿರುವ ಐದು ಗ್ಯಾರಂಟಿಗಳು ತಮ್ಮ ಕೈ ಹಿಡಿಯಲಿದೆ ಎಂದು ಕೈ ಆಕಾಂಕ್ಷಿಗಳ ಲೆಕ್ಕಾಚಾರ ಆಗಿದೆ. ಜಿ ಬಿ ವಿನಯ್ ಕುಮಾರ್ ಅವರು ಸಿಎಂ ಸಿದ್ದರಾಮಯ್ಯನವರೊಂದಿಗೆ ಒಳ್ಳೆ ಸ್ನೇಹ ಇಟ್ಟುಕೊಂಡಿದ್ದು, ಅವರಿಗೆ ಟಿಕೆಟ್ ನೀಡಲಿದ್ದಾರೆ ಎಂದು ಕಾದು ಕೂತಿದ್ದಾರೆ. ಇನ್ನು ಪ್ರಭಾ ಮಲ್ಲಿಕಾರ್ಜುನ್‌ ಅವರು ನಾನು ಟಿಕೆಟ್ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಕೊಳ್ಳದೆ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ, ಅವಕಾಶ ಬಂದ್ರೆ ಕಾದು ನೋಡ್ಬೇಕು, ಅದ್ರೇ ನಮ್ಮ ಮನೆಯಲ್ಲಿ ಈ ಟಿಕೆಟ್ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂಓದಿ:ಧಾರವಾಡ ಲೋಕಸಭೆ ಕ್ಷೇತ್ರ: ಕೈ ಟಿಕೆಟ್​ಗಾಗಿ ಪೈಪೋಟಿ, ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ

Last Updated : Feb 22, 2024, 1:20 PM IST

ABOUT THE AUTHOR

...view details