ಕರ್ನಾಟಕ

karnataka

ಪ್ರಜ್ವಲ್ ರೇವಣ್ಣ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ - Restraining Order

By ETV Bharat Karnataka Team

Published : May 6, 2024, 6:42 PM IST

ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಪ್ರಕರಣ ಸಂಬಂಧ ಸುದ್ದಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಹೆಸರು ಬಳಸದಂತೆ ಮಾಧ್ಯಮಗಳಿಗೆ ಕೋರ್ಟ್​​ ನಿರ್ಬಂಧಕಾಜ್ಞೆ ವಿಧಿಸಿದೆ.

deve gowda and kumaraswamy
ಹೆಚ್​​.ಡಿ.ದೇವೇಗೌಡ, ಹೆಚ್​​.ಡಿ.ಕುಮಾರಸ್ವಾಮಿ (ETV Bharat)

ಬೆಂಗಳೂರು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಆರೋಪ ಸಂಬಂಧ ಸುದ್ದಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ಬಳಸದಂತೆ ಮಾಧ್ಯಮಗಳಿಗೆ ನಗರದ 34ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ.

ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಅಲ್ಲದೇ, ಸಾಕ್ಷ್ಯಗಳಿಲ್ಲದೇ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಇಬ್ಬರೂ ನಾಯಕರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಆದೇಶದಲ್ಲಿ ಕೋರ್ಟ್ ಹೇಳಿದೆ.

ಜೊತೆಗೆ, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಸಾಕ್ಷ್ಯಗಳಿಲ್ಲದೇ ಅವರ ಘನತೆ ಹಾಗೂ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಬಾರದು ಎಂದು ತಾತ್ಕಾಲಿಕವಾಗಿ ನಿರ್ಬಂಧಕಾಜ್ಞೆ ವಿಧಿಸಿದೆ. ಮಾತ್ರವಲ್ಲದೇ ಸತ್ಯಾಂಶವಿದ್ದು, ಸೂಕ್ತ ಸಾಕ್ಷ್ಯಧಾರಗಳು ಇದ್ದರೆ ಮಾತ್ರ ಸುದ್ದಿ ಪ್ರಸಾರ ಮಾಡಬಹುದು ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಪ್ರಕರಣದ ಕುರಿತಾಗಿ ಪ್ರತಿ ಬಾರಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಜೊತೆಗೆ ಹೆಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು. ನಮ್ಮ ಕುಟುಂಬಕ್ಕೂ ರೇವಣ್ಣ ಕುಟುಂಬಕ್ಕೂ ಸಂಬಂಧ ಇಲ್ಲ, ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಕುಮಾರಸ್ವಾಮಿ ಹೇಳಿದ್ದರು. ಈ ನಡುವೆ ತಮ್ಮ ಹೆಸರನ್ನು ಬಳಕೆ ಮಾಡದಂತೆ ಉಭಯ ನಾಯಕರು ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯಲ್ಲಿ ಏನಿದೆ?:ಹಾಸನ ಸಂಸದ ಪ್ರಜ್ವಲ್ ರೇವಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ಹಾಗೂ ಹೆಚ್.ಡಿ.ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಆರೋಪ ಪ್ರಕರಣಗಳ ಕುರಿತಾಗಿ ಮಾಧ್ಯಮಗಳು ಪ್ರಸಾರ ಮಾಡುವ ಸುದ್ದಿಯಲ್ಲಿ ತಮ್ಮ ಕುಟುಂಬವನ್ನು ಎಳೆದು ತರಲಾಗಿದೆ. ಸರ್ಕಾರವು ಈ ಸಂಬಂಧ ಎಸ್‌ಐಟಿ ತನಿಖಾ ತಂಡ ರಚಿಸಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ. ಆದರೆ ಸಾಮಾಜಿಕ ಜಾಲತಾಣ, ದಿನಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ನಮ್ಮ ಕುಟುಂಬ ಸದಸ್ಯರ ಫೋಟೋ ಮಾರ್ಪಿಂಗ್, ಚಿತ್ರ, ವಿಡಿಯೋಗಳ ಬಳಕೆ ಮಾಡಲಾಗುತ್ತಿದೆ.

ಈ ಮೂಲಕ ನಮ್ಮನ್ನು ಸುಖಾಸುಮ್ಮನೆ ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ನಮಗೂ ಹಾಗೂ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ರೀತಿಯ ಅಪಪ್ರಚಾರದಿಂದ ನಮ್ಮ ಕುಟುಂಬದ ಘನತೆಗೆ ಹಾಗೂ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಈ ಪ್ರಕರಣ ಕುರಿತಾಗಿ ಮಾಧ್ಯಮಗಳು ತಮ್ಮ ವಿರುದ್ಧ ಸುದ್ದಿ ಪ್ರಸಾರ ಹಾಗೂ ಪ್ರಕಟಣೆ ಮಾಡದಂತೆ ನಿರ್ಬಂಧಕಾಜ್ಞೆ ವಿಧಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೋರಿದ್ದರು.

ಇದನ್ನೂ ಓದಿ:ರೇಸ್​ ಕೋರ್ಸ್​ನಲ್ಲಿ ಅಕ್ರಮ ಬೆಟ್ಟಿಂಗ್​ ಆರೋಪ: ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ - Illegal Betting Case

ABOUT THE AUTHOR

...view details