ಕರ್ನಾಟಕ

karnataka

ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಾಯಕರು

By ETV Bharat Karnataka Team

Published : Feb 29, 2024, 2:45 PM IST

ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

BJP leaders complaint against congress to the governor
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಾಯಕರು

ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಾಯಕರು

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ದೇಶವಿರೋಧಿಗಳ ರಕ್ಷಣೆ ಮಾಡುತ್ತಿದೆ. ಹಾಗಾಗಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್​ನವರು ‌ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ಸತ್ಯಕ್ಕೆ ದೂರವಾಗಿದೆ. ಇದೀಗ ಪಾಕಿಸ್ತಾನ‌ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತಾ ನೈತಿಕವಾಗಿ ದಿವಾಳಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ‌ ಎಂದು ಬೊಮ್ಮಾಯಿ ಆರೋಪಿಸಿದರು.

ವಿಧಾನಸೌಧದಲ್ಲಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ದೇಶದ ರಕ್ಷಣೆಗೆ ಆಪತ್ತು ಉಂಟಾಗಿದೆ. ಅಧಿವೇಶನ ಮುಗಿದ ತಕ್ಷಣ ಇದೆಲ್ಲವನ್ನೂ ಮರೆತು ಬಿಡುತ್ತಾರೆ ಎಂದು ಕಾಂಗ್ರೆಸ್​ನವರು ಅಂದುಕೊಂಡಿದ್ದಾರೆ. ಆದರೆ, ರಾಜ್ಯದ ಜನರು ಮರೆಯುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಪಾಕ್ ಪರವಾಗಿ ಸರ್ಕಾರ ನಿಲ್ಲುತ್ತದೆ ಎಂದರೆ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಸರ್ಕಾರ ಎಷ್ಟು ಬೇಗ ತೊಲಗುತ್ತದೋ ಅಷ್ಟು ಬೇಗ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಪಾಕಿಸ್ತಾನದ ಪರ ಘೊಷಣೆ ಕೂಗಿರುವುದನ್ನು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇವರು ಎಫ್‌ಎಸ್‌ಎಲ್ ವರದಿ ಕಥೆ ಏಕೆ ಹೇಳುತ್ತಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದಾಗ ಎಫ್‌ಎಸ್‌ಎಲ್ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು. ಇದರಲ್ಲಿ ಏನೂ ಇಲ್ಲ ಎಂದಾದರೆ ಪೊಲೀಸರೇಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ರಾಜ್ಯದ ಜನರು ಪಾಕಿಸ್ತಾನ ಪರ ಇರುವವರನ್ನು ಆಯ್ಕೆ ಮಾಡಿಲ್ಲ. ಇದು ಕನ್ನಡಿಗರ, ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ. ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ:'ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು': ಸಿಎಂ ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಆರೋಪಿಗಳ ಬಂಧನಕ್ಕೆ ಧ್ವನಿ ಎತ್ತಿದರೂ ಸಹ ಬಂಧನವಾಗಿಲ್ಲ. ಮಾಧ್ಯಮಗಳು ಪ್ರಸಾರ ಮಾಡಿರುವ ದೃಶ್ಯಗಳನ್ನು ತಮಗೆ ಬೇಕಾದಂತೆ ಮಾಡಿಕೊಂಡಿರುವುದಾಗಿ ಕೆಲವು ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಎಫ್ಎಸ್ಎಲ್ ವರದಿಯನ್ನೇ ತಿರುಚುವ ಮೂಲಕ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿದೆ. ಹಾಗಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪಾಕ್ ಪರ ಘೋಷಣೆ ವಿಷಯದ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು; ಸದನದ ಬಾವಿಗಿಳಿದು ಧರಣಿ

ಧರ್ಮೋ ರಕ್ಷತಿ‌ ರಕ್ಷಿತಃ, ಸರ್ಕಾರಿ ಕೆಲಸ ದೇವರ ಕೆಲಸ ಎಂದು‌ ಕೆಂಗಲ್ ಹನುಮಂತಯ್ಯನವರು ವಿಧಾನಸೌಧದಲ್ಲಿ ಬರೆಸಿದರು. ಆದರೆ ಕಾಂಗ್ರೆಸ್ ಭಯೋತ್ಪಾದಕರ ಕೆಲಸಕ್ಕೆ ಬಳಕೆ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅಂತಹ ಘಟನೆಯೇ ನಡೆದಿಲ್ಲ ಅಂತಾರೆ. ಪ್ರಿಯಾಂಕ್ ಖರ್ಗೆಯವರು ಎಫ್ಎಸ್ಎಲ್ ವರದಿ ಹೀಗೇ ಬರುತ್ತೆ ಅಂತಾರೆ. ಹಾಗಾಗಿ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯಪಾಲರರಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.

ABOUT THE AUTHOR

...view details