ಕರ್ನಾಟಕ

karnataka

ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಒಟ್ಟು ಆಸ್ತಿ ಎಷ್ಟು ಗೊತ್ತಾ? - GAYATHRI SIDDESHWARA ASSET

By ETV Bharat Karnataka Team

Published : Apr 15, 2024, 4:04 PM IST

Updated : Apr 16, 2024, 6:39 AM IST

ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ದಾವಣಗೆರೆ: ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ರಿಂದ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಕೆ
ದಾವಣಗೆರೆ: ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ರಿಂದ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಕೆ

ನಾಮಪತ್ರ ಸಲ್ಲಿಕೆ ಬಳಿಕ ಜಿ ಎಂ ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ

ದಾವಣಗೆರೆ:ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ತಮ್ಮ ಆಸ್ತಿಯ ಒಟ್ಟು ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ.

ಅಫಿಡವಿಟ್​ ಮಾಹಿತಿಯಂತೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿಯಾದ ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಒಟ್ಟು ಆಸ್ತಿ 32.84 ಕೋಟಿ ರೂ ಆಗಿದೆ. ಸ್ಥಿರಾಸ್ತಿ 6.11 ಕೋಟಿ ಹಾಗೂ ಚರಾಸ್ತಿ 26.73 ಕೋಟಿ ಸೇರಿ ಒಟ್ಟು 32.84 ಕೋಟಿ ರೂ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಸದ್ಯ ಅವರ ಕೈಯಲ್ಲಿ 87,949 ನಗದು ಇದ್ದು, ಬ್ಯಾಂಕ್ ಖಾತೆಯಲ್ಲಿ 48.44 ಲಕ್ಷ ಹಣವಿದೆ ಎಂದು ಅಫಿಡವಿಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಗಾಯಿತ್ರಿಯವರು ವಿಮಾ ಪಾಲಿಸಿಯಲ್ಲಿ 22.34 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಇನ್ನು ಅವರ ಬಳಿ 3.50 ಕೆಜಿ ಚಿನ್ನ, 5.50 ಕೆ.ಜಿ.ಬೆಳ್ಳಿ ಹೊಂದಿದ್ದಾರೆ. 14.70 ಲಕ್ಷ ಮೌಲ್ಯದ 2.04 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. 5.08 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. 21.50 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆಗಳು ಇದ್ದು, 5.89 ಲಕ್ಷ ಸಾಲವಿದೆ. ಗಾಯಿತ್ರಿ ಸಿದ್ದೇಶ್ವರ್ ಅವರು ಯಾವುದೇ ಸ್ವಂತ ವಾಹನ ಹೊಂದಿಲ್ಲ. ಅಲ್ಲದೇ ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣ ಇಲ್ಲ.

ನಾಮಪತ್ರ ಸಲ್ಲಿಕೆ:ಕ್ಷೇತ್ರದಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಇಂದು ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಪತಿ, ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್, ಪುತ್ರ ಅನಿತ್ ಕುಮಾರ್ ಮತ್ತು ಪುತ್ರಿ ಅಶ್ವಿನಿ ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ ಬಳಿಕ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಪ್ರಚಾರಕ್ಕೆ ತೆರಳಿದಾಗ ಮತದಾರರು ಮನೆ ಮಗಳಂತೆ ಕಾಣುತ್ತಿದ್ದಾರೆ. ಮತ ಕೊಡಿ ಎಂದು ಹೇಳುತ್ತಿದ್ದಂತೆ ಎಲ್ಲರೂ ನಗು ಮೊಗದಲ್ಲಿ ಸ್ವಾಗತ ಮಾಡ್ತಿದ್ದಾರೆ. ನಾನು ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಚಾರ ನನಗೆ ಹೊಸದೇನು ಅಲ್ಲ, ನನ್ನ ಪತಿ ಜಿ ಎಂ ಸಿದ್ದೇಶ್ವರ್ ಅಭ್ಯರ್ಥಿಯಾಗಿದ್ದಾಗ ತೆರೆಯ ಹಿಂದೆ ಪ್ರಚಾರ ಮಾಡ್ತಿದ್ದೆ, ಇದೀಗ ತೆರೆಯ ಮುಂದೆ ಬಂದಿರುವೆ ಎಂದು ಹೇಳಿದರು.

ಸಂಸದ ಜಿ.ಎಂ‌.ಸಿದ್ದೇಶ್ವರ್ ಮಾತನಾಡಿ, ರಾಷ್ಟ್ರೀಯ ನಾಯಕರು ಟಿಕೆಟ್ ನೀಡಿದ್ದರಿಂದ ಗಾಯತ್ರಿ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಗಾಯತ್ರಿ ಸಿದ್ದೇಶ್ವರ್ ಅವರನ್ನು ಜನರು ಗೆಲ್ಲಿಸುತ್ತಾರೆ. ನಾನು ಮಾಡಿರುವ ಕೆಲಸಗಳು ನನ್ನ ಪತ್ನಿಯ ಗೆಲುವಿಗೆ ಸಹಕಾರಿಯಾಗಲಿವೆ. ಏ.19ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬೈರತಿ ಬಸವರಾಜ್, ಮುರುಗೇಶ್​ ನಿರಾಣಿ ಹಾಗೂ ಸಿನಿಮಾ ನಟಿ ಶೃತಿ ಬರಲಿದ್ದಾರೆ ಎಂದು ತಿಳಿಸಿದರು.

ಏಪ್ರಿಲ್ 19ಕ್ಕೆ ಗಾಯತ್ರಿ ಸಿದ್ದೇಶ್ವರ್ ಬೆಂಬಲಿಗರ ಜೊತೆ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಂದು ಮೆರವಣಿಗೆಯಲ್ಲಿ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು, ಮುರುಗೇಶ್ ನಿರಾಣಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರು ಭಾಗಿವಹಿಸಲಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್​ ಅಭ್ಯರ್ಥಿಯಿಂದ ಎರಡನೇ ಬಾರಿಗೆ ನಾಮಪತ್ರ ಸಲ್ಲಿಕೆ: ಮತ್ತೊಂದೆಡೆ, ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಇಂದು ಎರಡನೇ ಬಾರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಏಪ್ರಿಲ್ 18ರಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾ ಅವರು ತಮ್ಮ ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಮೂರನೇ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಂದು ಮೆರವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್‌, ಲೋಕಸಭಾ ಕ್ಷೇತ್ರ ಎಂದರೇ ದೊಡ್ಡ ಕ್ಷೇತ್ರ, ಇಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ರೈತರು, ಯುವಕರು, ಮಹಿಳೆಯರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಕಾಂಗ್ರೆಸ್​ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳ ಲಾಭ ಪಡೆದ ಜನ ಮನಃಪೂರ್ವಕವಾಗಿ ಆಶೀರ್ವಾದ ಮಾಡುತ್ತಾರೆ. ಮಹಿಳೆಯರ ಆಶೀರ್ವಾದ ನಮ್ಮ ಮೇಲೆ ಇದೆ ಎಂದು ಹೇಳಿದರು.

ಸಚಿವ ಎಸ್​.ಎಸ್ ಮಲ್ಲಿಕಾರ್ಜುನ್‌ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆ ವಾತಾವರಣ ಸೃಷ್ಟಿಯಾಗಿದೆ. ನಾಲ್ಕೈದು ಜನ ಬಿಜೆಪಿ ಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ ಅಲ್ಲ, ದುಡ್ಡಿನ ಪಕ್ಷವಾಗಿದೆ. ಏ.18ಕ್ಕೆ ಮೂರನೇ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಅಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ್ ಜೊಲ್ಲೆ ನಾಮಪತ್ರ ಸಲ್ಲಿಕೆ - Annasaheb Jolle Nomination

Last Updated :Apr 16, 2024, 6:39 AM IST

ABOUT THE AUTHOR

...view details