ಕರ್ನಾಟಕ

karnataka

ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್: ಗುಟ್ಟು ಬಿಟ್ಟು ಕೊಡದ ಹೈಕಮಾಂಡ್, ಆಕಾಂಕ್ಷಿತರಲ್ಲಿ ಶುರುವಾಗಿದೆ ಟೆನ್ಶನ್​

By ETV Bharat Karnataka Team

Published : Mar 1, 2024, 3:50 PM IST

ಹಾಲಿ ಸಂಸದೆ ಮಂಗಳಾ ಅಂಗಡಿ ಸೇರಿದಂತೆ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಏಳಕ್ಕೂ ಅಧಿಕ ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಗುಟ್ಟು ಬಿಟ್ಟುಕೊಡದ ಹೈಕಮಾಂಡ್ ನಡೆಯಿಂದ ಆಕಾಂಕ್ಷಿಗಳಲ್ಲಿ ಟೆನ್ಶನ್ ಶುರುವಾಗಿದೆ.

Belagavi
ಬೆಳಗಾವಿ

ಬೆಳಗಾವಿ:ಈ ಬಾರಿ ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್‌ ಯಾರಿಗೆ ಕೊಡಬೇಕು ಎಂಬ ಬಗ್ಗೆ ಹೈಕಮಾಂಡ್ ಮಾತ್ರ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಹೈಕಮಾಂಡ್ ಮತ್ತೆ ಅವಕಾಶ ನೀಡುತ್ತಾ ಅಥವಾ ಹೊಸ ಅಭ್ಯರ್ಥಿಗೆ ಮಣೆ ಹಾಕುತ್ತಾ ಎಂಬ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ಇದರಿಂದ 8ಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ಹಾಲಿ ಸಂಸದೆ ಮಂಗಳಾ ಅಂಗಡಿ ಸೇರಿದಂತೆ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಏಳಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಸಂಸದ ರಮೇಶ್ ‌ಕತ್ತಿ, ಮಾಜಿ ಶಾಸಕ ಅನಿಲ್‌ ಬೆನಕೆ, ಸಂಜಯ್ ಪಾಟೀಲ, ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಂಕರಗೌಡ ಪಾಟೀಲ, ಮಹಾಂತೇಶ ವಕ್ಕುಂದ ಅವರ ಮಧ್ಯೆ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದೆ.

ಸಂಸದೆ ಮಂಗಳಾ ಅಂಗಡಿ

ಈಗಾಗಲೇ ಹಲವು ಸಲ ದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಭೇಟಿ ಮಾಡಿ‌ ಬಂದಿದ್ದಾರೆ. ಅಲ್ಲದೇ ಕೇಂದ್ರ ‌ಸಚಿವ ಪ್ರಹ್ಲಾದ್ ‌ಜೋಶಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಕೂಡ ಭೇಟಿಯಾಗಿ ಚರ್ಚಿಸಿದ್ದಾರೆ. ಇನ್ನು ಯಾವ ಆಕಾಂಕ್ಷಿಗೂ ಹೈಕಮಾಂಡ್ ಸ್ಪಷ್ಟ ಭರವಸೆ ನೀಡದಿರುವ ಹಿನ್ನೆಲೆ ಆಕಾಂಕ್ಷಿಗಳಲ್ಲಿ ಟೆನ್ಶನ್ ಹೆಚ್ಚಾಗಿದೆ.

ಉತ್ತರ ಕರ್ನಾಟಕದ ಏಕೈಕ ಮಹಿಳಾ ಸಂಸದೆ:ಸಂಸದೆ ಮಂಗಳಾ ಅಂಗಡಿ ಈಟಿವಿ ಭಾರತ ಜೊತೆಗೆ ಮಾತನಾಡಿ, ನನಗೆ ಟಿಕೆಟ್ ಸಿಕ್ಕೆ ಸಿಗುತ್ತದೆ. ಯಾಕೆಂದರೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿದ್ದು, ನಾನು ಉತ್ತರ ಕರ್ನಾಟಕದ ಏಕೈಕ ಮಹಿಳಾ ಸಂಸದೆ. ನನ್ನ ಅವಧಿಯಲ್ಲಿ 3 ಸಾವಿರ ಕೋಟಿ ರೂಪಾಯಿಗಿಂತ ಅಧಿಕ ಅನುದಾನ ಜಿಲ್ಲೆಗೆ ತಂದಿದ್ದೇನೆ. ದಿ.ಸುರೇಶ ಅಂಗಡಿ ಅವರು ಕೂಡ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಜನ ನನ್ನ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಅನಿಲ ಬೆನಕೆ

ಬಿಜೆಪಿ ಸೈನಿಕನಂತೆ ಕೆಲಸ ಮಾಡಿದ್ದೇನೆ:ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಟಿಕೆಟ್ ವಂಚಿತ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಐದು ಚುನಾವಣೆಗಳಲ್ಲಿ ದಿ.ಸುರೇಶ ಅಂಗಡಿ ಮತ್ತ ಅವರ ಪತ್ನಿಯನ್ನು ಗೆಲ್ಲಿಸಲು ಶ್ರಮಿಸಿದ್ದೇನೆ. ಕಳೆದ ಸಲ ಟಿಕೆಟ್ ಸಿಗದಿದ್ದರೂ ಬಿಜೆಪಿ ಸೈನಿಕನಂತೆ ಕೆಲಸ ಮಾಡಿದ್ದೇನೆ. ಲೋಕಸಭೆಗೆ ನಾನು ಪ್ರಬಲ ಆಕಾಂಕ್ಷಿ. ಆದರೆ ಯಾವುದೇ ಲಾಬಿ ಮಾಡುವುದಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂದು ಅನಿಲ ಬೆನಕೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೆಳಗಾವಿ ಲೋಕಸಭೆಗೆ ಶೆಟ್ಟರ್ ಹೆಸರು: ಬೆಳಗಾವಿ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿ ಬರುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶೆಟ್ಟರ್, ಹೈಕಮಾಂಡ್ ತೀರ್ಮಾನಕ್ಕ ಬದ್ಧ ಎಂದಿರೋದು, ಬೆಳಗಾವಿಯಿಂದ ಶೆಟ್ಟರ್ ಸ್ಪರ್ಧಿಸುತ್ತಾರೆ ಎಂಬ ಬಗ್ಗೆಯೂ ಚರ್ಚೆ‌‌ ಶುರುವಾಗಿದೆ.

ವಿಧಾನ ಪರಿಷತ್ ಸ್ಥಾನಕ್ಕೆ ‌ರಾಜೀನಾಮೆ ನೀಡಿ ಮರಳಿ ಬಿಜೆಪಿ ಸೇರಿರುವ ಶೆಟ್ಟರ್ ಹಾಲಿ ಸಂಸದೆ ಮಂಗಳಾ ಅಂಗಡಿ ಬೀಗರು. ಬಿಎಸ್‌ವೈ ಸಂಪುಟದಲ್ಲಿದ್ದಾಗ ಬೆಳಗಾವಿ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಜಗದೀಶ ಶೆಟ್ಟರ್‌ಗೆ ಬೆಳಗಾವಿಯಿಂದ ಸ್ಪರ್ಧಿಸುವಂತೆ ಹೈಕಮಾಂಡ್‌ನಿಂದ ಸೂಚನೆ ಬಂದಿದೆ ಎಂಬ ಮಾತು ಕೇಳಿ ಬಂದಿದೆ. ಇನ್ನು ವಿಧಾನಸಭೆ ‌ಚುನಾವಣೆಯಲ್ಲಿ ಟಿಕೆಟ್ ಮಿಸ್ ಆಗಿದ್ದಕ್ಕೆ ಲೋಕಸಭೆ ಚುನಾವಣೆ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಸಾಧ್ಯತೆ ಹೆಚ್ಚಿದೆ.

ರಮೇಶ್ ‌ಕತ್ತಿ

ಕೂಡಲಸಂಗಮ ಶ್ರೀಗಳಿಂದ ಒತ್ತಡ:ಮತ್ತೊಂದೆಡೆ ಪಂಚಮಸಾಲಿ ‌ಸಮಾಜದ ಐವರಿಗೆ ಟಿಕೆಟ್ ನೀಡಬೇಕೆಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಬೇಡಿಕೆ ಇಟ್ಟಿದ್ದಾರೆ. ಆ ಹಿನ್ನೆಲೆ ಪಂಚಮಸಾಲಿ ಕೋಟಾದ ಹಿರಿಯರ ವಿಭಾಗದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ‌ಕಡಾಡಿ ಕೂಡ ಟಿಕೆಟ್ ರೇಸ್​ನಲ್ಲಿದ್ದಾರೆ.

ಶಾಸಕ ರಮೇಶ ಜಾರಕಿಹೊಳಿ

ಅದೇ ರೀತಿ ವಿಧಾನಪರಿಷತ್‌‌ ಚುನಾವಣೆಯಲ್ಲಿ ಸೋತಿರುವ ಮಹಾಂತೇಶ ಕವಟಗಿಮಠ ಲೋಕಸಭೆಗೆ ಸ್ಪರ್ಧಿಸುವುದಾಗಿ ಕ್ಷೇತ್ರದಾದ್ಯಂತ ಓಡಾಡುತ್ತಿದ್ದು, ಕಬಡ್ಡಿ-ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದಾರೆ. ಇನ್ನು ಚಿಕ್ಕೋಡಿ ‌ಕ್ಷೇತ್ರಕ್ಕೆ ಟಿಕೆಟ್ ಕೊಡದಿದ್ರೆ ಬೆಳಗಾವಿ ಟಿಕೆಟ್ ಆದ್ರೂ ‌ನೀಡುವಂತೆ ರಮೇಶ್ ‌ಕತ್ತಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಹಿರಿಯ ಮುಖಂಡ, ಬಿಎಸ್​ವೈ ಆಪ್ತ ಶಂಕರಗೌಡ ಪಾಟೀಲ, ಹೊಸಮುಖ ಹಾಗೂ ಯುವಕರ ವಿಭಾಗದಲ್ಲಿ ಮಹಾಂತೇಶ ‌ವಕ್ಕುಂದ ಕೂಡ ಟಿಕೆಟ್ ರೇಸ್​​ನಲ್ಲಿದ್ದಾರೆ.

ಮಹಾಂತೇಶ ಕವಟಗಿಮಠ

ಜಾರಕಿಹೊಳಿ ಬ್ರದರ್ಸ್ ಸೈಲೆಂಟ್:ಇನ್ನು ಲೋಕಸಭೆ ಚುನಾವಣೆ ಹತ್ತಿರವಾದರೂ ಮಾಜಿ ಸಚಿವ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮಾತ್ರ ಅಭ್ಯರ್ಥಿಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ. ಜಾರಕಿಹೊಳಿ ಸಹೋದರರ ಸೈಲೆಂಟ್ ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ಹೈಕಮಾಂಡ್ ಕೊನೆ ಗಳಿಗೆಯಲ್ಲಿ ಅಳೆದು ತೂಗಿ ಯಾರಿಗೆ ಟಿಕೆಟ್ ನೀಡುತ್ತೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ‌.

ಇದನ್ನೂಓದಿ:ಧಾರವಾಡ ಲೋಕಸಭೆ ಕ್ಷೇತ್ರ: ಕೈ ಟಿಕೆಟ್​ಗಾಗಿ ಪೈಪೋಟಿ, ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ

ABOUT THE AUTHOR

...view details