ಕರ್ನಾಟಕ

karnataka

ನಮ್ಮ ಕುಟುಂಬದಿಂದ ಯಾರೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ: ಸಚಿವ ಸತೀಶ್​ ಜಾರಕಿಹೊಳಿ

By ETV Bharat Karnataka Team

Published : Feb 24, 2024, 7:53 PM IST

Updated : Feb 24, 2024, 8:02 PM IST

ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಮೂವರ ಹೆಸರನ್ನು ಹಾಗೂ ಬೆಳಗಾವಿ ಕ್ಷೇತ್ರಕ್ಕೆ ಇಬ್ಬರು ಹೆಸರನ್ನು ಅಂತಿಮ ಗೊಳಿಸಿ ಹೈಕಮಾಂಡ್​​ಗೆ ಕಳುಹಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

Minister Satish Jarkiholi spoke to the media.
ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.

ಸಚಿವ ಸತೀಶ್​ ಜಾರಕಿಹೊಳಿ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಳಗಾವಿ: ಚಿಕ್ಕೋಡಿ ಕ್ಷೇತ್ರಕ್ಕೆ ಮೂವರ ಹೆಸರನ್ನು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್​​ಗೆ ಕಳುಹಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿ ಮಾಡಿ ಹೈಕಮಾಂಡ್​ಗೆ ಕಳಿಸುವುದಷ್ಟೇ ನಮ್ಮ ಕರ್ತವ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ನಮ್ಮ ಕುಟುಂಬದ ಯಾವ ಸದಸ್ಯರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮತ್ತೆ ಪುನರುಚ್ಚರಿಸಿದರು. ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಸ್ಥಾನಗಳಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಹೆಚ್ಚು ಜನಪ್ರಿಯತೆ ಗಳಿಸಿರುವ ಇಬ್ಬರು ಉತ್ತಮ ಅಭ್ಯರ್ಥಿಗಳನ್ನು ಪಕ್ಷದ ಸ್ಥಳೀಯ ಘಟಕ ಆಯ್ಕೆ ಮಾಡುತ್ತದೆ. ಆದರೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸಮುದಾಯದಲ್ಲಿ ಮಾತ್ರವಲ್ಲದೆ ಇತರ ಸಮುದಾಯಗಳಲ್ಲಿಯೂ ಜನಪ್ರಿಯರಾಗಿರಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ತೋರಿದರೆ ಅವರ ಪುತ್ರನಿಗೆ ಟಿಕೆಟ್ ನೀಡಲಾಗುವುದು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನಾಗಲಿ ಅಥವಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಪುತ್ರಿ ಪ್ರಿಯಂಕಾ ಜಾರಕಿಹೊಳಿಯಾಗಲಿ ಸ್ಪರ್ಧೆ ಮಾಡುವುದಿಲ್ಲ. ನಾವು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುತ್ತೇವೆ. ಅಲ್ಲದೇ ನಮ್ಮ ಕ್ಷೇತ್ರದಲ್ಲಿ ಕುಟುಂಬ ಮುಖ್ಯ ಆಗಲ್ಲ. ಇಲ್ಲಿ ಏನೇ ಇದ್ದರೂ ಗೆಲ್ಲುವುದೊಂದೇ ಮುಖ್ಯ ಎಂದು ಹೇಳಿದರು.

ಮೂರು ದಿನಗಳಲ್ಲಿ 25 ಜನ ಸಾವು, ಅಪಘಾತ ತಡೆಗೆ ಜಾಗೃತಿ;ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 25 ಜನ ಅಪಘಾತದಲ್ಲಿ ಸಾವನ್ನಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಪಘಾತ ತಡೆಗಟ್ಟಲು ಪೂಲೀಸ್ ಇಲಾಖೆ, ಆರ್‌ಟಿಓ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆ ಇರುತ್ತದೆ. ಸರ್ವಿಸ್ ರಸ್ತೆಗಳು ಇರುತ್ತವೆ. ಆದರೆ ರಾಜ್ಯ ಹೆದ್ದಾರಿ, ಸ್ಥಳೀಯ ರಸ್ತೆಗಳಲ್ಲಿ ಆ ರೀತಿ ಇರುವುದಿಲ್ಲ. ಆದ್ದರಿಂದ ಅಪಘಾತ ತಡೆಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ರಾಜ್ಯಸಭೆ ಚುನಾವಣೆ:ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ಮನೆಗೆ ಸಚಿವರನ್ನು ಔತಣಕೂಟಕ್ಕೆ ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ರಣದೀಪ್‌ಸಿಂಗ್ ಸುರ್ಜೇವಾಲಾ ಅವರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಚಂಡೀಗಡಕ್ಕೆ ಹೋಗಿದ್ದೆ. ಅನೇಕರು ಅಲ್ಲೇ ಇದ್ದರು. ಅದೇ ಕಾರಣಕ್ಕಾಗಿ ಊಟಕ್ಕೆ ಹೋಗಿಲ್ಲ. ನನಗೂ ಆಹ್ವಾನಿಸಿದ್ದರು. ಇನ್ನು ರಾಜ್ಯಸಭೆ ಚುನಾವಣೆ ಸಂಬಂಧ ಇನ್ನೆರಡು ದಿನಗಳಲ್ಲಿ ಸಭೆ ಇದೆ. ಆ ಸಭೆಗೆ ಹೋಗುತ್ತೇನೆಂದು ತಿಳಿಸಿದರು.

ದೇವಾಲಯಗಳ ಆದಾಯ ಗ್ಯಾರಂಟಿ ಯೋಜನೆಗೆ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ನಾವು ಎಲ್ಲಾ ತೆರಿಗೆ ಕೂಡಿಸಿ ಕೇಂದ್ರಕ್ಕೆ ಕಳಿಸುತ್ತೇವೆ. ಮಸೀದಿ, ದೇವಸ್ಥಾನ, ಚರ್ಚ್ ಇರಬಹುದು. ತೆರಿಗೆ ಸಂಗ್ರಹವಾದ ಬಳಿಕ ಯಾರಿಗೆ ಅವಶ್ಯಕತೆ ಇದೆ. ಜಾತಿ, ಧರ್ಮಗಳ ಆಧಾರದ ಮೇಲೆ ಅಭಿವೃದ್ಧಿ ಮಾಡುವುದಿಲ್ಲ. ಎಲ್ಲರಿಗೂ ಸಮಾನವಾಗಿ ನೋಡಿಕೊಳ್ಳುತ್ತೇವೆ ಎಂದು ಸತೀಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂಓದಿ:ಎಲ್ಲಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ: ಡಿಸಿಎಂ ಡಿಕೆಶಿ

Last Updated :Feb 24, 2024, 8:02 PM IST

ABOUT THE AUTHOR

...view details