ಕರ್ನಾಟಕ

karnataka

ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣ: ಬಳ್ಳಾರಿಯಲ್ಲಿ ಯುವಕನನ್ನು ವಶಕ್ಕೆ ಪಡೆದ ಎನ್​ಐಎ

By ETV Bharat Karnataka Team

Published : Mar 13, 2024, 11:47 AM IST

Updated : Mar 13, 2024, 2:09 PM IST

Bangalore Rameswaram Bomb Blast Case: ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ತಂಡ ಬಳ್ಳಾರಿಯಲ್ಲಿಂದು ಯುವಕನೋರ್ವನನ್ನು ವಶಕ್ಕೆ ಪಡೆದಿದೆ.

NIA officials detained  NIA officials detained the youth
ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣ

ಬಳ್ಳಾರಿ/ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಯುವಕನ ಮನೆ ಮೇಲೆ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದರು. ಹೆಚ್ಚಿನ ವಿಚಾರಣೆಗೆ ಎನ್​ಐಎ ಅಧಿಕಾರಿಗಳು ಯುವಕನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಮತ್ತು ಈ ಶಂಕಿತ ಯುವಕನಿಗೂ ಏನಾದ್ರೂ ಲಿಂಕ್ ಇದೆಯೇ ಎಂಬುದು ವಿಚಾರಣೆಯಿಂದ ತಿಳಿದುಬರಬೇಕಿದೆ.

ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗೆ ಕಲ್ಯಾಣ ಕರ್ನಾಟಕದಲ್ಲಿ ಶೋಧ

ಏನಿದು ಪ್ರಕರಣ: ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಭಾರೀ ಸ್ಫೋಟ ಸಂಭವಿಸಿತ್ತು. 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಸುಧಾರಿತ ಕಡಿಮೆ ತೀವ್ರತೆಯ ಬಾಂಬ್​ ಇದಾಗಿದ್ದರಿಂದ ದೊಡ್ಡ ಹಾನಿ ಸಂಭವಿಸಿರಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಬ್ಯಾಗ್ ಸಮೇತ ಕೆಫೆಗೆ ಆಗಮಿಸಿ, ಬಳಿಕ ಒಬ್ಬನೇ ತೆರಳುತ್ತಿರುವುದು ಪತ್ತೆಯಾಗಿದೆ. ಈತನ ಚಹರೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದು ಹೀಗೆ:"ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸುಳಿವು ದೊರತಿದ್ದು, ತನಿಖೆಯನ್ನು ರಾಜ್ಯ ಸಿಸಿಬಿ ಹಾಗೂ ಎನ್ಐಎ ತಂಡಗಳು ಜಂಟಿಯಾಗಿ ನಡೆಸುತ್ತಿವೆ" ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಎನ್​ಐಎ ಅಧಿಕಾರಿಗಳಿಂದ ತನಿಖೆ ಚುರುಕು: ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳ ತಂಡ 5 ಮಾರ್ಚ್​ 2024ರಂದು ರಾಮೇಶ್ವರಂ ಕೆಫೆಗೆ ಭೇಟಿ ನೀಡಿ‌ ತನಿಖೆ ಆರಂಭಿಸಿತ್ತು. ಎನ್ಐಎ ಎಸ್.ಪಿ ನೇತೃತ್ವದ ಮೂವರು ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದು, ಕೆಫೆ ಸಿಬ್ಬಂದಿಯಿಂದ ಘಟನಾ ದಿನದ ವಿವರ ಪಡೆದುಕೊಂಡಿದ್ದರು. ಈ ತನಿಖೆ ಮುಂದುವರಿದಿದ್ದು, ಆರೋಪಿ ಸುಳಿವು ನೀಡಿದವರಿಗೆ ಎನ್​ಐಎ 10 ಲಕ್ಷ ನಗದು ಬಹುಮಾನ ಘೋಷಿಸಿತ್ತು.

ಶಂಕಿತನ ವಶಕ್ಕೆ ಪಡೆದ ಎನ್ಐಎ: ಮಾರ್ಚ್​ 8ರಂದು ಎನ್​ಐಎ ತಂಡ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆದಿತ್ತು. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತ​ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದಡಿ ಬಳ್ಳಾರಿಯ ಕೌಲ್​ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದ, ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯ ಮಿನಾಜ್ ಹಾಗೂ ಆತನ ಗುಂಪಿನ ಮತ್ತೋರ್ವ ಸದಸ್ಯ ಸಯ್ಯದ್ ಸಮೀರ್ ಎಂಬಾತನನ್ನು ಈ ಹಿಂದೆ ಎನ್ಐಎ ಬಂಧಿಸಿತ್ತು. ಬಳಿಕ ಆತನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಕೆಲ ಮಹತ್ವದ ಸುಳಿವುಗಳು ಲಭ್ಯವಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಸದ್ಯ ಬಳ್ಳಾರಿಯಿಂದ ಮತ್ತೊಬ್ಬ ಯುವಕನನ್ನು ಎನ್​ಐಎ ತಂಡ ವಶಕ್ಕೆ ಪಡೆದಿದ್ದು ತನಿಖೆ ಚುರುಕುಗೊಳಿಸಿದೆ.

Last Updated :Mar 13, 2024, 2:09 PM IST

ABOUT THE AUTHOR

...view details