ಕರ್ನಾಟಕ

karnataka

ಅಂಕೋಲಾದ ಅಕ್ಷರ ಸಂತ ವಿಷ್ಣು ನಾಯ್ಕ ಇನ್ನಿಲ್ಲ..

By ETV Bharat Karnataka Team

Published : Feb 18, 2024, 3:19 PM IST

Updated : Feb 18, 2024, 3:37 PM IST

ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅಕ್ಷರ ಸಂತ ವಿಷ್ಣು ನಾಯ್ಕ ಅವರು ಇಹಲೋಕ ತ್ಯಜಿಸಿದ್ದಾರೆ.

ಅಕ್ಷರ ಸಂತ ವಿಷ್ಣು ನಾಯ್ಕ
ಅಕ್ಷರ ಸಂತ ವಿಷ್ಣು ನಾಯ್ಕ

ಅಕ್ಷರ ಸಂತ ವಿಷ್ಣು ನಾಯ್ಕ ಇನ್ನಿಲ್ಲ

ಕಾರವಾರ (ಉತ್ತರ ಕನ್ನಡ) : ಹಿರಿಯ ಕವಿ, ಸಾಹಿತಿ, ಪ್ರಕಾಶಕ, ಅಂಕಣಕಾರ, ಕಲಾವಿದರೂ ಆಗಿದ್ದ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದ ಅಕ್ಷರ ಸಂತ ವಿಷ್ಣು ನಾಯ್ಕ(81) ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಇಹಲೋಕ ತ್ಯಜಿಸಿದ್ದಾರೆ.

ಅಂಕೋಲಾ ತಾಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1 ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ ಅವರ ಪ್ರತಿಭಾವಂತ ಪುತ್ರನಾಗಿದ್ದ ವಿಷ್ಣು ನಾಯ್ಕ ಅವರು ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸ ಭತ್ತ, ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ಪ್ರೀತಿಯ ಪ್ರಶ್ನೆ (ಕವನ ಸಂಗ್ರಹಗಳು) ಕಣ್ಣೀರ ಕಥೆಗಳು (ಸಂಕಲನ) ಅಯ್ನೋರ ಪೂಜೆ; ಒಂದು ಹನಿ ಮತ್ತು ಇತರ ಬೀದಿನಾಟಕಗಳು; ಯುದ್ಧ (ನಾಟಕಗಳು) ಡಾ. ಗೌರೀಶ ಕಾಯ್ಕಿಣಿ ಸಮಗ್ರ ಸಂಪುಟಗಳು (ಸಂಪಾದನೆ) ದುಡಿಯುವ ಕೈಗಳ ಹೋರಾಟದ ಕತೆ (ಮಾನವಿಕ) ಮುಂತಾದವುಗಳು ವಿಷ್ಣು ನಾಯ್ಕ ಅವರ ಕಲ್ಪನೆಯಲ್ಲಿ ಮೂಡಿ ಬಂದ ಸಾಹಿತ್ಯದ ಗರಿಗಳು.

ಕೆ.ಎಚ್. ಪಾಟೀಲರ ಸಂಪಾದಕತ್ವದಲ್ಲಿ ಹೊರ ತರುತ್ತಿದ್ದ ‘ವಿಶಾಲ ಕರ್ನಾಟಕ’ ದೈನಿಕ ಪತ್ರಿಕೆಯ ಪಾಕ್ಷಿಕ ಅಂಕಣಕಾರರಾಗಿ, ಮಂಗಳೂರಿನ ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದಲ್ಲಿ ತರುತ್ತಿದ್ದ ‘ಮುಂಗಾರು’ ದೈನಿಕ ಪತ್ರಿಕೆಯ ವರದಿಗಾರರಾಗಿ, ‘ಕರಾವಳಿ ಮುಂಜಾವು’, ‘ಕರಾವಳಿ ಸುಪ್ರಭಾತ’, ‘ಮುನ್ನಡೆ’, ‘ತೇಜಸ್ವಿ ಪ್ರಪಂಚ’, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಈ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ ವಿಷ್ಣು ನಾಯ್ಕ ಸಾಹಿತ್ಯ ಮೇರು ಪರ್ವತವಾಗಿ ಗುರುತಿಸಿಕೊಂಡಿದ್ದರು.

ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟರ ಕನ್ನಡ ಪರಿಚಾರಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿಗಳು ಅವರನ್ನರಸಿ ಬಂದಿದ್ದವು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ರಾಜ್ಯ ಹಲವಾರು ಸಾಹಿತ್ಯ ಗೋಷ್ಠಿಗಳ ಅಧ್ಯಕ್ಷತೆಯ ಹಾಗೂ ಮತ್ತಿತರ ಗೌರವ ಪುರಸ್ಕಾರಗಳು ಅವರಿಗೆ ಸಂದಿವೆ.

ಮೃತ ವಿಷ್ಣು ನಾಯ್ಕ ಅವರು ಇಬ್ಬರು ಪುತ್ರಿಯರು, ಅಳಿಯಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶಾಸಕ ಸತೀಶ ಸೈಲ್, ತಹಶೀಲ್ದಾರ್ ಅನಂತ ಶಂಕರ, ಸಿಪಿಐ ಶ್ರೀಕಾಂತ್ ತೋಟದ,‌ ಕೆನರಾ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ ಕಾಮತ್, ಸಾಹಿತಿಗಳಾದ ಆರ್.ಜಿ. ಗುಂದಿ, ಮೋಹನ್ ಹಬ್ಬು, ರೊಹಿದಾಸ್ ನಾಯ್ಕ ಜಗದೀಶ್ ನಾಯಕ, ಶಿವಾನಂದ್ ನಾಯಕ, ಕಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ, ಎಸ್.ವಿ. ವಸ್ತ್ರದ, ಸೇರಿದಂತೆ ಅಪಾರ ಬಂದುಗಳು ಅಂತಿಮ ನಮನ ಸಲ್ಲಿಸಿ ಗೌರವ ಸೂಚಿಸಿದರು.

ಮಾಜಿ ಸಚಿವ ಆರ್. ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾಜಿ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸಂತಾಪ ಸೂಚಿಸದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನನಗೆ ಮತ್ತು ಅವರಿಗೆ 40 ವರ್ಷಗಳ ಸಂಬಂಧವಿತ್ತು. ಜಿಲ್ಲೆಯ ದಿನಕರ್​ ದೇಸಾಯಿ ಅವರ ಆದರ್ಶಗಳೊಂದಿಗೆ ವಿಷ್ಣು ನಾಯ್ಕ್​ ಅವರು ನಡೆದಿದ್ದರು. ಪ್ರತಿಯೊಂದು ಕೆಲಸದಲ್ಲೂ ವಿಷ್ಣು ನಾಯ್ಕ್​ ಬಿಟ್ಟರೆ ಮರ್ತ್ತೋವ ಇಲ್ಲ ಎಂದು ಹಿರಿಯ ವಕೀಲರಾದ ಎಸ್.ಪಿ ಕಾಮತ್ ತಮ್ಮ ಸ್ನೇಹದ ದಿನಗಳನ್ನು ನೆನೆದರು.

ಇದನ್ನೂ ಓದಿ :ಬೆಳಗಾವಿ: ವಿವಾದಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಮಹಿಳೆಯರು

Last Updated : Feb 18, 2024, 3:37 PM IST

ABOUT THE AUTHOR

...view details