ಕರ್ನಾಟಕ

karnataka

ಮತ್ತೆ ತಾಳ್ಮೆ ಕಳೆದುಕೊಂಡ ಡ್ಯಾಶಿಂಗ್ ಓಪನರ್ ಶುಭ್ಮನ್ ಗಿಲ್: ರವಿಶಾಸ್ತ್ರಿ ಅಸಮಾಧಾನ

By ETV Bharat Karnataka Team

Published : Feb 3, 2024, 8:58 AM IST

IND vs ENG: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟರ್ ಶುಭ್ಮನ್ ಗಿಲ್ ಮತ್ತೆ ಬ್ಯಾಟಿಂಗ್​ ವೈಫಲ್ಯ ಕಂಡಿದ್ದಕ್ಕೆ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಶುಭ್ಮನ್ ಗಿಲ್
ಶುಭ್ಮನ್ ಗಿಲ್

ವಿಶಾಖಪಟ್ಟಣಂ: ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ಶುಕ್ರವಾರ ಆರಂಭಗೊಂಡಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರದ ಡ್ಯಾಶಿಂಗ್ ಓಪನರ್ ಶುಭ್ಮನ್ ಗಿಲ್ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪರೋಕ್ಷವಾಗಿ ಕಾಮೆಂಟ್​ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಇದರ ಜೊತೆಗೆ ಬೃಹತ್​ ಮೊತ್ತ ಕಟ್ಟಿರುವ ಭಾರತ ತಂಡಕ್ಕೆ ಅವರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಕಣಕ್ಕಿಳಿದಿದೆ. ಪಂದ್ಯದಲ್ಲಿ ಟೀಂ ಇಂಡಿಯಾದ ಯಂಗ್ ಓಪನರ್ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ (179* ರನ್) ಸಿಡಿಸಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಅವರೊಂದಿಗೆ ಮೈದಾನಕ್ಕಿಳಿದ ನಾಯಕ ರೋಹಿತ್​ ಶರ್ಮಾ (14) ಬೇಗನೇ ಔಟ್​ ಆದರು. ರೋಹಿತ್ ಬಳಿಕ ಬಂದ ಡ್ಯಾಶಿಂಗ್ ಓಪನರ್ ಶುಭ್ಮನ್ ಗಿಲ್ ತಾಳ್ಮೆಯ ಆಟ ಆಡದೇ ಎಂದಿನಂತೆ ವೈಫಲ್ಯ ಕಂಡಿದ್ದಕ್ಕೆ ರವಿಶಾಸ್ತ್ರಿ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಮೂರನೆ ಕ್ರಮಾಂಕದಲ್ಲಿ ಕಣಕ್ಕಿದ ಗಿಲ್, 5 ಬೌಂಡರಿಗಳ ಸಹಿತ ಕೇವಲ 34 ರನ್​ ಗಳಿಸಲು ಮಾತ್ರ ಶಕ್ತರಾದರು. ನಿರೀಕ್ಷಿತ ಹಾಗೂ ಹೆಚ್ಚಿನ ಸ್ಕೋರ್​ಗಳನ್ನು ಗಳಿಸುವಲ್ಲಿ ಎಡಗಿದ ಅವರ ಆಟದ ವೈಖರಿಗೆ ರವಿಶಾಸ್ತ್ರಿ ಕಾಮೆಂಟರಿ ವೇಳೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಅವರ ಹೆಸರನ್ನು ಪ್ರಸ್ತಾಪಿಸಿದರೇ ಎಚ್ಚರಿಕೆ ಸಹ ನೀಡಿದರು.

''ಇದೊಂದು ಹೊಸ ತಂಡ. ಯುವಕರನ್ನು ನಂಬಿಕೊಂಡು ಕಣಕ್ಕಿಳಿದಿರುವ ತಂಡ. ಈ ಯುವಕರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವ ಸಮಯ. ಸಿಕ್ಕ ಅವಕಾಶಗಳನ್ನು ಯಾರೂ ಬಿಟ್ಟು ಕೊಡಬಾರದು'' ಎಂದು ಆಡುವ 11ರ ಬಳಗದಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಯುವ ಆಟಗಾರರಿಗೆ ಸಮಯೋಚಿತ ಎಚ್ಚರಿಕೆಯನ್ನು ನೀಡಿದರು.

ಶುಭ್ಮನ್ ಗಿಲ್​ ಅವರಿಗೆ ಸ್ಪಷ್ಟವಾಗಿ ನಿರ್ದೇಶಿಸದಿದ್ದರೂ, ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಕಾಯುತ್ತಿರುವ ಚೇತೇಶ್ವರ ಪೂಜಾರ ಬಗ್ಗೆ ಪ್ರಸ್ತಾಪಿಸಿದ ರವಿಶಾಸ್ತ್ರಿ, ಮರೆಯಬೇಡಿ, ಪೂಜಾರ ಕಾಯುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ, ಭವಿಷ್ಯದಲ್ಲಿ ಇದೇ ರೀತಿ ಕಳಪೆ ಪ್ರದರ್ಶನ ಮುಂದುವರೆದರೆ ಶುಭ್ಮನ್ ಗಿಲ್ 11ರ ಬಳದಿಂದ ಹೊರಬೀಳುವ ಸಾಧ್ಯತೆ ಹೆಚ್ಚು ಎಂಬ ಅರ್ಥದಲ್ಲ ಅವರು ಆ ಮಾತುಗಳನ್ನು ಆಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

ರೋಹಿತ್​ ಶರ್ಮಾ ಬಳಿಕ ಕಣಕ್ಕಿಳಿದ ಗಿಲ್, ಉತ್ತಮ ಆರಂಭ ಮಾಡಿದ್ದರು. ಆದರೆ, ಜೇಮ್ಸ್ ಆಂಡರ್ಸನ್ ಅವರ ಮಾರಕ ಬೌಲಿಂಗ್​ ಬಲಿಯಾಗಿ ಮತ್ತೆ ವೈಫಲ್ಯ ಕಂಡರು. ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದಿರುವುದು ಅಭಿಮಾನಿಗಳಿಗೂ ಬೇಸರ ತಂದಿತು. ​46 ಎಸೆತಗಳನ್ನು ಎದುರಿಸಿದ ಗಿಲ್, 34 ರನ್‌ ಗಳಿಸಿ ನಿರೀಕ್ಷೆಯನ್ನು ಹುಸಿಗೊಳಿಸಿದರು. ದೊಡ್ಡ ಇನ್ನಿಂಗ್ಸ್ ಕಟ್ಟಬಹುದು ಎಂಬ ನಿರೀಕ್ಷೆಯನ್ನು ಸುಳ್ಳಾಗಿಸಿದ ಅವರ ಸ್ಥಾನದ ಮೇಲೆ ಇದೀಗ ಕೆಲವು ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿದೆ.

ಇದೇ ಮಾತನ್ನು ಪ್ರಸ್ತಾಪಿಸಿದ ರವಿಶಾಸ್ತ್ರಿ, "ಸದ್ಯ ಭಾರತ ತಾಜಾ ತಂಡವಾಗಿದೆ ಮತ್ತು ಯುವ ತಂಡವಾಗಿದೆ. ಈ ಯುವಕರು ತಮ್ಮನ್ನು ತಾವು ಸಾಬೀತುಪಡಿಸಬೇಕು, ಮರೆಯಬೇಡಿ, ಚೇತೇಶ್ವರ ಪೂಜಾರ್​ ಕಾಯುತ್ತಿದ್ದಾರೆ. ಅವರು ರಣಜಿ ಟ್ರೋಫಿಯಲ್ಲಿ ಅದನ್ನು ಮಾಡುತ್ತಿದ್ದಾರೆ ಮತ್ತು ಯಾವಾಗಲೂ ರಾಡಾರ್‌ನಲ್ಲಿದ್ದಾರೆ," ಎಂದು ರವಿಶಾಸ್ತ್ರಿ ಕಾಮೆಂಟರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಪ್ರಸ್ತುತ ಸೌರಾಷ್ಟ್ರ ಪರ ಅನುಭವಿ ಪೂಜಾರ, ದ್ವಿಶತಕ ಸಿಡಿಸಿದ್ದಾರೆ.

ಇದನ್ನೂ ಓದಿ:ಅಂಡರ್ 19 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಭಾರತ

ABOUT THE AUTHOR

...view details