ಕರ್ನಾಟಕ

karnataka

Ind vs Eng 1st Test: ಓಲಿ ಪೋಪ್​ ಶತಕ; ಇಂಗ್ಲೆಂಡ್‌ಗೆ 126 ರನ್‌ಗಳ ಮುನ್ನಡೆ​

By PTI

Published : Jan 28, 2024, 8:27 AM IST

ಭಾರತ ವಿರುದ್ಧದ ಮೊದಲ ಟೆಸ್ಟ್‌ನ 3ನೇ ದಿನ ಓಲಿ ಪೋಪ್ ಸಿಡಿಸಿದ ಜವಾಬ್ದಾರಿಯುತ ಶತಕದ ಬಲದಿಂದ ಇಂಗ್ಲೆಂಡ್​ 126 ರನ್‌ಗಳ ಮುನ್ನಡೆ ಸಾಧಿಸಿತು.

ಓಲಿ ಪೋಪ್​
ಓಲಿ ಪೋಪ್​

ಹೈದರಾಬಾದ್​: ಇಲ್ಲಿನ ರಾಜೀವ್ ​ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್​ 6 ವಿಕೆಟ್​ಗಳನ್ನು ಕಳೆದುಕೊಂಡು ಓಲಿ ಪೋಪ್​ (148*) ಶತಕದ ನೆರವಿನಿಂದ 316 ರನ್​ ಗಳಿಸಿತು. ಈ ಮೂಲಕ 126 ರನ್​ಗಳ ಮುನ್ನಡೆ ಸಾಧಿಸಿದೆ.

ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಆಂಗ್ಲರು ಹೊಸ ಯೋಜನೆ ಹಾಕಿಕೊಂಡಂತಿದೆ. ಒಂದೆಡೆ ವಿಕೆಟ್​ ನೀಡದೆ ಕ್ರೀಸ್‌ ಕಚ್ಚಿ ನಿಂತು ಓಲಿ ಪೋಪ್ ಆಡುತ್ತಿದ್ದಾರೆ. ಪೋಪ್​ ಜೊತೆ ಯುವ ಆಟಗಾರ ರೆಹಾನ್ ಅಹ್ಮದ್ (16*) ವಿಕೆಟ್​ ಉಳಿಸಿಕೊಂಡು ಇಂದಿನ ತಯಾರಿಯಲ್ಲಿದ್ದಾರೆ.

ಮೊದಲ ಇನ್ನಿಂಗ್ಸ್​ನ ಮೊದಲ ದಿನ ಇಂಗ್ಲೆಂಡ್​​ 246 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಗುರಿ ಬೆನ್ನಟ್ಟಿದ್ದ ಭಾರತ ಆರಂಭದಲ್ಲಿ ನಾಯಕ ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡರೂ, ಅದ್ಭುತ ಪ್ರದರ್ಶನ ತೋರಿ ಮೂರನೇ ದಿನಕ್ಕೆ 436 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಆಂಗ್ಲರಿಗೆ 190 ರನ್​ಗಳ ಹಿನ್ನಡೆಯಾಯಿತು. ಬಳಿಕ ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆದರೆ ಭಾರತದ ಸ್ಪಿನ್ನರ್ಸ್​ ಆಂಗ್ಲರ ರನ್​ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಇದೇ ವೇಳೆ ಓಲಿ ಪೋಪ್​ ವಿಕೆಟ್​ ಪಡೆಯುವಲ್ಲಿ ವಿಫಲರಾದರು.​

ಆತ್ಮವಿಶ್ವಾಸದಿಂದ ಬ್ಯಾಟ್​ ಬೀಸಿದ ಪೋಪ್​ 17 ಬೌಂಡರಿಗಳೊಂದಿಗೆ ಅಜೇಯ 148* ರನ್ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಆರನೇ ವಿಕೆಟ್​ಗೆ ಬೆನ್ ಫೋಕ್ಸ್ (34) ಮತ್ತು ಪೋಪ್​ ಜೋಡಿ 112 ರನ್‌ಗಳ ಜೊತೆಯಾಟವಾಡಿತು. ಆದರೆ, ಅಕ್ಸರ್ ಪಟೇಲ್ ಸ್ಪಿನ್​ ಮೋಡಿಗೆ ಫೋಕ್ಸ್ ವಿಕೆಟ್​ ಚೆಲ್ಲಿದರು. ನಂತರ ಬ್ಯಾಟಿಂಗ್‌ಗಿಳಿದ ರೆಹಾನ್ ಅಹ್ಮದ್ ಅಜೇಯ 16 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ.

ಭಾರತ ಪರ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಉರುಳಿಸಿದರು. ಭಾರತೀಯ ಬೌಲಿಂಗ್ ವಿಭಾಗ ಇಂದು ಆದಷ್ಟು ಬೇಗ ಆಂಗ್ಲರನ್ನು ಮಟ್ಟ ಹಾಕುವ ಗುರಿ ಹೊಂದಿದೆ.

ಸಂಕ್ಷಿಪ್ತ ಸ್ಕೋರ್ ವಿವರ :

ಇಂಗ್ಲೆಂಡ್:ಮೊದಲ ಇನ್ನಿಂಗ್ಸ್ ​246 ರನ್‌ಗಳಿಗೆ ಆಲೌಟ್​. ಎರಡನೇ ಇನ್ನಿಂಗ್ಸ್​ 316/6 (ಪೋಪ್ 148*; ಜಸ್ಪ್ರೀತ್ ಬುಮ್ರಾ 2/29)

ಭಾರತ:ಮೊದಲ ಇನ್ನಿಂಗ್ಸ್ 436 ರನ್‌ಗಳಿಗೆ ಆಲೌಟ್ (ರವೀಂದ್ರ ಜಡೇಜಾ 87 ರನ್, ಕೆ.ಎಲ್.ರಾಹುಲ್ 86, ಯಶಸ್ವಿ ಜೈಸ್ವಾಲ್ 80; ಜೋ ರೂಟ್ 4/79)

ಇದನ್ನೂ ಓದಿ:ಮೂರನೇ ದಿನ: 436ಕ್ಕೆ ಟೀಂ ಇಂಡಿಯಾ ಅಲೌಟ್​, 190 ರನ್​ಗಳ ಲೀಡ್​ನಲ್ಲಿ ಭಾರತ

ABOUT THE AUTHOR

...view details