ಕರ್ನಾಟಕ

karnataka

6 ತಿಂಗಳಿಂದ ಜೈಲಲ್ಲಿದ್ದ ಆಪ್​ ಸಂಸದ ಸಂಜಯ್​ ಸಿಂಗ್​ಗೆ ಜಾಮೀನು - Sanjay Singh

By ETV Bharat Karnataka Team

Published : Apr 2, 2024, 5:37 PM IST

ದೆಹಲಿ ಮದ್ಯ ನೀತಿ ಹಗರಣದಲ್ಲಿ 6 ತಿಂಗಳಿಂದ ತಿಹಾರ್​ ಜೈಲಿನಲ್ಲಿದ್ದ ಆಪ್​ ಸಂಸದ ಸಂಜಯ್​ ಸಿಂಗ್​ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ.

ಆಪ್​ ಸಂಸದ ಸಂಜಯ್​ ಸಿಂಗ್​ಗೆ ಜಾಮೀನು
ಆಪ್​ ಸಂಸದ ಸಂಜಯ್​ ಸಿಂಗ್​ಗೆ ಜಾಮೀನು

ನವದೆಹಲಿ:ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ 6 ತಿಂಗಳಿನಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಇದಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಯಾವುದೇ ತಕರಾರು ಸಲ್ಲಿಸಿಲ್ಲ. ಇದೇ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಬಂಧನವಾದ ಕೆಲವೇ ದಿನಗಳಲ್ಲಿ ಸಂಜಯ್​ ಸಿಂಗ್​ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ಸಿಂಗ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಇಡಿಗೆ ಯಾವುದೇ ಅಭ್ಯಂತರವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪಿ.ಬಿ.ವರಾಲೆ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ತಿಳಿಸಿದರು.

ಇದೇ ವೇಳೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂದು ಕೋರ್ಟ್ ವೇಳೆ ಸ್ಪಷ್ಟಪಡಿಸಿದೆ. ಪ್ರಕರಣವು ಇನ್ನೂ ವಿಚಾರಣೆಯ ಹಂತದಲ್ಲಿರುವ ಕಾರಣ, ಅವರ ಅನರ್ಹತೆಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಲ್ಲ ಎಂದಿದೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ನಾಯಕ ಸಂಜಯ್ ಸಿಂಗ್ ಅವರ ಕಸ್ಟಡಿ ಅವಧಿಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯವನ್ನು ಕೇಳಿತ್ತು. ಇದಕ್ಕೆ ಇಡಿ ಸೂಕ್ತ ಉತ್ತರ ನೀಡಿರಲಿಲ್ಲ. ಈಗಾಗಲೇ ಆಪ್​ ನಾಯಕ 6 ತಿಂಗಳಿಗೂ ಅಧಿಕ ಜೈಲು ವಾಸ ಅನುಭವಿಸಿದ್ದಾರೆ. 2 ಕೋಟಿ ಲಂಚ ಪಡೆದ ಆರೋಪದಲ್ಲಿ ಅವರನ್ನು ಮುಂದೆ ವಿಚಾರಿಸಬಹುದು ಎಂದು ಕೋರ್ಟ್​ ಇಡಿ ಪರ ವಕೀಲರಿಗೆ ತಿಳಿಸಿತು.

ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಎ.ಎಂ.ಸಿಂಘ್ವಿ, ತಮ್ಮ ಕಕ್ಷಿದಾರರನ್ನು ಇನ್ನೂ ಜೈಲಿನಲ್ಲಿರಿಸಿಕೊಳ್ಳಲು ಯಾವ ಕಾರಣಗಳೂ ಇಲ್ಲ. ಹೀಗಾಗಿ ಅವರನ್ನು ಬಂಧನದಿಂದ ವಿಮುಕ್ತಿಗೊಳಿಸಬೇಕು ಎಂದು ಕೋರಿದರು. ಕಕ್ಷಿದಾರನ ವಿರುದ್ಧ ಕೇಳಿಬಂದ ಕೋಟ್ಯಂತರ ರೂಪಾಯಿ ಲಂಚ ಪಡೆದಿರುವ ಆರೋಪದಲ್ಲಿ ಯಾವುದೇ ಹಣವನ್ನು ಜಪ್ತಿ ಮಾಡಲಾಗಿಲ್ಲ ಎಂದು ವಾದಿಸಿದರು.

ಇದನ್ನೂ ಓದಿ:ತಿಹಾರ್​ ಜೈಲಿನಲ್ಲಿ ಕೇಜ್ರಿವಾಲ್​ಗೆ ಪ್ರತ್ಯೇಕ ಕೊಠಡಿ: ಸಕ್ಕರೆ ಕಾಯಿಲೆ ಔಷಧಿ ಇಟ್ಟುಕೊಳ್ಳಲು ಅವಕಾಶ - Kejriwals Tihar Routine

ABOUT THE AUTHOR

...view details