ಕರ್ನಾಟಕ

karnataka

ರಾಮಮಂದಿರವು ಭಾರತೀಯ ಪರಂಪರೆಯ ಮರು ಶೋಧದ ಪ್ರತೀಕ: ರಾಷ್ಟ್ರಪತಿ ಬಣ್ಣನೆ

By ETV Bharat Karnataka Team

Published : Jan 25, 2024, 10:32 PM IST

ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಗಣರಾಜ್ಯೋತ್ಸವದ ಮುನ್ನಾ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ಜಿ-20 ಶೃಂಗಸಭೆ, ರಾಮಮಂದಿರ ಉದ್ಘಾಟನೆ ಸೇರಿದಂತೆ ಪ್ರಚಲಿತ ವಿಷಯಗಳ ಬಗ್ಗೆ ತಮ್ಮ ಭಾಷಣದಲ್ಲಿ ಬೆಳಕು ಚಲ್ಲಿದರು.

Ram Temple a landmark in India's continued re-discovery of its civilisational heritage: Prez
ರಾಮಮಂದಿರವು ಭಾರತೀಯ ಪರಂಪರೆಯ ಮರು ಶೋಧದ ಪ್ರತೀಕ: ರಾಷ್ಟ್ರಪತಿ ಬಣ್ಣನೆ

ನವದೆಹಲಿ:ಅಯೋಧ್ಯೆಯ ರಾಮ ಮಂದಿರವು ಜನರ ನಂಬಿಕೆಯ ಪ್ರತೀಕವಾಗಿರುವ ಭವ್ಯ ಸೌಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಬಣ್ಣಿಸಿದ್ದಾರೆ. ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, "ರಾಮ ಮಂದಿರದ ಮೂಲಕ ಭಾರತವು ತನ್ನ ನಾಗರಿಕತೆ ಹಾಗೂ ಪರಂಪರೆಯ ಮರು - ಶೋಧನೆ ಮಾಡಿಕೊಂಡಿರುವುದು ಒಂದು ಹೆಗ್ಗುರುತಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ರಾಮಮಂದಿರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಈ ಮೂಲಕ ಶತಮಾನಗಳ ಕಾಲದ ಜನರ ಆಶಯವನ್ನು ಈಡೇರಿಸಿದ್ದರು.

ಏತನ್ಮಧ್ಯೆ, ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ಪರಿಕಲ್ಪನೆಗಿಂತ ದೇಶದ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯು ತುಂಬಾ ಹಳೆಯದಾಗಿದೆ ಮತ್ತು ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಕರೆಯಲಾಗುತ್ತದೆ ಎಂದು ರಾಷ್ಟ್ರಪತಿ ಸ್ಮರಿಸಿಕೊಂಡರು. ರಾಷ್ಟ್ರವು 'ಅಮೃತ್ ಕಾಲ'ದ ಆರಂಭಿಕ ವರ್ಷಗಳಲ್ಲಿದೆ. ಅಷ್ಟೇ ಅಲ್ಲ ಇದು ಯುಗ ಪರಿವರ್ತನೆಯ ಸಮಯ ಎಂದು ಮುರ್ಮು ಪ್ರತಿಪಾದಿಸಿದ್ದಾರೆ.

ಸಂವಿಧಾನದಲ್ಲಿ ಹೇಳಿರುವ "ಮೂಲ ಕರ್ತವ್ಯಗಳನ್ನು" ಪಾಲಿಸುವಂತೆ ಅವರು ದೇಶದ ಎಲ್ಲಾ ನಾಗರಿಕರಿಗೆ ಇದೇ ವೇಳೆ ಮನವಿ ಮಾಡಿದರು. ತಮ್ಮ ಗಣರಾಜ್ಯೋತ್ಸವದ ಭಾಷಣದಲ್ಲಿ, ರಾಷ್ಟ್ರಪತಿಯವರು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಗೌರವ ಸಲ್ಲಿಸಿದರು. ಕೇಂದ್ರ ಸರ್ಕಾರ ಮೊನ್ನೆ ಮೊನ್ನೆ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಭಾರತದಲ್ಲಿ ನಡೆದ ಜಿ 20 ಶೃಂಗಸಭೆಯ ಕುರಿತು ಪ್ರಸ್ತಾಪಿಸಿದ ಅಧ್ಯಕ್ಷರು, ಜಿ 20 ಶೃಂಗಸಭೆಯು ಭಾರತವು 'ಗ್ಲೋಬಲ್ ಸೌತ್' ನ ಧ್ವನಿಯಾಗಿ ಹೊರಹೊಮ್ಮಲು ಉತ್ತೇಜನ ನೀಡಿತು ಎಂಬುದನ್ನು ನೆನಪಿಸಿಕೊಂಡರು. ಭಾರತ ಜಿ-20 ಶೃಂಗಸಭೆಯನ್ನು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ವಿಶ್ವದ ಇತರ ರಾಷ್ಟ್ರಗಳಿಂದ ಹೊಗಳಿಕೆಯನ್ನು ಪಡೆದುಕೊಂಡಿತ್ತು.

ಇದೇ ವೇಳೆ ರಾಷ್ಟ್ರಪತಿಗಳು ದೇಶದ ಬಾಹ್ಯಾಕಾಶ ಸಾಧನೆ ಹಾಗೂ ವಿಜ್ಞಾನಿಗಳು ಹಾಗೂ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಿಖರ ಫಲಿತಾಂಶಗಳೊಂದಿಗೆ ದೇಶದ ಗರಿಮೆ ಹೆಚ್ಚಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಬಣ್ಣಿಸಿದರು. ಇನ್ನು ನಮ್ಮ ಕ್ರೀಡಾಪಟುಗಳಲ್ಲಿ ಹೊಸ ಆತ್ಮವಿಶ್ವಾಸ ಕಾಣುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಹೆಚ್ಚಿನ ವಿಶ್ವಾಸ ಇದೆ ಎಂದು ಹೇಳಿದರು. ನಮ್ಮ ಮಹಿಳಾ ಕ್ರೀಡಾತಾರೆಯರು ನಮ್ಮ ಪದಕ ಪಟ್ಟಿಯಲ್ಲಿ ತಮ್ಮದೇ ಕೊಡುಗೆ ನೀಡುತ್ತಿರುವುದನ್ನು ನೋಡಲು ನಮಗೆ ಖುಷಿಯಾಗುತ್ತಿದೆ ಎಂದು ರಾಷ್ಟ್ರಪತಿಗಳು ಹರ್ಷ ವ್ಯಕ್ತಪಡಿಸಿದರು.

ಇದನ್ನು ಓದಿ:ಬಿಹಾರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಆರ್​ಜೆಡಿ- ಜೆಡಿಯು ಸಭೆ, ವಿವಾದ ಸೃಷ್ಟಿಸಿದ ಲಾಲು ಪುತ್ರಿ

ABOUT THE AUTHOR

...view details