ಕರ್ನಾಟಕ

karnataka

ಇಡಿ ಅಧಿಕಾರಿಗಳಿಂದ ದೆಹಲಿ ಸಿಎಂ ಕೇಜ್ರಿವಾಲ್ ಅರೆಸ್ಟ್ ​ - Excise Policy Case

By ETV Bharat Karnataka Team

Published : Mar 21, 2024, 8:10 PM IST

Updated : Mar 21, 2024, 9:51 PM IST

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

high-court-refuses-to-grant-relief-from-arrest-to-cm-kejriwal-in-ed-case-of-delhi-liquor-scam
ಕೇಜ್ರಿವಾಲ್​ಗೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್​ ನಕಾರ; ಸಿಎಂ ನಿವಾಸಕ್ಕೆ ಆಗಮಿಸಿದ ಇಡಿ ತಂಡ

ನವದೆಹಲಿ: ವಿವಾದಿತ ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ, ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್​ ನಿರಾಕರಿಸಿತ್ತು. ಇದರ ಬೆನ್ನಲ್ಲೆ ಜಾರಿ ನಿರ್ದೇಶನಾಲಯದ (ಇಡಿ) ತಂಡವು ಸರ್ಚ್​ ವಾರಂಟ್​​ ಸಮೇತವಾಗಿ ಸಿಎಂ ನಿವಾಸಕ್ಕೆ ಭೇಟಿ ನೀಡಿ, ಬಂಧಿಸಿದ್ದಾರೆ.

ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಸಿಎಂ ಅಧಿಕೃತ ನಿವಾಸಕ್ಕೆ ಇಂದು ಸಂಜೆ ಇಡಿ ಅಧಿಕಾರಿಗಳ ತಂಡ ಆಗಮಿಸಿತ್ತು. ಈ ತಂಡವು ಕೇಜ್ರಿವಾಲ್ ಮನೆಗೆ ತಲುಪುತ್ತಿದ್ದಂತೆ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದರು. ಸಿಎಂ ಬಂಧನದ ಬಗ್ಗೆ ಖಚಿತವಾಗುತ್ತಿದಂತೆ ಆಪ್​ ಕಾರ್ಯಕರ್ತರು ಬಂದು ಸೇರಿದ್ದರು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಕೇಜ್ರಿವಾಲ್​ ವಿರುದ್ಧ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೇವಲ ಗಂಟೆಗಳಲ್ಲೇ ಈ ಬೆಳವಣಿಗೆ ನಡೆದಿದೆ. ಇಡಿ ಅಧಿಕಾರಿಗಳ ಮಾಹಿತಿ ಪ್ರಕಾರ, ಇಡಿ ತಂಡವು ಸಮನ್ಸ್ ನೀಡಲು ಕೇಜ್ರಿವಾಲ್ ನಿವಾಸಕ್ಕೆ ತೆರಳಿತ್ತು. ಅಲ್ಲದೇ, ತಮ್ಮ ಬಳಿ ಸರ್ಚ್ ವಾರಂಟ್ ಇದೆ ಎಂದು ಸಿಎಂ ನಿವಾಸದ ಸಿಬ್ಬಂದಿಗೆ ತಂಡ ತಿಳಿಸಿತ್ತು.

2021-22ರ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ರೂಪಿಸಿತ್ತು. ಆದರೆ, ಇದನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳು ಕಾರಣದಿಂದಲೇ ನೀತಿಯನ್ನೇ ರದ್ದುಗೊಳಿಸಲಾಗಿದೆ. ಆದರೆ, ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಸಂಬಂಧ ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ.

ಈಗಾಗಲೇ ಇದೇ ಪ್ರಕರಣದಲ್ಲಿ ಆಪ್​ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಬಂಧನಕ್ಕೆ ಒಳಗಾಗಿದ್ದಾರೆ. ಇಡಿ ಸಲ್ಲಿಸಿರುವ ಚಾರ್ಜ್ ಶೀಟ್‌ಗಳಲ್ಲಿ ಕೇಜ್ರಿವಾಲ್ ಹೆಸರನ್ನೂ ಹಲವು ಬಾರಿ ಉಲ್ಲೇಖಿಸಲಾಗಿದೆ. ಅಂತೆಯೇ, ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್​ಗಳನ್ನು ​ಜಾರಿ ಮಾಡಿದ್ದರು. ಈ ಸಮನ್ಸ್​ಗಳನ್ನು ಪ್ರಶ್ನಿಸಿ ಕಾನೂನು ಹೋರಾಟವನ್ನು ಕೇಜ್ರಿವಾಲ್ ನಡೆಸುತ್ತಿದ್ದಾರೆ.

ಇಂದು ಕೇಜ್ರಿವಾಲ್ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ಪೀಠವು ಬಲವಂತದ ಕ್ರಮದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್​ಗೂ ಮೊರೆ ಹೋಗಿದ್ದಾರೆ. ಇದರ ನಡುವೆಯೇ ಇಡಿ ಅಧಿಕಾರಿಗಳು ಸಿಎಂ ನಿವಾಸಕ್ಕೆ ಆಗಮಿಸಿ ಬಂಧಿಸಿದ್ದಾರೆ.

ಈ ಬಗ್ಗೆ ಸಚಿವೆ ಅತಿಶಿ ಮಾತನಾಡಿ, ಕೋರ್ಟ್ ನೋಟಿಸ್ ನೀಡಿದ ಒಂದು ಗಂಟೆಯೊಳಗೆ ಇಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಬಂದಿದ್ದಾರೆ. ಇವತ್ತು ಇಡಿ ಸ್ವತಂತ್ರ ತನಿಖಾ ಸಂಸ್ಥೆ ಅಲ್ಲ, ಇದು ಬಿಜೆಪಿಯ ರಾಜಕೀಯ ಅಸ್ತ್ರ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಬ್ಯಾಂಕ್​ ಖಾತೆ ಸೀಜ್​: ಚುನಾವಣೆ ಪ್ರಚಾರ ಮಾಡಲೂ ಹಣವಿಲ್ಲ; ಕೇಂದ್ರದ ವಿರುದ್ಧ ಕಾಂಗ್ರೆಸ್​ ಕಿಡಿ

Last Updated :Mar 21, 2024, 9:51 PM IST

ABOUT THE AUTHOR

...view details