ETV Bharat / bharat

ಬ್ಯಾಂಕ್​ ಖಾತೆ ಸೀಜ್​: ಚುನಾವಣೆ ಪ್ರಚಾರ ಮಾಡಲೂ ಹಣವಿಲ್ಲ; ಕೇಂದ್ರದ ವಿರುದ್ಧ ಕಾಂಗ್ರೆಸ್​ ಕಿಡಿ - CONGRESS bank account frozen

author img

By ETV Bharat Karnataka Team

Published : Mar 21, 2024, 12:52 PM IST

ಕಾಂಗ್ರೆಸ್​ನ ಬ್ಯಾಂಕ್​ ಖಾತೆಗಳನ್ನು ಸೀಜ್​ ಮಾಡಿದ್ದರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಅವರು ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಹರಿಹಾಯ್ದರು.

ಬ್ಯಾಂಕ್​ ಖಾತೆ ಸೀಜ್
ಬ್ಯಾಂಕ್​ ಖಾತೆ ಸೀಜ್

ನವದೆಹಲಿ: ಕಾಂಗ್ರೆಸ್​ನ ಬ್ಯಾಂಕ್​ ಖಾತೆಗಳನ್ನು ನಿರ್ಬಂಧಿಸಿದ್ದು, ಚುನಾವಣೆಗೆ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಬಾಂಡ್​ಗಳಿಂದ ಬಿಜೆಪಿ ಕೋಟ್ಯಂತರ ರೂಪಾಯಿ ಹಣ ಪಡೆದಿದೆ. ಇತ್ತ ನಮ್ಮ ಬ್ಯಾಂಕ್​ ಅಕೌಂಟ್​ಗಳನ್ನು ಮುಟ್ಟುಗೋಲು ಹಾಕಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತೆರಿಗೆ ವಂಚನೆ ಪ್ರಕರಣದಲ್ಲಿ ಸರ್ಕಾರ ಪಕ್ಷದ ಬ್ಯಾಂಕ್​ ಖಾತೆಗಳನ್ನು ನಿರ್ಬಂಧಿಸಿದ್ದರ ವಿರುದ್ಧ ಸೋನಿಯಾ, ರಾಹುಲ್​ ಗಾಂಧಿ ಜೊತೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಖರ್ಗೆ ಅವರು, ಕಾಂಗ್ರೆಸ್​ ಅನ್ನು ಮುಗಿಸಲು ಕೇಂದ್ರ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ. ದೇಶದ ಶೇಕಡಾ 20ರಷ್ಟು ಜನರು ಪಕ್ಷಕ್ಕೆ ಮತ ಹಾಕುತ್ತಾರೆ. ಅವರ ಪ್ರತಿನಿಧಿಯಾದ ಕಾಂಗ್ರೆಸ್​ ಪಕ್ಷವನ್ನು ತುಳಿಯುತ್ತಿರುವುದು ಅನ್ಯಾಯ ಎಂದರು.

ಚುನಾವಣಾ ಬಾಂಡ್​ಗಳಿಂದ ಬಿಜೆಪಿಯ ಖಜಾನೆ ತುಂಬಿದೆ. ಶೇಕಡಾ 56 ರಷ್ಟು ಹಣವನ್ನು ಬಾಂಡ್​ಗಳಿಂದಲೇ ಬಿಜೆಪಿ ಪಡೆದಿದೆ. ಶೇಕಡಾ 11 ರಷ್ಟು ಹಣ ಕಾಂಗ್ರೆಸ್​ ಪಕ್ಷಕ್ಕೆ ಬಾಂಡ್​​ನಿಂದ ಬಂದಿದೆ. ಜನರ ಹಣ ಬಳಸಿಕೊಂಡು ಬಿಜೆಪಿ ಚುನಾವಣೆ ನಡೆಸುತ್ತಿದೆ. ವಿಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಆದಷ್ಟು ಬೇಗ ಖಾತೆಗಳನ್ನು ರಿಲೀಸ್​ ಮಾಡಬೇಕು ಎಂದು ಆಗ್ರಹಿಸಿದರು.

ಚುನಾವಣಾ ಬಾಂಡ್​ಗಳ ಬಗ್ಗೆ ಸುಪ್ರೀಂಕೋರ್ಟ್​ ವಿಚಾರಣೆ ನಡೆಸುತ್ತಿದೆ. ಆದಷ್ಟು ಬೇಗ ಕೋರ್ಟ್​ ಆದೇಶ ನೀಡಬೇಕು. ಕೇಂದ್ರ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಯಾವುದೇ ತೆರಿಗೆ ಕಟ್ಟುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿದೆ ಎಂದು ಆರೋಪಿಸಿದರು.

ನಮ್ಮ ವಿರುದ್ಧ ಮೋದಿ ಷಡ್ಯಂತ್ರ: ಕೇಂದ್ರ ಸರ್ಕಾರ ಈ ಬಾರಿ ಚುನಾವಣೆಯನ್ನು ಅಕ್ರಮವಾಗಿ ನಡೆಸಲು ಮುಂದಾಗಿದೆ. ಚುನಾವಣಾ ಬಾಂಡ್​ಗಳಿಂದ ಬಂದ ಹಣದಿಂದ ಚುನಾವಣೆ ಎದುರಿಸಲು ಮುಂದಾಗಿದೆ. ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ದೂರಿದರು.

31 ವರ್ಷಗಳ ಹಿಂದಿನ ಕೇಸ್​ಗೆ ಸಂಬಂಧಿಸಿದಂತೆ ಬ್ಯಾಂಕ್​ ಅಕೌಂಟ್​ ಸೀಜ್​ ಮಾಡಲಾಗಿದೆ. ಖಾತೆಯಲ್ಲಿರುವ 250 ಕೋಟಿ ರೂಪಾಯಿ ಹಣವನ್ನು ಬಳಕೆ ಮಾಡಲಾಗುತ್ತಿಲ್ಲ. ಟಿವಿ, ಪತ್ರಿಕೆ, ಸಾಮಾಜಿಕ ಮಾಧ್ಯಮಗಳಿಗೆ ಪ್ರಚಾರದ ಜಾಹೀರಾತು ನೀಡಬೇಕಿದೆ. ಸಭೆ, ಸಮಾರಂಭ ಮಾಡಲೂ ಸಹ ನಮಗೆ ಸಾಧ್ಯವಾಗುತ್ತಿಲ್ಲ. ಖಾತೆಯನ್ನೇ ಸೀಜ್​ ಮಾಡಲಾಗಿದೆ. ಇದರಿಂದ ಹಣವನ್ನು ಬಳಕೆ ಮಾಡಲಾಗುತ್ತಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದರು.

ಸಣ್ಣ ಮೊತ್ತಕ್ಕೆ ಇಡೀ ಖಾತೆ ಸೀಜ್​: ತೆರಿಗೆ ಕಟ್ಟದ ಪ್ರಕರಣದಲ್ಲಿ 14 ಲಕ್ಷ ರೂಪಾಯಿ ದಂಡಕ್ಕೆ ಇಡೀ ಬ್ಯಾಂಕ್​ ಖಾತೆಯಲ್ಲಿನ ಹಣವನ್ನು ಸೀಜ್​ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಖಾತೆಗಳನ್ನು ನಿರ್ಬಂಧಿಸಲಾಗಿದೆ. ವ್ಯಕ್ತಿ, ಕಂಪನಿ, ಸಂಸ್ಥೆಯ ಅಕೌಂಟ್ ಅನ್ನು ಸೀಜ್​ ಮಾಡಿದರೆ ಏನಾಗುತ್ತೆ. ಪಕ್ಷದಿಂದ ಸಭೆ ಸಮಾರಂಭಗಳನ್ನೂ ನಡೆಸಲಾಗುತ್ತಿಲ್ಲ. ಕೇಂದ್ರ ಸರ್ಕಾರ ವಿಪಕ್ಷಗಳನ್ನು ಹಣಿಯಲು ಮುಂದಾಗಿದೆ ಎಂದು ಪಕ್ಷದ ನಾಯಕ ರಾಹುಲ್​ ಗಾಂಧಿ ಗುಡುಗಿದರು.

ಇದನ್ನೂ ಓದಿ: ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಳ: ಶೇ.1ರಷ್ಟು ಜನರಲ್ಲಿ 40% ಸಂಪತ್ತು ಕೇಂದ್ರೀಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.