ಕರ್ನಾಟಕ

karnataka

ಹಾವೇರಿ: ರಂಗಪಂಚಮಿ ರಂಗು, ಪ್ರಮುಖ ಬೀದಿಗಳಲ್ಲಿ ಕಾಮರತಿ ಪ್ರತಿಷ್ಠಾಪನೆ

By

Published : Mar 5, 2023, 10:36 AM IST

ಹಾವೇರಿ :ರಂಗಪಂಚಮಿ ಆಚರಣೆಗೆ ಹಾವೇರಿಯಲ್ಲಿ ತಯಾರಿ ನಡೆಯುತ್ತಿದೆ. ಶುಕ್ರವಾರ ಹಾವೇರಿ ನಗರದ ಪ್ರಮುಖ ವೃತ್ತಗಳು ಮತ್ತು ಸ್ಥಳಗಳಲ್ಲಿ ಕಾಮರತಿ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಏಲಕ್ಕಿ ಓಣಿ, ಅಕ್ಕಿಪೇಟೆಪುರದ ಓಣಿ, ಮೇಲಿನಪೇಟಿ ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಮೂರ್ತಿಗಳು ಕಂಡುಬಂದವು. 

ಈ ಹಿನ್ನೆಲೆಯಲ್ಲಿ ಶನಿವಾರ ಹುಕ್ಕೇರಿ ಮಠದಿಂದ ಆರಂಭವಾದ ಬೈಕ್ ಜಾಥಾಕ್ಕೆ ನಗರಸಭೆ ಅಧ್ಯಕ್ಷ ಸಂಜೀವ ಕುಮಾರ್ ನೀರಲಿಗೆ ಚಾಲನೆ ನೀಡಿದರು. ನಗರದ ಪ್ರಮುಖ ಸ್ಥಳಗಳಲ್ಲಿ ಜಾಥಾ ಸಾಗಿತು. ಹಬ್ಬದ ಕುರಿತು ಮಾಹಿತಿ ನೀಡಿದ ರಂಗಪಂಚಮಿ ಸಮಿತಿ ಸದಸ್ಯ ಕರಬಸಪ್ಪ, ಐದು ದಿನಗಳ ಕಾಲ ನಡೆಯುವ ಕಾಮರತಿಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದೆಲ್ಲೆಡೆ ಕಟ್ಟಿಗೆಯಲ್ಲಿ ಕಾಮರತಿ ಸ್ಥಾಪನೆ ಮಾಡಿದರೆ ಹಾವೇರಿಯಲ್ಲಿ ಜೀವಂತ ಕಾಮರತಿ ಕುಳ್ಳಿರಿಸಲಾಗುತ್ತದೆ. ಮನರಂಜನೆಗಾಗಿ ಈ ರೀತಿ ಕುಳ್ಳಿರಿಸುವ ಕಾಮರತಿ ನಗಿಸಿದರೆ ನಗಿಸಿದವರಿಗೆ ನಗದು ಬಹುಮಾನ ಇಡಲಾಗುತ್ತದೆ. ಆದರೆ ಕಳೆದ ಒಂದು ದಶಕದಲ್ಲಿ ಈ ರೀತಿ ಸಜೀವವಾಗಿ ಕುಳ್ಳಿರಿಸಿ ಕಾಮರತಿಯನ್ನು ನಗಿಸಿದ ಉದಾಹರಣೆಗಳಿಲ್ಲ. ವರ್ಷದಿಂದ ವರ್ಷಕ್ಕೆ ಬಹುಮಾನದ ಹಣ ಹೆಚ್ಚಿಸಲಾಗುತ್ತಿದೆ. ಆದರೂ ಕಾಮರತಿ ನಗಿಸಲಾಗುತ್ತಿಲ್ಲ ಎಂದು ಕರಬಸಪ್ಪ ತಿಳಿಸಿದರು.     

ಹಾವೇರಿಯ ರಂಗಿನಾಟಕ್ಕೆ ಮಂಗಳಮುಖಿಯರನ್ನು ಕರೆತಂದು ಮದುವೆಯಾಗದೇ ಇರುವ ಪುರುಷರು ಮತ್ತು ಮಹಿಳೆಯರು, ಮಕ್ಕಳಾಗದ ಮಹಿಳೆಯರಿಗೆ ಮಂಗಳಮುಖಿಯರಿಂದ ಮಡಿಲು ತುಂಬಿಸಲಾಗುತ್ತದೆ. ಈ ರೀತಿ ಮಡಿಲು ತುಂಬಿಸಿಕೊಂಡ ಮಹಿಳೆ ಮದುವೆಯಾದ ಉದಾಹರಣೆಗಳಿವೆ. ಮಕ್ಕಳಾಗದವರಿಗೆ ಮಕ್ಕಳಾದ ಉದಾಹರಣೆಗಳಿವೆ. ಮದುವೆಯಾಗಿ ಮಕ್ಕಳಾದವರು ಮರು ವರ್ಷ ಮಂಗಳಮುಖಿಯರಿಗೆ ಸನ್ಮಾನ ಮಾಡುತ್ತಾರೆ. ಮಂಗಳಮುಖಿಯರಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳೂ ನಡೆಯುತ್ತವೆ ಎಂದು ಅವರು ಮಾಹಿತಿ ನೀಡಿದರು.    

ಇನ್ನು ಹಲಗೆ ಬಾರಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಅತಿ ಹೆಚ್ಚು ಅವಧಿಯಲ್ಲಿ ಅತಿ ಹೆಚ್ಚು ಗತ್ತುಗಳನ್ನು ಬಾರಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಈ ವರ್ಷ ಗದಗ ಜಿಲ್ಲೆ ಕೋತಬಾಳ ಜಾನಪದ ಕಲಾ ತಂಡದಿಂದ ನಗರದಲ್ಲಿ ಜೋಗತಿ ನೃತ್ಯ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಹೋಳಿ ಹುಣ್ಣಿಮೆಗೆ ಎರಡು ದಿನಗಳಿರುವಾಗ ಮನರಂಜನೆಗಾಗಿ ಕಾಮನಪದಗಳ ಹೋಳಿಪದಗಳ ವಾಚನ, ಅಡ್ಡಸೋಗು ಸ್ಪರ್ಧೆಗಳು ನಡೆಯುತ್ತವೆ.

ಕಾಮಣ್ಣನ ಪ್ರತಿಷ್ಠಾಪಿಸಿದ ಸಂಘಗಳು, ಸಂಘದ ಸದಸ್ಯರು ಅಡ್ಡಸೋಗು ಹಾಕಿ ಮನರಂಜಿಸುತ್ತಾರೆ. ಪ್ರಚಲಿತ ವಿದ್ಯಮಾನ, ಪ್ರಚಲಿತದಲ್ಲಿರುವ ವ್ಯಕ್ತಿಗಳನ್ನು ಹೋಲಿಕೆ ಮಾಡುವ ಈ ಅಡ್ಡಸೋಗುಗಳನ್ನು ನೋಡಿ ಜನ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಈ ರೀತಿಯ ಸೋಗುಗಳು ಸಾಗುತ್ತವೆ. ಕಾಮದಹನದ ದಿನ ಕಾಮನನ್ನು ಸ್ಥಾಪಿಸಿದ ಸಮಿತಿಗಳು ಹೋಳಿಬಂಡಿಗಳನ್ನು ಕಟ್ಟುತ್ತಾರೆ. ಬಂಡಿಗಳಲ್ಲಿ ಡ್ರಮ್‌ಗಟ್ಟಲೆ ಬಣ್ಣದ ನೀರು ತುಂಬಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಲ್ಲಿರುವ ಯುವಕರಿಗೆ ಬಣ್ಣ ಎರಚಿ ಸಂಭ್ರಮಿಸುತ್ತಾರೆ. 

ಹೋಳಿ ಹುಣ್ಣಿಮೆಗೆ ಹಾವೇರಿ ಇದೀಗ ಕೇಸರಿಮಯವಾಗಿದೆ. ಸುಭಾಷ್​ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಕೇಸರಿ ರಾರಾಜಿಸುತ್ತಿದೆ. ವರ್ತಕರು ಹಬ್ಬಕ್ಕಾಗಿ ರಂಗುರಂಗಿನ ಪರಿಸರಪ್ರೇಮಿ ಬಣ್ಣಗಳನ್ನು ಮಾರಾಟಕ್ಕಿಟ್ಟಿದ್ದಾರೆ. ವಿವಿಧ ಮುಖವಾಡಗಳು, ಪಿಚಕಾರಿಗಳನ್ನು ತರಲಾಗಿದ್ದು ಹಬ್ಬ ಕಳೆಗಟ್ಟಿದೆ.

ಇದನ್ನೂ ಓದಿ:ಸಾಮರಸ್ಯದ ಪ್ರತೀಕವಾದ ಶಿಶುನಾಳ ಶರೀಫ ಗಿರಿಯಲ್ಲಿ ಅದ್ಧೂರಿ ರಥೋತ್ಸವ

ABOUT THE AUTHOR

...view details