ಯೋಗದಲ್ಲಿ ಪ್ರಾಣಾಯಾಮವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರಾಣಾಯಾಮದ ಪ್ರಯೋಜನಗಳು ಮತ್ತು ವೈದ್ಯಕೀಯ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆಯುರ್ವೇದದಲ್ಲಿ ಹೇಳಿರುವಂತೆ ನಿಯಮಿತವಾಗಿ ಕೆಲವು ಪ್ರಾಣಾಯಾಮಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ದೇಹದಲ್ಲಿನ ವಾತ, ಪಿತ್ತ ಮತ್ತು ಕಫ ದೋಷಗಳನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಲು ಇದು ಸಹಕಾರಿಯಾಗಿದೆ.
ಪ್ರಾಣಾಯಾಮವು ಯೋಗಾಸನಗಳ ವಿಧಗಳಲ್ಲಿ ಪ್ರಮುಖವಾದದ್ದು. ದೈಹಿಕ ಮತ್ತು ಮಾನಸಿಕವಾಗಿ ಇದು ಪರಿಣಾಮಕಾರಿಯಾಗಿರುವುದರಿಂದ ಎಲ್ಲಾ ವಯಸ್ಸಿನ ಜನರು ಪ್ರಾಣಾಯಾಮ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಾಣಾಯಾಮದ ನಿಯಮಿತ ಅಭ್ಯಾಸವು ಉಸಿರಾಟದ ಸಮಸ್ಯೆಗೆ ಪರಿಹಾರವಾಗಿದೆ. ಪ್ರಾಣಾಯಾಮದ ಪ್ರಯೋಜನಗಳ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಅನೇಕ ಸಂಶೋಧನೆಗಳು ಮತ್ತು ಪ್ರಯೋಗಗಳಲ್ಲಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಕೊಂಚ ಹೆಚ್ಚೇ ಪರಿಣಾಮಕಾರಿಯಾಗಿದೆ ಎಂದು ದೃಢಪಟ್ಟಿದೆ.
ಯೋಗ ಪಿತಾಮಹ ಪತಂಜಲಿ ಮಹರ್ಷಿ ನೀಡಿದ ವ್ಯಾಖ್ಯಾನದ ಪ್ರಕಾರ, ಪ್ರಾಣಾಯಾಮವು ಉಸಿರಾಟಕ್ಕೆ ಸಂಬಂಧಿಸಿದ ಯೋಗವಾಗಿದೆ. ಇದು ಉಸಿರಾಟದ ವ್ಯವಸ್ಥೆಗೆ ಸಂಬಂಧಿಸಿದ ಅಂಗಗಳನ್ನು ತೀವ್ರತೆ ಮತ್ತು ಲಯದೊಂದಿಗೆ ಹೆಚ್ಚು ಸಕ್ರಿಯವಾಗಿ ಮಾಡುತ್ತದೆ. ಮತ್ತೊಂದೆಡೆ, ನಾವು ಆಯುರ್ವೇದದ ಬಗ್ಗೆ ಮಾತನಾಡಿದರೆ, ಈ ವೈದ್ಯಕೀಯ ವ್ಯವಸ್ಥೆಯಲ್ಲಿ ಪ್ರಾಣಾಯಾಮವನ್ನು ಚಿಕಿತ್ಸೆಯೆಂದೇ ಪರಿಗಣಿಸಲಾಗಿದೆ. ಇದು ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯಲ್ಲಿನ ಶುದ್ಧೀಕರಣ ಪ್ರಕ್ರಿಯೆಯ ಜೊತೆಗೆ ಒಟ್ಟಾರೆಯಾಗಿ ಮಾನಸಿಕ, ದೈಹಿಕ, ಭಾವನಾತ್ಮಕ ಆರೋಗ್ಯಕ್ಕೂ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ಆಯುರ್ವೇದದಲ್ಲಿ, ಪ್ರಾಣಾಯಾಮದ ನಿಯಮಿತ ಅಭ್ಯಾಸವು ವಾತ, ಪಿತ್ತ ಮತ್ತು ಕಫ ದೋಷಗಳನ್ನು ನಿಯಂತ್ರಿಸುತ್ತದೆ ಎಂದು ನಂಬಲಾಗಿದೆ.
ಪ್ರಾಣಾಯಾಮ ಮತ್ತು ಅದರ ಪ್ರಕಾರಗಳು:ಯೋಗ ಶಾಸ್ತ್ರಗಳ ಪ್ರಕಾರವಾಗಿ ಬೆಂಗಳೂರಿನ ಯೋಗ ಗುರು ಮೀನು ವರ್ಮಾ ಅವರು ಪ್ರಾಣಾಯಾಮ ಮತ್ತು ಅದರ ಪ್ರಕಾರಗಳನ್ನು ವಿವರಿಸಿದ್ದಾರೆ. ಪ್ರಾಣಾಯಾಮವು ಪ್ರಾಣ ಮತ್ತು ಯಮ ಎಂಬ ಎರಡು ಸಂಸ್ಕೃತ ಪದಗಳಿಂದ ಮಾಡಲ್ಪಟ್ಟಿದೆ. 'ಪ್ರಾಣ' ಎಂದರೆ ಜೀವ ಶಕ್ತಿ ಮತ್ತು 'ಯಾಮ' ಎಂದರೆ ಅದರ ಮೇಲೆ ನಿಯಂತ್ರಣ ಸಾಧಿಸುವುದು. ಯೋಗದಲ್ಲಿ ಉಸಿರಾಟದ ನಿಯಂತ್ರಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಪ್ರಾಣಾಯಾಮ ಇದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಒಬ್ಬರು ತಮ್ಮ ಆಂತರಿಕ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಬಹುದು. ಇದು ಉಸಿರಾಟದ ಮಾರ್ಗವನ್ನು ಆರೋಗ್ಯಕರವಾಗಿಸುವ ಜೊತೆಗೆ ಒಟ್ಟಾರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಪ್ರಾಣಾಯಾಮದಲ್ಲಿ ಉಸಿರಾಡುವ ಮತ್ತು ಬಿಡುವ ಮೂರು ಕ್ರಿಯೆಗಳಿವೆ. ಅಂದರೆ, ಸರಿಯಾದ ವೇಗ ಮತ್ತು ರೀತಿಯಲ್ಲಿ ಉಸಿರನ್ನು ತೆಗೆದುಕೊಳ್ಳುವುದು, ನಿಲ್ಲಿಸುವುದು ಮತ್ತು ಉಸಿರನ್ನು ಬಿಡುವುದು.