ಕರ್ನಾಟಕ

karnataka

78ರಲ್ಲೂ ಕಡಿಮೆಯಾಗದ ಉತ್ಸಾಹ: 12,300 ಅಡಿ ಎತ್ತರಕ್ಕೆ ತೆರಳಿ ಯೋಧರಿಗೆ ಯೋಗ - ಪ್ರಾಣಾಯಾಮ ಕಲಿಸಿದ ಪದ್ಮಿನಿ

By

Published : Dec 9, 2022, 1:01 PM IST

ಇದು ಅತಿ ಎತ್ತರದ ಪ್ರದೇಶ, ಇಲ್ಲಿ ಭಾರಿ ಹಿಮಪಾತ, ಉಸಿರಾಡಲೂ ಸಹ ಕಷ್ಟ. ಆದ್ರೆ 78ರ ಹರೆಯದ ಪದ್ಮಿನಿ ಮಾತ್ರ ಹಿಮಾಲಯದ 12,300 ಅಡಿ ಎತ್ತರದಲ್ಲಿ ಯೋಧರಿಗೆ ಪ್ರಾಣಾಯಾಮ ಯೋಗ ಕಲಿಸುತ್ತಿದ್ದಾರೆ. ಜೊತೆಗೆ ತಾವೂ ಕೂಡ ಸೈನಿಕರೊಂದಿಗೆ ಯೋಗಾಸನ ಮಾಡುತ್ತಾರೆ.

padmini jog
ಯೋಧರಿಗೆ ಯೋಗ ಪ್ರಾಣಾಯಾಮ ಕಲಿಸಿದ ಪದ್ಮಿನಿ ಜೋಗ್​

ಭಾರತದಲ್ಲಿ ಯೋಗಕ್ಕೆ ಒಂದು ಮಹತ್ವದ ಸ್ಥಾನವಿದೆ. ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ. ಇದೀಗ 78ರ ಹರೆಯದ ಪದ್ಮಿನಿ ಜೋಗ್ ಎಂಬುವರು ದೇಶಾದ್ಯಂತ ಉಚಿತ ಯೋಗ ಶಿಬಿರಗಳನ್ನು ನಡೆಸುವ ಜೊತೆಗೆ ಸಾವಿರಾರು ಅಡಿ ಎತ್ತರದ ಪ್ರದೇಶದಲ್ಲಿ ಯೋಧರಿಗೆ ಯೋಗ ಹೇಳಿ ಕೊಡುವ ಮೂಲಕ ಸೈನಿಕರ ಬಗ್ಗೆ ಕಾಳಜಿ ವಹಿಸಿದ್ದಾರೆ.

ಬೆಂಗಳೂರಿನವರಾದ ಪದ್ಮಿನಿಯವರು ಲಂಡನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿಎಸ್​ಸಿ ಹೋಮ್ ಸೈನ್ಸ್ ಮುಗಿಸಿದ ನಂತರ ಕರ್ನಲ್ ಪ್ರತಾಪ್ ಜೋಗ್ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮ್ಮನೆ ಇರಲು ಇಷ್ಟ ಪಡದ ಪದ್ಮಿನಿಯವರು ಮಾಂಟೆಸ್ಸರಿ ಕೋರ್ಸ್ ಮಾಡಿ, ಮಕ್ಕಳಿಗೆ ಉಚಿತವಾಗಿ ಹೇಳಿ ಕೊಡುತ್ತಿದ್ದರು. ಅವರ ಪತಿಯ ನಿವೃತ್ತಿಯ ನಂತರ ನಾಗ್ಪುರಕ್ಕೆ ತೆರಳಿದರು.

ಒಮ್ಮೆ ನಾಗ್ಪುರದಲ್ಲಿ ಯೋಗ ಶಿಬಿರ ನಡೆಯುತ್ತಿದ್ದಾಗ ಪತಿಯೊಂದಿಗೆ ಪದ್ಮಿನಿ ಭೇಟಿ ನೀಡಿದ್ದರು. ಬಳಿಕ ದಂಪತಿಗೆ ಯೋಗದಲ್ಲಿ ಆಸಕ್ತಿ ಮೂಡಿಸಿತು. ಅಂದಿನಿಂದ ಇಬ್ಬರೂ ಮನೆಯಲ್ಲೇ ಅಭ್ಯಾಸ ಆರಂಭಿಸಿದರು. ಕೆಲವು ವರ್ಷಗಳ ನಂತರ, ಹರಿದ್ವಾರದಲ್ಲಿ ಬಾಬಾ ರಾಮದೇವ್ ಅವರ ಬಳಿ ತರಬೇತಿ ಪಡೆದು ಯೋಗ ಶಿಕ್ಷಕರ ಕೋರ್ಸ್ ಪೂರ್ಣಗೊಳಿಸಿದರು.

ಇದನ್ನೂ ಓದಿ:ಅಕ್ಷರ ಯೋಗ ಸಂಸ್ಥೆಯಿಂದ ಧನುರಾಸನದಲ್ಲಿ ಗಿನ್ನೆಸ್‌ ವಿಶ್ವ ದಾಖಲೆ

"ಯೋಗದ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಭೋಪಾಲ್ ಬಳಿಯ ಸೆಹೋರ್‌ನಲ್ಲಿ ಪ್ರಥಮ ಬಾರಿಗೆ ಶಿಬಿರವನ್ನು ಆಯೋಜಿಸಿದೆವು. ಮೊದಲ ಶಿಬಿರದಲ್ಲೇ 600 ಮಂದಿ ಭಾಗವಹಿಸಿದ್ದರು. ಅವರಿಗೆ ಆಸನಗಳು ಮತ್ತು ಪ್ರಾಣಾಯಾಮವನ್ನು ಹೇಗೆ ಮಾಡಬೇಕು ಮತ್ತು ಅವುಗಳ ಪ್ರಯೋಜನಗಳನ್ನು ಮೈಕ್‌ನಲ್ಲಿ ವಿವರಿಸಿದೆ.

ನಾವು ಜೋಡಿಯಾಗಿ ದೇಶಾದ್ಯಂತ ಪ್ರವಾಸ ಮಾಡಿದ್ದೇವೆ. ಶಾಲೆ, ಕಾಲೇಜುಗಳು, ವೃದ್ಧಾಶ್ರಮಗಳು, ರೋಟರಿ ಕ್ಲಬ್‌ಗಳು, ಹಿರಿಯ ನಾಗರಿಕರ ಸಂಘಗಳು ಹೀಗೆ ಸಾಧ್ಯವಾದಷ್ಟು ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಿದ್ದೇವೆ" ಎಂದು ಪದ್ಮಿನಿ ಹೇಳಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆಗಳಲ್ಲಿ ಧ್ಯಾನ, ಯೋಗ ಕಲಿಕೆಗೆ ಕ್ರಮ: ಸಚಿವ ಬಿ ಸಿ ನಾಗೇಶ್

ಪ್ರತಾಪ್ ಮತ್ತು ಪದ್ಮಿನಿ ಅವರು ಭದ್ರತಾ ಪಡೆಗಳು, ಸೇನೆ, ನೌಕಾಪಡೆ, ವಾಯುಪಡೆ ಮತ್ತು ಪೊಲೀಸ್ ಪಡೆಗಳಿಗೆ ಸಹ ಉಚಿತ ಯೋಗದ ತರಬೇತಿ ಪ್ರಾರಂಭಿಸಿ, ಆರ್ಮಿ ಪಬ್ಲಿಕ್ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ತರಬೇತಿ ನೀಡುವ ಮೂಲಕ ಸೈನಿಕರ ಬಗ್ಗೆ ಕಾಳಜಿ ವಹಿಸಿದ್ದಾರೆ.

ಹೃದಯಾಘಾತದಿಂದ ಪ್ರತಾಪ್ ಮರಣ: ಸೆಪ್ಟೆಂಬರ್ 5, 2014 ರಂದು ಹೃದಯಾಘಾತದಿಂದ ಪ್ರತಾಪ್ ಮರಣ ಹೊಂದಿದರು. ಸೇನಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ನಿತ್ಯ ಯೋಗ, ಪ್ರಾಣಾಯಾಮ ಮಾಡುತ್ತಿದ್ದ ಅವರಿಗೆ ಯಾಕೆ ಹೀಗಾಯಿತು ಎಂದು ವೈದ್ಯರಲ್ಲಿ ಕೇಳಿದೆ. ಇದೆಲ್ಲ ಆರಂಭವಾಗುವ ಮುನ್ನವೇ ಅಂದರೆ 20 ವರ್ಷಗಳ ಹಿಂದೆಯೇ ಅವರಿಗೆ ಉಷ್ಣ ಸಂಬಂಧಿ ಕಾಯಿಲೆ ಇತ್ತು ಎಂದು ವೈದ್ಯರು ಹೇಳಿದರು ಅಂತಾ ಪದ್ಮಿನಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:2,500ಕ್ಕೂ ಹೆಚ್ಚು ಯೋಗ ಪಟುಗಳಿಂದ ಏಕಕಾಲಕ್ಕೆ ಯೋಗ ಪ್ರದರ್ಶನ

ಇನ್ನು ಯೋಗದ ಮೂಲಕ ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ನಮ್ಮ ಮಹತ್ವಾಕಾಂಕ್ಷೆಯನ್ನು ನಾನು ಮುಂದುವರೆಸಿದೆ. ಪತಿ ಅಗಲಿದ ಒಂದು ತಿಂಗಳ ನಂತರ ಬೆಂಗಳೂರು ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಬಿರದೊಂದಿಗೆ ಏಕಾಂಗಿ ಪ್ರಯಾಣ ಪ್ರಾರಂಭಿಸಿದೆ. ಇಲ್ಲಿಯವರೆಗೆ 940 ಶಿಬಿರಗಳನ್ನು ಮಾಡಲಾಗಿದೆ.

ನಿರಂತರ ಆತಂಕ ಮತ್ತು ಒತ್ತಡದಿಂದ ಕರ್ತವ್ಯ ನಿರ್ವಹಿಸುವ ಸೇನಾ ಸಹೋದರರಿಗೆ ಯೋಗ ಅತ್ಯಗತ್ಯ. ಅದಕ್ಕಾಗಿಯೇ 12,300 ಅಡಿ ಎತ್ತರದಲ್ಲಿರುವ ಜಮ್ಮು ಮತ್ತು ಕಾಶ್ಮೀರದಂತಹ ಸ್ಥಳಗಳಲ್ಲಿ ಯೋಗ ಮತ್ತು ಪ್ರಾಣಾಯಾಮವನ್ನು ಸೈನಿಕರಿಗೆ ಪ್ರತಿ ದಿನ ಎರಡು ಗಂಟೆಗಳ ಕಾಲ ಕಲಿಸಲಾಗುತ್ತದೆ.

ಪ್ರತಿಯೊಬ್ಬರೂ ಪ್ರತಿದಿನ ಅರ್ಧ ಗಂಟೆ ಪ್ರಾಣಾಯಾಮ ಮತ್ತು ಹತ್ತು ನಿಮಿಷ ಯೋಗಾಸನ ಮಾಡಬೇಕು. ನನ್ನ ಕೊನೆಯ ಉಸಿರು ಇರುವವರೆಗೂ ಈ ಕೆಲಸ ಮುಂದುವರೆಸಿತ್ತೇನೆ ಎನ್ನುತ್ತಾರೆ ಪದ್ಮಿನಿ.

ABOUT THE AUTHOR

...view details