ಕರ್ನಾಟಕ

karnataka

ಜನವರಿ 19 ರಂದು ಕಾಲಜ್ಞಾನಿ ನೆಲಕ್ಕೆ ಮೋದಿ ಆಗಮನ: ಭರ್ಜರಿ ಸಿದ್ಧತೆ

By

Published : Jan 18, 2023, 5:26 PM IST

Updated : Jan 18, 2023, 6:27 PM IST

ಜನವರಿ 19 ರಂದು ವಿವಿಧ ಅಭಿವೃದ್ಧಿಗಳ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಕೊಡೇಕಲ್‌ ಗ್ರಾಮಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿ ಪ್ರವಾಸ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಸುರಪುರ ಮತಕ್ಷೇತ್ರದ ಕೊಡೇಕಲ್‌ ಗ್ರಾಮ
ಸುರಪುರ ಮತಕ್ಷೇತ್ರದ ಕೊಡೇಕಲ್‌ ಗ್ರಾಮ

ಹುಣಸಗಿ ನಾರಾಯಣಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬೃಹತ್ ವೇದಿಕೆ ಸಜ್ಜು

ಯಾದಗಿರಿ :ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಹುಣಸಗಿ ತಾಲೂಕಿನ ಕಾಲಜ್ಞಾನಿ ಬಸವಣ್ಣನವರ ಹುಟ್ಟೂರಾದ ಕೊಡೇಕಲ್​​ನ ನಾರಾಯಣಪುರ ಜಲಾಶಯಕ್ಕೆ ಹೊಸ ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್​ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆಯ ಉದ್ಘಾಟನಾ ಹಾಗೂ ಇನ್ನಿತರ ಯೋಜನೆಗಳಿಗೆ ಅಡಿಗಲ್ಲು ಹಾಕಲು ಆಗಮಿಸಲಿದ್ದು, ಕೊಡೇಕಲ್ ಹೊರವಲಯದ ಹುಣಸಗಿ ನಾರಾಯಣಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಜಿಲ್ಲಾಡಳಿತ ವತಿಯಿಂದ ಬೃಹತ್ ವೇದಿಕೆ ಸಜ್ಜುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಈ ಹಿನ್ನೆಲೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ತಂಡದವರು ಭದ್ರತಾ ದೃಷ್ಟಿಯಿಂದ ಸಿದ್ದತೆಗೊಳ್ಳುತ್ತಿರುವ ವೇದಿಕೆಯನ್ನು ಪರಿಶೀಲನೆ ನಡೆಸಿದರು. ಈಗಾಗಲೇ 1150-450 ಅಡಿ ಸುತ್ತಳತೆಯಲ್ಲಿ ಚಪ್ಪರದ ಆಕಾರದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇರುವುದರಿಂದಾಗಿ ಇನ್ನು ಎರಡು ಸಮಾನಂತರ ವೇದಿಕೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ಅಧಿಕಾರಿಗಳ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿವಿಐಪಿ ಮತ್ತು ವಿಐಪಿ, ಮಾಧ್ಯಮದವರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತಿದ್ದು, ಸುಮಾರು ಒಂದು ಲಕ್ಷ ಜನ ಕುಳಿತುಕೊಳ್ಳಲು ಸದ್ಯ ಕುರ್ಚಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇನ್ನು ಹೆಚ್ಚು ಆಸನದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದರು.

300 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸ್ಥಳ ಗುರುತು: ಅಧಿಕಾರಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸುಮಾರು 50ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸುವ ಯೋಜನೆ ರೂಪಿಸಲಾಗಿದೆ. ಸುಮಾರು 14 ಕ್ಕೂ ಹೆಚ್ಚು ಪ್ರತ್ಯೇಕ ಕಂಪಾರ್ಟ್‌ಮೆಂಟ್‌ಗಳನ್ನು ಮಾಡಲಾಗಿದ್ದು, ಪ್ರತಿಯೊಂದಕ್ಕೂ ಒಂದೊಂದು ತಂಡ ರಚಿಸಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರ ಸೇರಿದಂತೆ ನೆರೆಯ ವಿಜಯಪುರ, ರಾಯಚೂರು ಜಿಲ್ಲೆಯ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಲಿದ್ದು, ಎಲ್ಲ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸುಮಾರು 300 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ.

ಪ್ರಧಾನಿ ಭಾಗವಹಿಸುವಲ್ಲಿ ಹೊಸ ತಂತ್ರಜ್ಞಾನದ ಚಪ್ಪರ, ವೇದಿಕೆ ನಿರ್ಮಿಸುತ್ತಿದ್ದು, ಗಣ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೆ ಸೂಕ್ತ ಸೌಲಭ್ಯ ಸುರಕ್ಷೆ, ಊಟ, ಉಪಹಾರ ಪಾರ್ಕಿಂಗ್ ಹಾಗೂ ಇನ್ನಿತರ ಮೂಲ ಸೌಕರ್ಯ ವ್ಯವಸ್ಥೆಯನ್ನು ಎಲ್ಲ ಇಲಾಖೆಗಳ ಮಧ್ಯೆ ಸಮನ್ವಯ ಮೂಲಕ ಸಿದ್ಧತೆ ನಡೆಸಲಾಗುತ್ತಿದೆ.

ಸಾರ್ವಜನಿಕರಿಗಾಗಿ ಮೊಬೈಲ್ ಶೌಚಾಲಯ ವ್ಯವಸ್ಥೆ: ಪ್ರಧಾನಮಂತ್ರಿಯವರು ಎಸ್‌ಪಿಜಿ ಭದ್ರತೆ ಹೊಂದಿದವರು. ಹಾಗಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಬರದಂತೆ ನೋಡಿಕೊಂಡು, ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ನಿಯೋಜಿಸಲಾಗುತ್ತದೆ. ಪ್ರಧಾನಿಗಳ ಸುರಕ್ಷಿತ ಮತ್ತು ಸುಲಲಿತ ಸಂಚಾರ, ಪ್ರತಿಯೊಬ್ಬ ಸಾರ್ವಜನಿಕರಿಗೂ ಅತೀ ಹತ್ತಿರದಿಂದ ವಾಹನದಿಂದ ಇಳಿದು ಸಭಾ ಕಾರ್ಯಕ್ರಮಕ್ಕೆ ಬರಲು ಅವಕಾಶ, ಕಾರ್ಯಕ್ರಮ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪುವ ಹಿನ್ನೆಲೆ ಸಂಚಾರ ನಿಷೇಧ, ಸಂಚಾರ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರಿಗಾಗಿ ಮೊಬೈಲ್ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದು, ಅದರಂತೆ ತುರ್ತು ಆರೋಗ್ಯ ಚಿಕಿತ್ಸಾ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪ್ರಧಾನಿ ಹಾಗೂ ಇನ್ನಿತರ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆ 6 ಹೆಲಿಪ್ಯಾಡ್ ಗಳನ್ನು ನಿರ್ಮಿಸುತ್ತಿದ್ದು, ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದರು.

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿರುವ ಮೋದಿ ಪ್ರವಾಸ:ಇದೇ 19 ರಂದು ವಿವಿಧ ಅಭಿವೃದ್ಧಿಗಳ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಎಂದು ಜಿಲ್ಲೆಯ ಸುರಪುರ ಮತಕ್ಷೇತ್ರದ ಕೊಡೇಕಲ್‌ ಗ್ರಾಮಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿ ಪ್ರವಾಸ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ.

ಸುರಪುರ ತಾಲೂಕಿನಲ್ಲಿ 132 ಗ್ರಾಮಗಳು, ಶಹಾಪುರ ತಾಲೂಕಿನಲ್ಲಿ 142 ಗ್ರಾಮಗಳು, ವಡಗೇರಾ ತಾಲೂಕಿನಲ್ಲಿ 68 ಗ್ರಾಮಗಳು, ಯಾದಗಿರಿ ತಾಲೂಕಿನಲ್ಲಿ 139 ಗ್ರಾಮಗಳು, ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ಈ ಯೋಜನೆಯು 2004 ಕೋಟಿ ರೂಪಾಯಿಗಳಾದ್ದಾಗಿದೆ. 310 ಕೋಟಿ ರು. ಗಳ ವೆಚ್ಚದಲ್ಲಿ ಪುನರುಜ್ಜಿವನ ಮತ್ತು ನಗರ ಪರಿವರ್ತನೆಗಾಗಿ (ಅಮೃತ್) ಎರಡನೇ ಹಂತದ ಅಟಲ್ ಮಿಷನ್‌ಗೆ ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ.

ಓದಿ :ನಾನು ಸ್ಪರ್ಧೆ ಮಾಡೋದು ಒಂದೇ ಕ್ಷೇತ್ರದಿಂದ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Last Updated : Jan 18, 2023, 6:27 PM IST

ABOUT THE AUTHOR

...view details