ಕರ್ನಾಟಕ

karnataka

ಮಣ್ಣಿನ ಕೊರತೆ ಎದುರಿಸುತ್ತಿರುವ ಗಣೇಶ ಮೂರ್ತಿ ತಯಾರಕರು.. ಸರ್ಕಾರದ ವಿರುದ್ಧ ಆಕ್ರೋಶ

By

Published : Aug 27, 2022, 1:43 PM IST

ಪರಿಸರ ರಕ್ಷಣೆಗೆ ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಪಿಒಪಿ ಗಣೇಶ ಮೂರ್ತಿ ಬ್ಯಾನ್ ಮಾಡಿ ಆದೇಶಿಸಲಾಗಿದೆ. ಈಗ ಪಾಲಿಕೆ ಆದೇಶದ ವಿರುದ್ಧ ವಿಜಯಪುರ ಜಿಲ್ಲೆಯ ಗಣೇಶ ಮೂರ್ತಿ ತಯಾರಕರು ಅಸಮಾಧಾನ ಹೊರ ಹಾಕಿದ್ದಾರೆ.

Ganesha idol
ಮಣ್ಣಿನ ಗಣೇಶ ಮೂರ್ತಿ

ವಿಜಯಪುರ:ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಆರಂಭವಾಗಲಿದೆ. ಆದರೆ ಮಣ್ಣಿನ ಮೂರ್ತಿ ಹಾಗೂ ಪಿಒಪಿ ಮೂರ್ತಿಯ ಗೊಂದಲ ಸರ್ಕಾರ ಮತ್ತು ಭಕ್ತರ ನಡುವೆ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಯಾವುದೇ ಸೌಲಭ್ಯ ಒದಗಿಸದೇ ಕೇವಲ ನಿರ್ಬಂಧ ಹೇರಿರುವುದು ಗಣೇಶ ಮೂರ್ತಿ ತಯಾರಕರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸರ ರಕ್ಷಣೆಗೆ ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಪಿಒಪಿ ಗಣೇಶ ಮೂರ್ತಿ ಬ್ಯಾನ್ ಮಾಡಿ ಆದೇಶಿಸಲಾಗಿದೆ. ಈಗ ಪಾಲಿಕೆ ಆದೇಶದ ವಿರುದ್ಧ ವಿಜಯಪುರ ಜಿಲ್ಲೆಯ ಗಣೇಶ ಮೂರ್ತಿ ತಯಾರಕರು ಅಸಮಾಧಾನ ಹೊರ ಹಾಕಿದ್ದಾರೆ.

ಮಣ್ಣಿನ ಕೊರತೆ ಎದುರಿಸುತ್ತಿರುವ ಗಣೇಶ ಮೂರ್ತಿ ತಯಾರಕರು

ಪಿಒಪಿ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ:ಜಿಲ್ಲಾದ್ಯಂತ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ‌. ಆದರೆ, ಇಷ್ಟು ಸಂಖ್ಯೆಯಲ್ಲಿ ಮಣ್ಣಿನ ಗಣೇಶ ದೊರಕುವುದು ಅಷ್ಟು ಸುಲಭದ ಮಾತಲ್ಲ. ಹೆಚ್ಚಿನ ಭಕ್ತರು ಗಣೇಶ ಮೂರ್ತಿ ಕುರಿತು ತಮ್ಮದೇ ಆದ ಒಂದಷ್ಟು ಭಾವನೆ, ನಿಯಮ ಹಾಗೂ ಸಂಪ್ರದಾಯಿಕ ಸಂಬಂಧ ಹೊಂದಿರುತ್ತಾರೆ. ಮಣ್ಣಿನ ಗಣೇಶ ಮೂರ್ತಿಗಳಲ್ಲಿ ಫಿನಿಶಿಂಗ್ ಸರಿ ಬರುವುದಿಲ್ಲ. ನೋಡಲು ಸುಂದರವಾಗಿರುವುದಿಲ್ಲ. ಅಲ್ಲದೇ ಬಹಳ ನಾಜೂಕಿನಿಂದ ಮೂರ್ತಿ ನಿರ್ವಹಣೆ ಮಾಡಬೇಕು. ಆದರೆ ಪಿಒಪಿ ಗಣೇಶ ಮೂರ್ತಿಗಳಲ್ಲಿ ಬಣ್ಣ, ಪಿನಿಶಿಂಗ್ ಜೊತೆಗೆ ನೋಡಲು ಸುಂದರವಾಗಿರುವದರಿಂದ ಹೆಚ್ಚಾಗಿ ಪಿಓಪಿ ಗಣೇಶ ಮೂರ್ತಿ ಕೇಳುತ್ತಾರೆ. ಅದನ್ನೇ ಖರೀದಿಸುತ್ತಾರೆ.

ಮಣ್ಣಿನ ಕೊರತೆ : ಈ ಬಾರಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಲು ಜಿಲ್ಲೆಯಲ್ಲಿ ಎಲ್ಲಿ ಹುಡುಕಿದರು ಮಣ್ಣು ಸಿಗುತ್ತಿಲ್ಲ, ಅಲ್ಲದೇ ಈ ಬಾರಿ ವಾತಾವರಣ ಕೂಡಾ ಮಣ್ಣಿನ ಗಣೇಶ ಮೂರ್ತಿ ತಯಾರಿಸಲು ಅನಾನುಕೂಲವಾಗಿದೆ ಎಂದು ಗಣೇಶ ಮೂರ್ತಿ ತಯಾರಕರು ಅಳಲು ತೋಡಿಕೊಂಡಿದ್ದಾರೆ.

ವಿಜಯಪುರ ನಗರದಲ್ಲಿ 20 ಕ್ಕೂ ಹೆಚ್ಚು ಮನೆತನಗಳು ಗಣೇಶ ಮೂರ್ತಿ ತಯಾರಕರು ಹಾಗೂ 80 ಕ್ಕೂ ಹೆಚ್ಚು ಮೂರ್ತಿ ಮಾರಾಟಗಾರರಿದ್ದಾರೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಮೂರ್ತಿ ತಯಾರಿಸಲು ಮಣ್ಣಿನ ವ್ಯವಸ್ಥೆ ಮಾಡಿಸಿ, ವಿಶಾಲವಾದ ಆವರಣ ವ್ಯವಸ್ಥೆ ಮಾಡಿದರೆ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಲು ನಮ್ಮದೇನೂ ತಕರಾರಿಲ್ಲ.

ಆದರೆ, ನಮ್ಮ ಮನವಿಗೆ ಸ್ಪಂದಿಸದೆ ಪಿಒಪಿ ಬ್ಯಾನ್ ಎಂದು ಆದೇಶ ಹೊರಡಿಸುವ ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಎರಡು ತಿಂಗಳ ಮುಂಚೆ ಗಣಪತಿ ಮೂರ್ತಿ ತಯಾರಿಸಲು ಪ್ರಾರಂಭಿಸಿದರು ಕೂಡ ಲಕ್ಷ ಸಂಖ್ಯೆಯಲ್ಲಿ ಗಣೇಶ ಮೂರ್ತಿ ತಯಾರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರು.

ಮಣ್ಣಿನ ಗಣೇಶ ಮೂರ್ತಿ ಪರಿಸರ ಸ್ನೇಹಿ ನಿಜ. ನಮಗೂ ಪರಿಸರದ ಮೇಲೆ ಕಾಳಜಿ ಇದೆ. ಮಣ್ಣಿನ ಗಣೇಶ ಮೂರ್ತಿ ಮುಖ್ಯ ಸಮಸ್ಯೆ ಎಂದರೆ ಬಹಳ ನಾಜೂಕು ಅಲ್ಲದೆ ಸದ್ಯದ ವಾತಾವರಣದಲ್ಲಿ ಮಣ್ಣು ಹಸಿಯಾಗಿಯೇ ಉಳಿಯುವುದರಿಂದ ಪ್ರತಿಷ್ಠಾಪನೆ ಮಾಡುವಾಗ ಏನಾದ್ರೂ ಮುಕ್ಕವಾದರೆ ನಮ್ಮ ಮನೆಗೆ ಕೇಡು ಎಂಬ ಭಾವನೆ ಭಕ್ತರಲ್ಲಿ ಮನೆ ಮಾಡಿದೆ. ಹೀಗಾಗಿ ನೆರೆ ರಾಜ್ಯ ಮಹಾರಾಷ್ಟ್ರದ ರೀತಿಯಲ್ಲಿ ಇಲ್ಲಿ ಕೂಡ ಪಿಓಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಿ. ಗಣೇಶ ಮೂರ್ತಿ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ಪರವಾನಗಿ ರದ್ದು: ಬಿಬಿಎಂಪಿ

ABOUT THE AUTHOR

...view details