ಕರ್ನಾಟಕ

karnataka

ನಾಳೆ ತಂಗಡಗಿಗೆ ಸಿಎಂ ಬೊಮ್ಮಾಯಿ ಭೇಟಿ : ಭಾರಿ ಪೊಲೀಸ್ ಬಂದೋಬಸ್ತ್

By

Published : Jan 31, 2023, 9:07 PM IST

ನಾಳೆ ತಂಗಡಗಿಗೆ ಸಿಎಂ ಬೊಮ್ಮಾಯಿ ಭೇಟಿ - ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ - ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭ - ಹಡಪದ ಸಮಾಜದ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಸಿಎಂ.

cm-will-visit-tangadagi-tomorrow
ನಾಳೆ ತಂಗಡಗಿಗೆ ಸಿಎಂ ಬೊಮ್ಮಾಯಿ ಭೇಟಿ

ಮುದ್ದೇಬಿಹಾಳ(ವಿಜಯಪುರ): ತಂಗಡಗಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಥಮ ಬಾರಿಗೆ ಆಗಮಿಸುತ್ತಿದ್ದು, ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ಹಡಪದ ಸಮಾಜದ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ ಫೆ.1 ರಂದು ಮದ್ಯಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಹೇಳಿದರು.

ತಾಲೂಕಿನ ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಆವರಣದಲ್ಲಿ ಸಿಎಂ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಅವರು ಮಾತನಾಡಿದರು. ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯದಲ್ಲಿರುವ ಅಂದಾಜು 70ಸಾವಿರಕ್ಕೂ ಹೆಚ್ಚು ಜನ ಜನಜಾಗೃತಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕ್ಷೇತ್ರದ ಪೂಜ್ಯರಾದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಆಗಮನದ ಹಿನ್ನೆಲೆಯಲ್ಲಿ ಆಗಮಿಸುವ ಗಣ್ಯಾತಿ ಗಣ್ಯರಿಗೆ ವಸತಿ, ಭದ್ರತೆಯ ಉಸ್ತುವಾರಿಯನ್ನು ಪೊಲೀಸರು ವಹಿಸಿದ್ದಾರೆ ಎಂದರು. ಶ್ರೀಮಠದ ಕಾರ್ಯದರ್ಶಿ ಸಿ.ಎಫ್.ನಾವಿ ಮಾತನಾಡಿ, ಈಗಾಗಲೇ ಶೇ.80ರಷ್ಟು ಸಿದ್ಧತೆ ಪೂರ್ಣಗೊಂಡಿವೆ. ರಾಜ್ಯದ ಮೂಲೆ ಮೂಲೆಗಳಿಂದ ಹಡಪದ ಸಮಾಜದ ಬಾಂಧವರು ಆಗಮಿಸುವಂತೆ ಕರೆ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಡಪದ ಸಮಾಜದ ಪದಾಧಿಕಾರಿಗಳು ಇದ್ದರು.

400ಕ್ಕೂ ಹೆಚ್ಚು ಪೊಲೀಸ್ ಭದ್ರತೆ: ತಂಗಡಗಿಗೆ ಸಿಎಂ ಆಗಮನದ ಕಾರ್ಯಕ್ರಮಕ್ಕೆ ಒಟ್ಟು 400ಕ್ಕೂ ಹೆಚ್ಚು ಪೊಲೀಸರ ಭದ್ರತೆಯನ್ನು ಒದಗಿಸಲಾಗಿದೆ. ಒಟ್ಟು 10 ಸೆಕ್ಟರ್‌ಗಳನ್ನು ಮಾಡಲಾಗಿದ್ದು ಅದಕ್ಕೆಂದೇ ಒಂದೊಂದು ತಂಡ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ನಾಲ್ವರು ಡಿಎಸ್‌ಪಿ, 9 ಸಿಪಿಐ, 24 ಪಿಎಸೈ, 28 ಎಎಸ್‌ಐ, 314 ಪೊಲೀಸ್ ಸಿಬ್ಬಂದಿ, ಆಯ್‌ಆರ್‌ಬಿ, ಡಿಎಆರ್ ಎರಡು ವಾಹನಗಳು ಇರಲಿವೆ. ಬಾಗಲಕೋಟೆಯಿಂದ ಬೆರಳಚ್ಚು ಹಾಗೂ ಶ್ವಾನದಳ ತಂಡ ಸ್ಥಳದ ಪರಿಶೀಲನೆ ಮಾಡಿದ್ದಾರೆ. 100 ಬಸ್ ನಿಲುಗಡೆ ವ್ಯವಸ್ಥೆಯನ್ನು ಪೀಠದ ಎದುರಿಗೆ ಇರುವ ಸ್ಥಳದಲ್ಲಿ ಮಾಡಿದ್ದು ಅಳ್ಳೊಳ್ಳಿ ಎಂಬುವರ 10 ಎಕರೆ ಪ್ಲಾಟ್‌ನ ಖಾಲಿ ಜಾಗದಲ್ಲಿ ಬೈಕ್, ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಹೊಸ ಹೆಲಿಪ್ಯಾಡ್ ನಿರ್ಮಾಣ: ತಂಗಡಗಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಈಗಾಗಲೇ ಪಿಡಬ್ಲ್ಯೂಡಿ ಇಲಾಖೆಯಿಂದ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದ ಸ್ಥಳ ಹೆಲಿಪ್ಯಾಡ್‌ನಿಂದ ಒಂದು ಕಿ.ಮೀ ಅಂತರ ಇದ್ದು ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹೆಲಿಪ್ಯಾಡ್‌ನ್ನು ಈಗಾಗಲೇ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಡಾ.ಎಚ್.ಡಿ.ಆನಂದಕುಮಾರ್ ಪರಿಶೀಲನೆ ನಡೆಸಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯ ಎಇಇ ಆರ್.ಎಂ.ಹುಂಡೇಕಾರ್, ಜೆಇ ಸಂದೀಪ ಕೂಡ್ಲೂರು ಹೆಲಿಪ್ಯಾಡ್ ನಿರ್ಮಾಣದ ಸ್ಥಳದಲ್ಲಿಯೇ ಇದ್ದು ಉಸ್ತುವಾರಿ ವಹಿಸಿದ್ದರೆ. ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಪ್ರಭಾರ ಇಓ ಜೆ.ಪಿ.ಶೆಟ್ಟಿ ಅವರು ತಮ್ಮ ಇಲಾಖೆಯ ಸಮನ್ವಯದೊಂದಿಗೆ ಕಾರ್ಯಕ್ರಮದ ಸಿದ್ಧತೆಗೆ ಸಿಬ್ಬಂದಿಯನ್ನು ತೊಡಗಿಸಿದ್ದಾರೆ.

ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸಭಾಭವನ ಹಾಗೂ ಮೂರು ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ಕಟ್ಟಡಗಳ ಅಡಿಗಲ್ಲು ಸಮಾರಂಭ, ಹಡಪದ ಸಮಾಜದ ಜನಜಾಗೃತಿ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಬುಧವಾರ ಚಾಲನೆ ನೀಡಲು ಆಗಮಿಸಲಿದ್ದಾರೆ.

ಇದನ್ನೂ ಓದಿ:ಇನ್ನೊಂದು ವಾರದಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಮಾಜಿ ಸಿಎಂ ಕುಮಾರಸ್ವಾಮಿ

ABOUT THE AUTHOR

...view details