ಕರ್ನಾಟಕ

karnataka

ಸಚಿವ ಮಾಧುಸ್ವಾಮಿ ಹೇಳಿಕೆಗೆ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಹರ್ಷ ತಿರುಗೇಟು

By

Published : Jan 26, 2023, 9:01 AM IST

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಚಿಕ್ಕನಾಯಕನಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಹರ್ಷ ತಿರುಗೇಟು ಕೊಟ್ಟರು.

okkaligara Sangh President Sriharsha
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಹರ್ಷ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಹರ್ಷ

ತುಮಕೂರು: ದೇವೇಗೌಡರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ದೋಚಲು ಶುರು ಮಾಡಿದ್ದಾರೆಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಚಿಕ್ಕನಾಯಕನಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಹರ್ಷ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಯಾಕೆ ಚುನಾವಣೆಗೆ ನಿಂತಾಗ ಭಿಕ್ಷೆ ಎತ್ತಿದ್ದು? ಎಂದು ಸಚಿವರನ್ನು ಕೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

"ದೇವೇಗೌಡರು ಕಂಟ್ರಾಕ್ಟರ್ ಆಗಿ ಕೆಲಸ ಶುರು ಮಾಡಿದಾಗ ಮಾಧುಸ್ವಾಮಿಗೆ ಚಡ್ಡಿ ಹಾಕಿಕೊಳ್ಳಲೂ ಬರ್ತಿರಲಿಲ್ಲ. ಇವತ್ತು ದೇವೇಗೌಡರ ಕುಟುಂಬದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಪದೇ ಪದೇ ಒಕ್ಕಲಿಗರನ್ನು ಕೆಣಕುವ ಕೆಲಸ ಮಾಡುತ್ತಿದ್ದೀರಾ. ತಾಲೂಕಿನಲ್ಲಿ ಯಾರೂ ನಿಮಗೆ ಎದುರು ಮಾತನಾಡುವುದಿಲ್ಲ ಎಂದು ಅಂದುಕೊಂಡಿದ್ದೀರಾ?. ಇನ್ನೊಂದು ಬಾರಿ ಈ ರೀತಿ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದ್ರೆ ತಾಲೂಕಿನ ಒಕ್ಕಲಿಗರು ನಿಮಗೆ ತಕ್ಕ ಪಾಠ ಕಲಿಸ್ಬೇಕಾಗುತ್ತೆ, ಎಚ್ಚರಿಕೆಯಿಂದ ಇರಿ" ಎಂದು ವಾಗ್ದಾಳಿ ನಡೆಸಿದರು.

"ದೇವೇಗೌಡರು ನೀವು ಹೇಳಿದ ಹಾಗೆ ಪೂಜಾರಿಯ ಬಳಿ 50 ರೂಪಾಯಿ ಪಡೆದು ಪ್ರಧಾನಿಯಾಗಿದ್ದಾರೆ. ಆದರೆ, ಯಾರನ್ನೂ ಹಾಳು ಮಾಡಿಲ್ಲ. ಅವರ ಮಕ್ಕಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. ಕೆಲವರ ಸಹಾಯ ಪಡೆದು ಚುನಾವಣೆಯಲ್ಲಿ ಗೆದ್ದ ನೀವು, ಅವರ ಜಮೀನನ್ನು ವಶಕ್ಕೆ ಪಡೆದು ಅವರ ಮನೆಯನ್ನೇ ಹಾಳು ಮಾಡಿದ್ದೀರಾ. ಮಗನಿಂದ ಬೇನಾಮಿ ಆಸ್ತಿ ಮಾಡ್ತಿರೋದು ಇಡೀ ತಾಲೂಕಿಗೆ ಗೊತ್ತು. ಸಬ್ ರಿಜಿಸ್ಟರ್ ಕಚೇರಿಯನ್ನು ನಿಮ್ಮ ಮಗ ಮನೆಗೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ. ವಾರಕ್ಕೆರಡು ಬೇನಾಮಿ ಜಮೀನುಗಳು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿಯಾಗುತ್ತದೆ. ಇದೆಲ್ಲವನ್ನು ಸಾಕ್ಷಿ ಸಮೇತ ತಾಲೂಕಿನ ಜನಗಳ ಮುಂದೆ ಇಡಬೇಕಾಗುತ್ತೆ" ಎಂದು ಎಚ್ಚರಿಕೆ ನೀಡಿದರು.

ಜೆ.ಸಿ.ಮಾಧುಸ್ವಾಮಿ ಹೇಳಿದ್ದೇನು?: ಕಳೆದ ಮೂರು ದಿನಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜೆ.ಸಿ.ಮಾಧುಸ್ವಾಮಿ, ಹೆಚ್. ಡಿ.ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. "ನಮ್ಮಪ್ಪ, ನಮ್ಮಜ್ಜ ಚೆನ್ನಾಗಿ ಬಾಳಿದವರು. ನನಗೇನೂ ಆಸ್ತಿ ಕೊರತೆ ಇರಲಿಲ್ಲ. ಇವರಪ್ಪನಿಗೆ ಹೊಳೆನರಸೀಪುರದಲ್ಲಿ 50 ರೂಪಾಯಿ ಕೊಟ್ಟು ಅಯ್ನೋರು ಕಾಂಟ್ರಾಕ್ಟ್‌ ಶುರು ಮಾಡಿಸಿದ್ದರು. ನನಗೆ ಆ ಸ್ಥಿತಿ ಬಂದಿಲ್ಲ. ಇವರ ಹಾಗೆ ದೋಚಿದ್ದು, ಬಾಚಿದ್ದು ನಂಬಿಕೊಂಡು ನಾನು ಬದುಕಲ್ಲ. ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ದೋಚಲು ಶುರು ಮಾಡಿದ್ದಾರೆ. ದೇವೇಗೌಡರು ತುಮಕೂರಿಗೆ ಹೇಮಾವತಿ ನೀರನ್ನು ಕೊಡದೆ ಮೋಸ ಮಾಡಿದವರು. ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೆಯ ಪೇಪರ್ ಕಟಿಂಗ್ ತೋರಿಸಿದ್ದೆ. ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು. ಇಷ್ಟೆಲ್ಲಾ ಮಾಡಿ ಕುಮಾರಸ್ವಾಮಿಯವರು ಚಿಕ್ಕನಾಯಕನಹಳ್ಳಿಗೆ ಪ್ರವಾಸ ಕೈಗೊಂಡಿದ್ದಾರೆ" ಎಂದು ಹರಿಹಾಯ್ದಿದ್ದರು.

ಇದನ್ನೂ ಓದಿ:'ದೋಚಿದ್ದು, ಬಾಚಿದ್ದು ನಂಬಿ ನಾನು ಬದುಕಲ್ಲ': ಹೆಚ್‌ಡಿಕೆ ವಿರುದ್ಧ ಜೆ.ಸಿ.ಮಾಧುಸ್ವಾಮಿ ವಾಕ್ಸಮರ

ABOUT THE AUTHOR

...view details