ಕರ್ನಾಟಕ

karnataka

ತುಮಕೂರು: ಕೆಎಸ್ಆರ್​​ಟಿಸಿ ಬಸ್ - ಆಟೋ ಮುಖಾಮುಖಿ ಡಿಕ್ಕಿ.. ಓರ್ವ ಮಹಿಳೆ ಸಾವು, 9 ಮಹಿಳೆಯರಿಗೆ ಗಾಯ

By

Published : Aug 8, 2023, 4:35 PM IST

Updated : Aug 8, 2023, 5:00 PM IST

ಕೆಎಸ್ಆರ್​​ಟಿಸಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ, 9 ಮಂದಿ ಮಹಿಳೆಯರು ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ksrtc-bus-and-auto-riksha-accident
ಕೆಎಸ್ಆರ್​​ಟಿಸಿ ಬಸ್ - ಆಟೋ ಮುಖಾಮುಖಿ ಡಿಕ್ಕಿ : ಓರ್ವ ಮಹಿಳೆ ಸಾವು, 9 ಮಹಿಳೆಯರಿಗೆ ಗಾಯ

ತುಮಕೂರು : ಕೆಎಸ್ಆರ್​ಟಿಸಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, 9 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಬಳಿ ಇಂದು ನಡೆದಿದೆ. ಮೃತರನ್ನು ಜೋಗೇನಹಳ್ಳಿ ಗ್ರಾಮದ ಲಕ್ಷ್ಮೀದೇವಿ (33) ಎಂದು ಗುರುತಿಸಲಾಗಿದೆ.

ಕೊಡಿಗೇನಹಳ್ಳಿ ಸಮೀಪವಿರುವ ಜಯಮಂಗಲಿ ಸೇತುವೆ ಬಳಿ ಕೆಎಸ್​ಆರ್​ಟಿಸಿ ಬಸ್​ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದೆ. ಆಟೋದಲ್ಲಿ ಗೌರಿಬಿದನೂರುನಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಮಹಿಳೆಯರು ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 9 ಮಂದಿ ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಪ್ರಕರಣ - ಆಟೋ ಮತ್ತು ಕಾರು ನಡುವೆ ಅಪಘಾತ .. ಓರ್ವ ಸಾವು: ಮತ್ತೊಂದೆಡೆ ಆಟೋ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಆಟೋದಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿ, ಇನ್ನೋರ್ವ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಿ ಎಸ್ ಪುರ ಸಮೀಪದ ಹರಿವೇಸಂದ್ರ ಬಳಿ ಇಂದು ನಡೆದಿದೆ. ಮೃತರನ್ನು ಕಲ್ಲೂರು ನಾಗರಾಜ್ (60) ಎಂದು ಗುರುತಿಸಲಾಗಿದೆ.

ಕೆ ಜಿ ಟೆಂಪಲ್ ಗ್ರಾಮದಲ್ಲಿ ಸಂತೆಯ ಹಿನ್ನೆಲೆ ನಾಗರಾಜ್​ ದಂಪತಿ ಆಟೋದಲ್ಲಿ ವ್ಯಾಪಾರಕ್ಕೆಂದು ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಸಿ ಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹ.. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ : ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದ ನಜರಾಬಾದ್​ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಅಫೀಜಾ ಭಾನು (32) ಎಂದು ಗುರುತಿಸಲಾಗಿದೆ. ಮೃತಳ ಕುಟುಂಬಸ್ಥರು ಪತಿಯ ಮನೆಯವರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಪತಿ ಅಬ್ದುಲ್ ಸತ್ತಾರ್ ಶೇಖ್ ವಿರುದ್ಧ ಮೃತಳ ಕುಟುಂಬಸ್ಥರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಕಳೆದ 12 ವರ್ಷದ ಹಿಂದೆ ಅಫೀಜಾಬಾನು ಮತ್ತು ಅಬ್ದುಲ್ ಸತ್ತಾರ್ ಶೇಖ್ ವಿವಾಹವಾಗಿದ್ದರು. ವರದಕ್ಷಿಣೆ ಕಿರುಕುಳ ಹಿನ್ನೆಲೆ ಗಂಡನ ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಿನ್ನೆ ರಾತ್ರಿ ಅಫೀಜಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ. ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಪತ್ನಿಗೆ ಕಳ್ಳಿ, ಕಳ್ಳಿ ಎಂದು ಹೀಯಾಳಿಸುತ್ತಿದ್ದ ಪರಿಚಿತರು.. ಅವಮಾನ ಸಹಿಸಲಾಗದೇ ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

Last Updated : Aug 8, 2023, 5:00 PM IST

ABOUT THE AUTHOR

...view details