ಕರ್ನಾಟಕ

karnataka

23 ಅಡಿ ಎತ್ತರದ ಅಪ್ಪು ಪ್ರತಿಮೆ: ಮಲೆನಾಡ ಕಲಾವಿದನ ಶಿಲ್ಪ ಬಳ್ಳಾರಿಯಲ್ಲಿ ಲೋಕಾರ್ಪಣೆ

By

Published : Jan 17, 2023, 12:57 PM IST

Updated : Jan 17, 2023, 1:56 PM IST

ರಾಜ್ಯದಲ್ಲೇ ಅತಿ ಎತ್ತರದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ಶಿವಮೊಗ್ಗದ ಕಲಾವಿದರು ತಯಾರಿಸಿದ್ದಾರೆ. ಬಳ್ಳಾರಿಯ ಅಪ್ಪು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಚಿವ ಶ್ರೀರಾಮುಲು ಪ್ರತಿಮೆ ನಿರ್ಮಿಸಲು ಸೂಚಿಸಿದ್ದರು.

Puneeth Rajkumar statue
ಅಪ್ಪು ಪ್ರತಿಮೆ

ಕಲಾವಿದನ ಕೈಯಲ್ಲಿ ಅರಳಿದ ಪುನೀತ್ ರಾಜ್​ಕುಮಾರ್

ಶಿವಮೊಗ್ಗ:ದಿ.ಪುನೀತ್ ರಾಜ್​ಕುಮಾರ್ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುನ ನಟ. ಅವರ ನೆನಪಿಗಾಗಿ ಮಲೆನಾಡ ಕಲಾವಿದನ ಕೈಯಲ್ಲಿ ಪುತ್ಥಳಿ ರೂಪುಗೊಂಡಿದೆ. ಕಲಾವಿದ ಜೀವನ್ ಎಂಬುವವರು ತಮ್ಮ ಕಲಾ ನೈಪುಣ್ಯತೆಯಲ್ಲಿ 23 ಅಡಿ ಎತ್ತರದ ಪವರ್​​ ಸ್ಟಾರ್ ಪ್ರತಿಮೆಯನ್ನು ಆಕರ್ಷಕವಾಗಿ ನಿರ್ಮಿಸಿದ್ದಾರೆ. ಇದು ಫೈಬರ್ ಹಾಗೂ ಕಬ್ಬಿಣ ಬಳಸಿ ನಿರ್ಮಾಣ ಮಾಡಲಾದ ಪುತ್ಥಳಿ.

ರಾಜ್ಯದಲ್ಲೇ ಅತಿ ಎತ್ತರವಾದ ಪುತ್ಥಳಿ: ಅಪ್ಪು ತಮ್ಮ ನಗು ಹಾಗೂ ನಟನೆಯ ಮೂಲಕ ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಇಂತಹ ನಟನ ನೆನಪು ಶಾಶ್ವತವಾಗಿ ಉಳಿಯಬೇಕೆಂದು ಹಲವು ಗ್ರಾಮಗಳಲ್ಲಿ ಅವರ ಶಕ್ತಾನುಸಾರ ಸಣ್ಣದಾಗಿ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಆದರೆ ಅಪ್ಪು ಅವರ ನೆನಪು ಸದಾ ಇರಬೇಕೆಂದು ಬಳ್ಳಾರಿ ಅಪ್ಪು ಅಭಿಮಾನಿಗಳ ಬೇಡಿಕೆಯಂತೆ ಸಚಿವ ಬಿ.ಶ್ರೀರಾಮುಲು ಅವರುರಾಜ್ಯದಲ್ಲೇ ಅತಿ ಎತ್ತರವಾದ ಪುತ್ಥಳಿ ನಿರ್ಮಾಣ ಮಾಡಿಸಿದ್ದಾರೆ.

3 ಟನ್ ತೂಕ: ಕಲಾವಿದ ಜೀವನ್ ಅವರ ಕೈಯಲ್ಲಿ ಅರಳಿರುವ ಅಪ್ಪುವಿನ 23 ಅಡಿ ಎತ್ತರದ ಪುತ್ಥಳಿ 3 ಟನ್ ತೂಕವಿದೆ. ಸುಮಾರು 20 ಜನ ಕಲಾವಿದರು ಹಗಲಿರುಳು ಕೆಲಸ ಮಾಡಿ ಕೇವಲ ಮೂರು ತಿಂಗಳಲ್ಲಿ ಪುತ್ಥಳಿ‌ ನಿರ್ಮಿಸಿದ್ದಾರೆ. ಮೊದಲು ಸಿಮೆಂಟ್​​ನಲ್ಲಿ ತಯಾರು ಮಾಡಿ ನಂತರ ಅದನ್ನು ಅಚ್ಚು ಹಾಕಿ‌ಕೊಂಡು ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಮಲೆನಾಡಿನಿಂದ ಬಯಲು ಸೀಮೆಗೆ ಅಪ್ಪು:ಕಲಾವಿದ ಜೀವನ್ ಬಾಲ್ಯದಿಂದಲೂ ಕಲೆಯ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು. ಜೀವನ್ ಅವರ ಕಲೆಯನ್ನು ಗುರುತಿಸಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅಪ್ಪು ಪುತ್ಥಳಿ ನಿರ್ಮಾಣದ ಜವಾಬ್ದಾರಿ ನೀಡಿದ್ದರು. ಸಚಿವರ ಆಶಯದಂತೆ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪುತ್ಥಳಿಯನ್ನು ಕ್ರೇನ್ ಮೂಲಕ ಲಾರಿಯಲ್ಲಿ ಇಟ್ಟು ಬಳ್ಳಾರಿಗೆ ರವಾನಿಸಲಾಗುತ್ತದೆ.

ಅಪ್ಪು ಪ್ರತಿಮೆ

ಬಳ್ಳಾರಿ ಉತ್ಸವದಲ್ಲಿ ಉದ್ಘಾಟನೆ: ಅಪ್ಪು ಅವರ ಪುತ್ಥಳಿಯನ್ನು ಜ.21 ರಂದು ನಡೆಯುವ ಬಳ್ಳಾರಿ ಉತ್ಸವದಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳು ನಡೆದಿವೆ. ಸಾಮಾನ್ಯವಾಗಿ ಇಂತಹ ಪುತ್ಥಳಿ ನಿರ್ಮಾಣಕ್ಕೆ ಕನಿಷ್ಠ 6 ತಿಂಗಳು ಬೇಕು. ಆದರೆ ಸಚಿವರ ಸೂಚನೆಯ ಮೇರೆಗೆ ಕೇವಲ 3 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಇದನ್ಣೂ ಓದಿ:ಬಳ್ಳಾರಿ: ಕೃಷ್ಣ ಶಿಲೆಯಲ್ಲಿ ನಿರ್ಮಿಸಿದ ಅಪ್ಪು ಪ್ರತಿಮೆ ಅನಾವರಣ

ಸ್ಥಳೀಯ ಕಲಾವಿದರನ್ನು ಗುರುತಿಸಿ ಕೆಲಸ ನೀಡಿದ ಸಚಿವ ಶ್ರೀರಾಮುಲು ಅವರಿಗೆ ಕಲಾವಿದ ಜೀವನ್ ಅಭಿನಂದನೆ ಸಲ್ಲಿಸಿದ್ದಾರೆ. ಪುತ್ಥಳಿ ಉದ್ಘಾಟನೆಗೆ ಡಾ.ರಾಜ್​​ ಕುಮಾರ್ ಕುಟುಂಬದವರು ಆಗಮಿಸುವ ಸಾಧ್ಯತೆಯಿದೆ. ಇವರ ಸಮ್ಮುಖದಲ್ಲಿ ಸಿಎಂ ಉದ್ಘಾಟನೆ ಮಾಡಲಿರುವುದು ನನಗೆ ಸಂತಸ ತಂದಿದೆ ಎನ್ನುತ್ತಾರೆ ಕಲಾವಿದ ಜೀವನ್.

ಅಪ್ಪು ಪ್ರತಿಮೆ

ನಮ್ಮ ಶಿವಮೊಗ್ಗದ ಯುವ ಕಲಾವಿದ ಜೀವನ್ ಸಾಧನೆ ಮೆಚ್ಚುವಂಥದ್ದು. ಇವರು ಇನ್ನಷ್ಟು ಸಾಧನೆ ಮಾಡಲಿ. ನಮ್ಮ ಸ್ಥಳೀಯ ಕಲಾವಿದರ ಕಲೆ ಬಳ್ಳಾರಿಯ ಮೂಲಕ ಪ್ರಪಂಚಕ್ಕೆ ತಿಳಿಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಶಿವಮೊಗ್ಗದ ನಿವಾಸಿ ನಂದನ್ ಹೇಳಿದರು.

ಇದನ್ನೂ ಓದಿ:ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪು ಶಿಲೆಯಲ್ಲಿ ಅಪ್ಪು ಪುತ್ಥಳಿ ನಿರ್ಮಾಣ.. ದಾವಣಗೆರೆಯಲ್ಲಿ ಪ್ರತಿಮೆ ಅನಾವರಣ

Last Updated : Jan 17, 2023, 1:56 PM IST

ABOUT THE AUTHOR

...view details