ರಾಮನಗರ : ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕ್ಷೇತ್ರದ ಪವಾಡ ಬಸಪ್ಪನವರ ಮೂರನೇ ವರ್ಷದ ಹುಟ್ಟುಹಬ್ಬ ಹಾಗೂ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತಸಮೂಹ ಹರಿದುಬಂದಿತ್ತು.
ಈ ಮೂಲಕ ಸಾವಿರಾರು ಮಂದಿ ಭಕ್ತಾಧಿಗಳು ಅದ್ದೂರಿ ಲಕ್ಷ ದೀಪೋತ್ಸವ ಕಣ್ತುಂಬಿಕೊಂಡರು. ಲಕ್ಷ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಮುಂಜಾನೆಯಿಂದಲೇ ತಾಯಿಯ ಸನ್ನಿದ್ಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಚಾಮುಂಡೇಶ್ವರಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ತಾಯಿಯ ಮೆರವಣಿಗೆ, ಪವಾಡ ಬಸವಪ್ಪನ ಗದ್ದುಗೆಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಕ್ಷೇತ್ರದ ಪವಾಡ ಬಸವಪ್ಪನವರ ಹುಟ್ಟುಹಬ್ಬ ಆಚರಿಸಲಾಯಿತು. ಭಕ್ತಾಧಿಗಳು ಬಸವಪ್ಪನ ಮುಂಭಾಗ 59 ಕೆ.ಜಿ ತೂಕದ ಕೇಕ್ ಕತ್ತರಿಸಿ ಸಂಭ್ರಮಪಟ್ಟರು. ತದನಂತರ, ಬಸವಪ್ಪನಿಗೆ ಹೂವಿನ ಅಭಿಷೇಕ ಮಾಡಿ ಶುಭಾಶಯ ಕೋರಿದರು.
ದೀಪೋತ್ಸವ ಕಾರ್ಯಕ್ರಮಕ್ಕೆ ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಹಾಗೂ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀ ಚಾಲನೆ ನೀಡಿದರು. ಸಾವಿರಾರು ಭಕ್ತಾಧಿಗಳು ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು. ದೇಗುಲ ಆವರಣದಲ್ಲಿ ಇಟ್ಟಿದ್ದ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಹಚ್ಚುವ ಮೂಲಕ ಭಕ್ತಾಧಿಗಳು ತಾಯಿಯ ಕೃಪೆಗೆ ಪಾತ್ರರಾದರು.