ಮೈಸೂರು: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಸಚಿವೆ ಕು ಶೋಭಾ ಕರಂದ್ಲಾಜೆ ಹೇಳಿದರು.
ನಗರದ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ನಡೆದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯ್ಕೆಯಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಸೃಷ್ಠಿಸಲು ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಕಾರಣಗಳಿಂದ ಇನ್ನಷ್ಟು ಉದ್ಯೋಗಗಳನ್ನು ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ತುಂಬಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಲ್ಯಾಣ ರಾಜ್ಯ ಸಚಿವೆ ಕು ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆ ನೀಡಿದೆ. ಬಿ ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಯೋಜನೆಗಳು ಶೇ. 95ರಷ್ಟು ಹಳ್ಳಿ, ಹಳ್ಳಿಗೆ ತಲುಪಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನು ಸ್ವೀಕರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.
ವಿಧಾನ ಸಭೆಗೆ ಆಯ್ಕೆಯಾಗಿರುವ ಎಲ್ಲರಿಗೂ ಶುಭಾಶಯಗಳು. ಕಾಂಗ್ರೆಸ್ ಚುನಾವಣಾ ಪೂರ್ವ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಗ್ಯಾರಂಟಿಯಾಗಿ ಈಡೇರಿಸಲಿ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಅವರ ಆಂತರಿಕ ವಿಚಾರ. ಆ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡಲಿ ಎಂದು ತಿಳಿಸಿದರು.
ನೇಮಕಾತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಇದನ್ನೂ ಓದಿ:ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಗ್ಗಂಟು; ಸಿದ್ದರಾಮಯ್ಯ ಪರ ದೇವರ ಮೊರೆ ಹೋದ ಕುರುಬ ಸಮುದಾಯ
ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಸೇವೆಗೆ ಆಯ್ಕೆಯಾದ 71 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚ್ಯುವಲ್ ಮೂಲಕ ಅಭಿನಂದಿಸಿದರು. ರೈಲ್ವೆ ಇಲಾಖೆಗೆ ಆಯ್ಕೆಯಾದ ಪ್ರಿನ್ಸ್ ಕುಮಾರ್, ಭದ್ರಿಲಾಲ್, ದಾಂದಿನ್ ಸುಧೀರ್, ಮೋಹಿತ್ ಪಚೌರಿ, ಅಂಜಲಿ ನೇಗಿ ಹಾಗೂ ಅಂಚೆ ಇಲಾಖೆಗೆ ನೇಮಕಗೊಂಡ ಎಸ್. ರಕ್ಷಿತ್, ಎಂ. ವೀಣಾ, ತೇಜಸ್ವಿನಿ, ಸೌಂದರ್ಯ, ಕೆ. ಪಿ ಪ್ರಜ್ವಲ್ ಗೌಡ ಸೇರಿದಂತೆ ಇತರರಿಗೆ ಸಾಂಪ್ರದಾಯಿಕವಾಗಿ ವೇದಿಕೆ ಮೇಲೆ ನೇಮಕಾತಿ ಪತ್ರ ವಿತರಿಸಿದರು.
ಕಾಂಗ್ರೆಸ್ ಗ್ಯಾರಂಟಿ ಪತ್ರದಲ್ಲಿ ನಿರೋದ್ಯೋಗ ಭತ್ಯೆ..ರಾಜ್ಯದಲ್ಲಿ ಮೇ 13 ರಂದು ಪ್ರಕಟವಾದ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲೇ ತಾವು ನೀಡಿರುವ ಐದು ಭರವಸೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದರಲ್ಲಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿದ್ದಾರೆ. ಪದವಿಧರ ನಿರುದ್ಯೋಗಿಗಳಿಗೆ 3000 ರೂಪಾಯಿ, ಡಿಪ್ಲೋಮಾ ಓದಿದವರಿಗೆ 1500 ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಯುವ ಜನತೆಗೆ ಉದ್ಯೋಗ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಕಾಂಗ್ರೆಸ್ ನಾಯಕರು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ನಿರುದ್ಯೋಗ ಭತ್ಯೆ ಘೋಷಿಸಿದ್ದರಿಂದ ಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್.. ಹೊಸ ಸರ್ಕಾರಕ್ಕೆ ಉಚಿತ ಯೋಜನೆಗಳ ಜಾರಿಗೆ ಎದುರಾಗಲಿದೆ ಹತ್ತಾರು ಸವಾಲು