ಕರ್ನಾಟಕ

karnataka

ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ಕು ತಂಡ ರಚನೆ: ಎಡಿಜಿಪಿ ಅಲೋಕ್ ಕುಮಾರ್

By

Published : Jan 10, 2023, 6:08 PM IST

Updated : Jan 10, 2023, 7:04 PM IST

ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ಕು ತಂಡ ರಚನೆ - ಮೈಸೂರಿನಲ್ಲಿ ಎಡಿಜಿಪಿ ಅಲೋಕ್​ ಕುಮಾರ್​ ಹೇಳಿಕೆ - ಶೀಘ್ರವೇ ಆರೋಪಿ ಬಂಧನದ ವಿಶ್ವಾಸ ವ್ಯಕ್ತ ಪಡಿಸಿದ ದೂರುದಾರೆ.

santro ravi case
ಎಡಿಜಿಪಿ ಅಲೋಕ್ ಕುಮಾರ್

ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ

ಮೈಸೂರು: ತಲೆ ಮರೆಸಿಕೊಂಡಿರುವ ಸ್ಯಾಂಟ್ರೋ ರವಿ ಬಂಧನಕ್ಕೆ 3-4 ತಂಡ ರಚನೆ ಮಾಡಿದ್ದು, ಶೀಘ್ರವೇ ಆರೋಪಿಯನ್ನ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇಂದು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರುದಾರೆ ಮತ್ತು ಅವರ ಸಹೋದರಿಯಿಂದ ಮಾಹಿತಿ ಪಡೆದ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

’’ಸ್ಯಾಂಟ್ರೋ ರವಿ ವಿರುದ್ಧ ಕಳೆದ ಎಂಟು ದಿನಗಳ ಹಿಂದೆ ಮೈಸೂರಿನ ವಿಜಯನಗರದಲ್ಲಿ ಅತ್ಯಾಚಾರ ಮತ್ತು ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ. ಸ್ಯಾಂಟ್ರೋ ರವಿ ಬಂಧನಕ್ಕೆ ಮೂರ್ನಾಲ್ಕು ತಂಡ ಕೆಲಸ ಮಾಡುತ್ತಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಶೀಘ್ರವೇ ಆತನನ್ನ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’’ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

’’ಈಗಾಗಲೇ ಸ್ಯಾಂಟ್ರೋ ರವಿ ವಾಸವಿದ್ದ ಬೆಂಗಳೂರಿನ ಆರ್​ಆರ್​ ನಗರದ ಮನೆಯನ್ನ ಪರಿಶೀಲನೆ ಮಾಡಲಾಗಿದ್ದು, ಆರೋಪಿಯ ಎಲ್ಲ ಆಸ್ತಿ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತನ ಎಲ್ಲಾ ಬ್ಯಾಂಕ್ ಅಕೌಂಟ್​ಗಳನ್ನ ಪರಿಶೀಲನೆ ಮಾಡಲಾಗುತ್ತಿದ್ದು, ಮನಿ ಲ್ಯಾಂಡ್​​ರಿಂಗ್​ ಕಾನೂನನ್ನು ಉಲ್ಲಂಘನೆ ಮಾಡಿದ್ದಾನೋ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಮನಿ ಲ್ಯಾಂಡ್ರಿಂಗ್​ ಕಾನೂನು ಉಲ್ಲಂಘನೆ ಆಗಿದ್ದರೆ, ಮನಿ ಲ್ಯಾಂಡ್ರಿಂಗ್​ ಕೇಸ್ ಅನ್ನು ಹಾಕುತ್ತೇವೆ‘‘ ಎಂದು ಎಡಿಜಿಪಿ ಹೇಳಿದ್ದಾರೆ. ’’ಸ್ಯಾಂಟ್ರೋ ರವಿ ಬಳಸುತ್ತಿದ್ದ ಎಲ್ಲಾ ಮೊಬೈಲ್​ಗಳು ಸ್ವಿಚ್ಡ್​​ ​ಆಫ್ ಆಗಿವೆ. ಆತನ ಬಂಧನಕ್ಕೆ ಪೊಲೀಸರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುವುದು‘‘ ಎಂದು ಅಲೋಕ್​ ಕುಮಾರ್​ ಹೇಳಿದ್ದಾರೆ.

ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ :ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಪೊಲೀಸರ ಮೇಲೆ ಯಾವುದೇ ಒತ್ತಡ ಇಲ್ಲ. ಅದೇ ಕಾರಣಕ್ಕೆ ನಾನು ಮೈಸೂರಿಗೆ ಬಂದು ಮಾಹಿತಿ ಪಡೆದಿದ್ದೇನೆ. ಈತನ ಬಂಧನಕ್ಕೆ ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರಿನಲ್ಲಿ ಹುಡುಕಾಟ ಆರಂಭಿಸಿದ್ದು, ಮೊಬೈಲ್ ಸ್ವಿಚ್ಡ್​​ ಆಫ್ ಆಗಿರುವುದರಿಂದ ಆತನ ಪತ್ತೆಗೆ ಸ್ವಲ್ಪ ಕಷ್ಟ ಆಗಿದೆ. ಆದರೂ ಶೀಘ್ರವೇ ಬಂಧಿಸುತ್ತೇವೆ ಎಂದು ಎಡಿಜಿಪಿ ಇದೇ ವೇಳೆ ಸ್ಪಷ್ಟಪಡಿಸಿದರು.

‘‘ಸ್ಯಾಂಟ್ರೋ ರವಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಆತನ ಬ್ಯಾಂಕ್ ಖಾತೆಯನ್ನ ಜಪ್ತಿ ಮಾಡುವ ಬಗ್ಗೆ ಇಂದು ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಸ್ಯಾಂಟ್ರೋ ರವಿ ಎಷ್ಟು ಬ್ಯಾಂಕ್ ಖಾತೆ ಹೊಂದಿದ್ದಾನೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು, ಇದರ ಜೊತೆಗೆ ಆತನ ಆಸ್ತಿಯ ಜಪ್ತಿ ಬಗ್ಗೆಯೂ ಶೀಘ್ರವೇ ನಿರ್ಧಾರ ಮಾಡಲಾಗುವುದು‘‘ ಎಂದು ಇದೇ ಸಂದರ್ಭದಲ್ಲಿ ಅಲೋಕ್ ಕುಮಾರ್ ತಿಳಿಸಿದರು.

ಶೀಘ್ರವೇ ಆರೋಪಿ ಬಂಧನ ದೂರುದಾರೆ ವಿಶ್ವಾಸ : ಅಲೋಕ್ ಕುಮಾರ್​ಗೆ ಸ್ಯಾಂಟ್ರೋ ರವಿ ಬಗ್ಗೆ ಮಾಹಿತಿ ನೀಡಿದ ದೂರುದಾರೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ’’ಎಡಿಜಿಪಿ ಮೈಸೂರಿಗೆ ಬಂದು ವಿಚಾರಣೆ ನಡೆಸಿರುವುದರಿಂದ ನನಗೆ ನ್ಯಾಯ ಸಿಗುವ ಭರವಸೆ ಇದೆ. ವಿಚಾರಣೆ ವೇಳೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸೂಕ್ತ ಉತ್ತರ ಹಾಗೂ ದಾಖಲೆಗಳನ್ನು ನೀಡಿದ್ದೇನೆ. ಆದರೆ, ಪ್ರಕರಣ ದಾಖಲಾಗಿ ಇಷ್ಟು ದಿನಗಳಾದರೂ ಆರೋಪಿ ಬಂಧನ ಆಗಿಲ್ಲ, ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಸ್ಯಾಂಟ್ರೋ ರವಿ ವಕೀಲರಿಗೆ ಸಿಗುತ್ತಿದ್ದಾನೆ. ಆದರೆ, ಪೊಲೀಸರಿಗೆ ಏಕೆ ಸಿಗುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ. ಆದರೂ ಎಡಿಜಿಪಿ ಯವರಿಗೆ ಎಲ್ಲ ಮಾಹಿತಿ ನೀಡಿದ್ದೇನೆ ಶೀಘ್ರವೇ ಸ್ಯಾಂಟ್ರೋ ರವಿಯ ಬಂಧನ ಆಗುವ ವಿಶ್ವಾಸ ಇದೆ‘‘ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ... ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ: ಭಾಸ್ಕರ್ ರಾವ್

ಇದನ್ನೂ ಓದಿ:ಸ್ಯಾಂಟ್ರೋ ರವಿ ಪ್ರಕರಣ.. ನನ್ನ ರೀತಿಯಲ್ಲೇ ಎಷ್ಟೋ ಹುಡುಗಿಯರ ಜೀವನ ಹಾಳು ಮಾಡಿದ್ದಾನೆ: ದೂರುದಾರೆ ಆರೋಪ

Last Updated : Jan 10, 2023, 7:04 PM IST

ABOUT THE AUTHOR

...view details