ಕರ್ನಾಟಕ

karnataka

'ಜಾತಿಗಣತಿ ವರದಿ ಸಲ್ಲಿಕೆಗೆ ವಿರೋಧ ಸಲ್ಲ, ವರದಿ ಒಪ್ಪಿಸಿದ ಬಳಿಕ ಚರ್ಚೆ ನಡೆಯಲಿ': ಮುಖ್ಯಮಂತ್ರಿ ಚಂದ್ರು

By ETV Bharat Karnataka Team

Published : Dec 17, 2023, 7:32 AM IST

ಜಾತಿಗಣತಿ ವರದಿ ಸಲ್ಲಿಕೆಗೆ ಎದುರಾಗುತ್ತಿರುವ ವಿರೋಧ ಸರಿ ಅಲ್ಲ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

mukyamantri chandru
ಮುಖ್ಯಮಂತ್ರಿ ಚಂದ್ರು

'ಜಾತಿಗಣತಿ ವರದಿ ಸಲ್ಲಿಕೆಗೆ ವಿರೋಧ ಸಲ್ಲ, ವರದಿ ಒಪ್ಪಿಸಿದ ಬಳಿಕ ಚರ್ಚೆ ನಡೆಯಲಿ': ಮುಖ್ಯಮಂತ್ರಿ ಚಂದ್ರು

ಮೈಸೂರು:'ಜಾತಿಗಣತಿ ವರದಿ ಸಲ್ಲಿಕೆಗೆ ಎರಡು ಪ್ರಬಲ ಜಾತಿಯ ಮುಖಂಡರು ಹಾಗೂ ಜನಪ್ರತಿನಿಧಿಗಳು ವಿರೋಧಿಸುತ್ತಿರುವುದು ಸರಿಯಲ್ಲ. ವರದಿ ಸಲ್ಲಿಕೆಯಾದ ಬಳಿಕ ಸರಿ, ತಪ್ಪಿನ ಬಗ್ಗೆ ಚರ್ಚೆ ನಡೆಯಲಿ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 1931 ರ ಬಳಿಕ ಜಾತಿ ಗಣತಿ ವರದಿ ಸಲ್ಲಿಕೆಯಾಗಿಲ್ಲ. ಸರ್ಕಾರಗಳು ಮನಸೋಯಿಚ್ಛೆ ರಾಜಕೀಯ ಹಿತಾಸಕ್ತಿಗಾಗಿ ಕೆಲವೇ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಿವೆ. ದಲಿತ, ಹಿಂದುಳಿದ ವರ್ಗದ ಅನೇಕ ಜಾತಿಗಳು ಈ ರೀತಿಯ ಶೋಷಣೆಗೆ ಒಳಗಾಗಿವೆ. ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆಗೆ ಜಾತಿಗಣತಿ ವರದಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ದಬ್ಬಾಳಿಕೆ ಹಾಗೂ ಜೆಡಿಎಸ್​ ಕುಟುಂಬ ರಾಜಕಾರಣಕ್ಕೆ ಬೇಸತ್ತು ಕರ್ನಾಟಕದಲ್ಲಿ ಜನ ಕಾಂಗ್ರೆಸ್‌ನ್ನು ಆರಿಸಿದ್ದಾರೆ. ಕಾಂಗ್ರೆಸ್​ ಶೋಷಿತರ ಧ್ವನಿಯಾಗುವಲ್ಲಿ ವಿಫಲವಾಗಿದೆ. ದೆಹಲಿಯಲ್ಲಿ ಕೇಜ್ರಿವಾಲ್​ ಪರಿಚಯಿಸಿದ ಉಚಿತ ಯೋಜನೆಗಳನ್ನು ಗ್ಯಾರಂಟಿ ಹೆಸರಿನಲ್ಲಿ ಕದ್ದಿದ್ದಾರೆ. ಇದಕ್ಕಿಂತ ಹಿಂದೆ ಅಧಿಕಾರದಲ್ಲಿದ್ದಾಗ ಈ ಯೋಜನೆ ಯಾಕೆ ನೀಡಿಲ್ಲ. ನಮ್ಮ ಯೋಜನೆಗಳನ್ನು ದೂಷಿಸಿದ ಪ್ರಧಾನಿಯೂ ಚುನಾವಣೆಗಾಗಿ ಉಚಿತ ಯೋಜನೆಗಳ ಭರವಸೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಆಡಳಿತಕ್ಕೆ ಬಂದು ಏಳು ತಿಂಗಳು ಕಳೆದರೂ ನಿರುದ್ಯೋಗ ಸಮಸ್ಯೆ ಉಳಿದಿದೆ. ಸರ್ಕಾರಿ ಉದ್ಯೋಗಗಳು ಖಾಲಿ ಇದ್ದರೂ ನೇಮಕಾತಿಗೆ ಮುಂದಾಗುತ್ತಿಲ್ಲ. ಶೈಕ್ಷಣಿಕ ವ್ಯವಸ್ಥೆ ಹದಗೆಟ್ಟಿದೆ. ಕಾರು, ಔತಣಕೂಟ, ಪಕ್ಷಾಂತರಿಗಳಿಗೆ ಬಳಸಲು ಇರುವ ಹಣ ಅಭಿವೃದ್ಧಿ ಕೆಲಸಕ್ಕೆ ಬಳಸುತ್ತಿರುವುದು ವಿಪರ್ಯಾಸ. ಮೈಸೂರಿನ ರಂಗಾಯಣ ಸಹಿತ ವಿವಿಧ ಅಕಾಡೆಮಿಗಳಿಗೆ ನಿರ್ದೇಶಕ, ಅಧ್ಯಕ್ಷರ ಆಯ್ಕೆಯಾಗದೆ ಸಾಂಸ್ಕೃತಿಕ ವಲಯ ಬಡವಾಗಿದೆ ಎಂದರು.

ಅಮಿತ್‌ ಶಾ ಗೃಹ ಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುವಲ್ಲಿ ವೈಫಲ್ಯತೆ ಅನುಭವಿಸುತ್ತಿದ್ದಾರೆ. ಸಂಸದ ಪ್ರತಾಪ ಸಿಂಹ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡೋದಿಲ್ಲವೆಂಬ ಭಯದಲ್ಲಿ ಗಮನಸೆಳೆಯಲು ಅನ್ಯ ಮಾರ್ಗ ಹಿಡಿದಿದ್ದಾರೆ. ಸಂಸತ್‌ಗೆ ನುಗ್ಗಿದ ಆರೋಪಿಗಳ ಪೂರ್ವಾಪರ ವಿಚಾರಿಸದೆ ಪಾಸ್‌ ನೀಡಿರುವುದು ಅಪರಾಧ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಈ ಎಲ್ಲಾ ವೈಫಲ್ಯವನ್ನು ಜನಸಾಮಾನ್ಯರ ಮುಂದಿಡುತ್ತೇವೆ. ಇತರೆ ಪಕ್ಷಗಳ ಪರ್ಯಾಯವಾಗಿ ಗುರುತಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಈ ಸಂದರ್ಭದಲ್ಲಿ ಆಮ್‌ ಆದ್ಮಿ ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ಸಂಚಿತ್​ ಸಹಾನೀ, ಬಿ ಟಿ ನಾಗಣ್ಣ, ನಂಜಪ್ಪ ಕಾಳೇಗೌಡ, ಮಾಲವಿಕ ಗುಬ್ಬಿವಾಣಿ, ಸೋಸಲೆ ಸಿದ್ದರಾಜು ಎಂ, ಕುಶಲ ಸ್ವಾಮಿ, ಲೋಹಿತ್‌ ಜಿ ಹನುಮಪುರ, ನವೀನ್‌ ಚಂದ್ರ ಪೂಜಾರಿ ಉಪಸ್ಥಿತರಿದ್ದರು.

ಇದನ್ನೂ ಓದಿ:ವಂಟಮೂರಿ ಘಟನೆ ಸಂಬಂಧ ನಡ್ಡಾ ರಾಜಕೀಯ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details