ETV Bharat / state

ವಂಟಮೂರಿ ಘಟನೆ ಸಂಬಂಧ ನಡ್ಡಾ ರಾಜಕೀಯ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Dec 16, 2023, 10:48 PM IST

Updated : Dec 16, 2023, 10:54 PM IST

ವಂಟಮೂರಿ ಘಟನೆ ಸಂಬಂಧ ಸರ್ಕಾರ ಎಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Etv Bharatcm-siddaramaiah-reaction-jp-nadda-and-bjp-over-vantamuri-incident
ವಂಟಮೂರಿ ಘಟನೆ ಸಂಬಂಧ ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಹುಬ್ಬಳ್ಳಿ: ವಂಟಮೂರಿ ಘಟನೆ ಸಂಬಂಧ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹೆಣ್ಣು ಮಗಳ ಮೇಲೆ ದೌರ್ಜನ್ಯ ಆಗಿರುವುದು ನಿಜ. ಕಾನೂನು ಪ್ರಕಾರ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಗೃಹ ಸಚಿವರು ಆಸ್ಪತ್ರೆಗೆ ಹೋಗಿ, ಸಂತ್ರಸ್ತೆಯನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಂಟಮೂರಿ ಘಟನೆ ಸಂಬಂಧ ಆರೋಪಿಗಳನ್ನು ತಕ್ಷಣ ಅರೆಸ್ಟ್ ಮಾಡಲಾಗಿದೆ. ಆದರೆ ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡಲು ಹೊರಟ್ಟಿದ್ದಾರೆ. ನ್ಯಾಷನಲ್ ಕ್ರೈಂ ಬ್ಯೂರೋ ತೆಗೆದು ನೋಡಿ ಅವರ ಅವಧಿಯಲ್ಲಿ ಎಷ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿಯುತ್ತದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ 9 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಸಂಬಂಧ ಶಿಕ್ಷೆಯಾಗಿದೆ. ಇದಕ್ಕೆ ನಡ್ಡಾ ಏನು ಹೇಳುತ್ತಾರೆ?. ಹೆಣ್ಣು ಮಗಳ ಮೇಲೆ ದೌರ್ಜನ್ಯ ಆಗಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದರು.

ಮೈಸೂರ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್​ ಹೆಸರಿಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ತೀರ್ಮಾನ ಮಾಡಿಲ್ಲ. ಅದು ಅವರವರ ಅಭಿಪ್ರಾಯ ಎಂದರು. ಸಂಸತ್​ನಲ್ಲಿ ಭದ್ರತಾ ಲೋಪವಾಗಿರುವ ಕುರಿತು ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ಸಂಸತ್​ನಲ್ಲಿ ಭದ್ರತಾ ಲೋಪ ಆಗಿರುವುದು ನಿಜನಾ, ಸುಳ್ಳಾ?. ಲೋಪ ಆಗಿದೆ ಅದನ್ನು ಕೇಳಿದರೆ ತಪ್ಪಾ? ಎಂದು ಹೇಳಿದರು.

ಯತೀಂದ್ರ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲು ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂಬ ಲೆಹರ್ ಸಿಂಗ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಾವು ಯತೀಂದ್ರ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲ್ಲ, ಒಂದು ವೇಳೆ ಜನರು ಒತ್ತಾಯಿಸಿದರೆ ನಿಂತುಕೊಳ್ಳಬಹುದು, ನಿಂತುಕೊಳ್ಳದೇ ಇರಬಹುದು. ಬಿಜೆಪಿಯವರಿಗೆ ಬುದ್ಧಿ ಸ್ವಲ್ಪ ಕಡಿಮೆ ಇದ್ದಹಾಗೆ ಕಾಣುತ್ತದೆ ಎಂದು ತಿರುಗೇಟು ನೀಡಿದರು.

ಪ್ರಭಾವಿ ಜಾತಿಗಳು ಜಾತಿಗಣತಿ ವರದಿ ಬಿಡುಗಡೆಗೆ ಅಡ್ಡಿಪಡಿಸುತ್ತಿವೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಇನ್ನೂ ಜಾತಿಗಣತಿ ವರದಿ ಬಿಡುಗಡೆಯಾಗಿಲ್ಲ. ವರದಿಯಲ್ಲಿ ಏನಿದೆ ಎಂದು ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಅವರು ಊಹೆ ಮಾಡಿಕೊಂಡು ಏನೆನೋ ಹೇಳುತ್ತಾರೆ. ಮುಂದೆ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ: ಸಂತ್ರಸ್ತ ಮಹಿಳೆಗೆ ಎರಡು ಎಕರೆ ಜಮೀನು ಮಂಜೂರು: ಸಚಿವ ಸತೀಶ್ ಜಾರಕಿಹೊಳಿ

Last Updated :Dec 16, 2023, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.