ಕರ್ನಾಟಕ

karnataka

ತಂದೆ ಸಿಎಂ ಆಗಬೇಕು, ವರುಣಾ ಕ್ಷೇತ್ರದಲ್ಲಿ ಗೆಲುವು ಖಚಿತ: ಯತೀಂದ್ರ ಸಿದ್ದರಾಮಯ್ಯ

By

Published : Apr 1, 2023, 4:02 PM IST

Updated : Apr 1, 2023, 4:19 PM IST

ವರುಣಾ ಕ್ಷೇತ್ರ ರಚನೆ ಅದಾಗಿನಿಂದಲೂ ಕಾಂಗ್ರೆಸ್ ಗೆದ್ದಿದೆ. ಇದು ಕಾಂಗ್ರೆಸ್​​ ಭದ್ರಕೋಟೆಯಾಗಿದೆ. ಯಾರೇ ಬಂದರೂ ಸಹ ನಮಗೆ ಭಯ ಇಲ್ಲಾ. ವರುಣ ಕ್ಷೇತ್ರದಲ್ಲಿ ಗೆದ್ದೆ ಗೆಲ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

siddaramaiah-should-become-cm-yatindra-siddaramaiah
ಸಿದ್ದರಾಮಯ್ಯ ಸಿಎಂ ಆಗಬೇಕು, ವರುಣ ಕ್ಷೇತ್ರದಲ್ಲಿ ಗೆಲುವು ಖಚಿತ: ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ ಸಿಎಂ ಆಗಬೇಕು, ವರುಣ ಕ್ಷೇತ್ರದಲ್ಲಿ ಗೆಲುವು ಖಚಿತ: ಯತೀಂದ್ರ ಸಿದ್ದರಾಮಯ್ಯ

ಮಂಡ್ಯ:ತಂದೆ ಮುಖ್ಯಮಂತ್ರಿ ಆಗಬೇಕು, ವರುಣ ಕ್ಷೇತ್ರದಲ್ಲಿ ಅವರ ಗೆಲುವು ಖಚಿತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತಿಂದ್ರ ಸಿದ್ದರಾಮಯ್ಯ ತಿಳಿಸಿದರು. ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಗನಾಗಿ ತಂದೆ ಅವರು ಮುಖ್ಯಮಂತ್ರಿ ಆಗೋದು ಯಾರಿಗೆ ಆಸೆ ಇರಲ್ಲ ಹೇಳಿ. ಖಂಡಿತವಾಗಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕು ತಂದೆ ಮುಖ್ಯಮಂತ್ರಿ ಆದರೆ, ಕಳೆದ ಬಾರಿಯಂತೆ ಆಡಳಿತಕ್ಕೆ ಮತ್ತೊಮ್ಮೆ ಪ್ರಾಮುಖ್ಯತೆ ಸಿಗುತ್ತದೆ. ಸಿದ್ದರಾಮಯ್ಯ ಸಿಎಂ ಆದರೆ ನಮ್ಮ ರಾಜ್ಯ ಅಭಿವೃದ್ಧಿ ಆಗುತ್ತದೆ. ಈ ಎಲ್ಲ ಕಾರಣದಿಂದ ನಮ್ಮ ತಂದೆ ಸಿಎಂ ಆಗಬೇಕು. ನಮ್ಮ ಪಕ್ಷ ಈಗಾಗಲೇ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ ಮಾಡಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಶೀಘ್ರದಲ್ಲಿ ಮತ್ತಷ್ಟು ಯೋಜನೆಗಳ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದರು.

ಇನ್ನು ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಕಳೆದ ಚುನಾವಣೆಯಲ್ಲೂ ವಿಜಯೇಂದ್ರ ಬರ್ತಾರೆ ಅಂತ ಹೇಳ್ತಿದ್ರು. ಆಗಲೂ ನಾನೇ ಅಭ್ಯರ್ಥಿ ಆಗಿದ್ದೆ. ಕ್ಷೇತ್ರದಲ್ಲಿ ಯಾರೇ ಪ್ರತಿಸ್ಪರ್ಧಿಗಳು ಬಂದರು ಫೈಟ್ ಮಾಡ್ತೇವೆ. ವರುಣಾ ಕ್ಷೇತ್ರ ರಚನೆ ಆದಾಗಿನಿಂದಲೂ ಕಾಂಗ್ರೆಸ್ ಗೆದ್ದುಕೊಂಡು ಬಂದಿದೆ. ವರುಣಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಯಾರೇ ಬಂದರೂ ಸಹ ನಮಗೆ ಭಯ ಇಲ್ಲಾ. ವರುಣಾ ಕ್ಷೇತ್ರದಲ್ಲಿ ಗೆದ್ದೆ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತ್ಯಾಗದ ಪ್ರಶ್ನೆ ಬರುವುದಿಲ್ಲ: ವರುಣ ಕ್ಷೇತ್ರ ಒಬ್ಬ ನಾಯಕರಿಗೆ ಸೇರಿದ ಕ್ಷೇತ್ರವಲ್ಲ. ಆ ಕ್ಷೇತ್ರ ಮತದಾರರಿಗೆ ಸೇರಿದ್ದು. ನಮ್ಮ ತಂದೆ ಅವರ ಕೊನೆ ಚುನಾವಣೆ ವರುಣಾದಲ್ಲೇ ನಿಂತು ಗೆಲ್ಲಬೇಕು ಎನ್ನುವುದು ಕಾರ್ಯಕರ್ತರ ಆಸೆ. ಹೈಕಮಾಂಡ್ ಕೂಡ ನಮ್ಮ ತಂದೆಯವರು ವರುಣಾದಲ್ಲಿ ನಿಂತರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಬೇರೆ ಕ್ಷೇತ್ರದಲ್ಲಿ ನಿಂತಿದ್ದರೆ ಅಲ್ಲಿಯ ಟಿಕೆಟ್ ಆಕಾಂಕ್ಷಿಗಳು ಜಾಗ ಬಿಟ್ಟು ಕೊಟ್ಟು ಅವರ ಪರ ಕೆಲಸ ಮಾಡಿರುವರು. ಅದೇ ಕೆಲಸ ನಾನು ಕೂಡ ಮಾಡಿದ್ದೇನೆ ಎಂದರು.

ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಯಾವುದೇ ಆಕ್ರೋಶ ಇರಲಿಲ್ಲ. 2016ರಿಂದಲೂ ವರುಣಾ ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಕ್ಷೇತ್ರದ ಜನ ನಾನು ನಿಂತರೂ ಸಹ ಬಹಳ ಸಂತೋಷದಿಂದ ಸ್ವಾಗತ ಮಾಡಿದ್ದರು. 59 ಸಾವಿರ ಮತಗಳಿಂದ ಗೆಲ್ಲಿಸಿ ಕೊಟ್ಟರು. ಸಿದ್ದರಾಮಯ್ಯ ವರುಣಾ ಬಿಟ್ಟು ಬಾದಾಮಿಗೆ ಹೋದ್ರು ಅಂತ ಜನಕ್ಕೆ ಬೇಸರ ಇರಲಿಲ್ಲ. ಇದು ನಮ್ಮ ತಂದೆಯ ಕೊನೆ ಚುನಾವಣೆಯಾಗಿದ್ದರಿಂದ ವರುಣಾ ಕ್ಷೇತ್ರಕ್ಕೆ ಬರಲಿ. ಕ್ಷೇತ್ರದಲ್ಲಿ ಯಾವುದೇ ರಿಸ್ಕ್ ಇರಲ್ಲ. ನಾವು ಸುಲಭವಾಗಿ ಗೆಲ್ಲಿಸಿ ಕೊಡ್ತೇವೆ ಎನ್ನುವುದು ಕಾರ್ಯಕರ್ತರ ಮತ್ತು ನಾಯಕರ ಒತ್ತಾಯ ಆಗಿತ್ತು ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ನಿಕ್ಕಿ: ಏಪ್ರಿಲ್​ 10 ರ ಬಳಿಕ ಪ್ರಕಟ ಸಾಧ್ಯತೆ

Last Updated : Apr 1, 2023, 4:19 PM IST

ABOUT THE AUTHOR

...view details