ಕರ್ನಾಟಕ

karnataka

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರ: ರಾಷ್ಟ್ರೀಯ ಹೆದ್ದಾರಿ ಬಂದ್​ಗೆ ಮುಂದಾದ ಮಂಡ್ಯ ರೈತರು... ತಡೆದ ಪೊಲೀಸರು!

By ETV Bharat Karnataka Team

Published : Aug 22, 2023, 12:28 PM IST

Updated : Aug 22, 2023, 4:59 PM IST

ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ರೈತರು ಹೆದ್ದಾರಿ ಬಂದ್​​ಗೆ ಮುಂದಾಗಿದ್ದಾರೆ.

Protest by farmers against the release of Cauvery water to Tamil Nadu in mandya
Etv Bharat

ರಾಷ್ಟ್ರೀಯ ಹೆದ್ದಾರಿ ಬಂದ್​ಗೆ ಮುಂದಾದ ಮಂಡ್ಯ ರೈತರು

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಕೆಆರ್​ಎಸ್​ ಅಣೆಕಟ್ಟೆಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ, ಇಂದು ರೈತ ಸಂಘಟನೆಗಳು ಬೆಂಗಳೂರು - ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಮಂಡ್ಯ ತಾಲೂಕಿನ ಇಂಡುವಾಳ ಬಳಿಯಲ್ಲಿ ಇಂದು ರೈತರು ಕಾವೇರಿ ನೀರು ತಮಿಳುನಾಡಿಗೆ ರಾಜ್ಯ ಸರ್ಕಾರ ಹರಿಸುತ್ತಿರುವುದನ್ನು ವಿರೋಧಿಸಿ ಹೆದ್ದಾರಿಯಲ್ಲೇ ಅಡುಗೆ ಮಾಡಿ ಪ್ರತಿಭೆಟನೆಗೆ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂಡುವಾಳು ಗ್ರಾಮದ ಮೂಲಕ ಬೆಳಗ್ಗೆ 11.30ರ ವೇಳೆಗೆ ರೈತರು ಎತ್ತಿನ ಗಾಡಿ, ಟ್ರ್ಯಾಕ್ಟರ್ ಸಹಿತ ಮೆರವಣಿಗೆಯಲ್ಲಿ ಸರ್ವಿಸ್ ರಸ್ತೆಗೆ ಇಳಿದರು. ಪ್ರತಿಭೆಟನೆಯಲ್ಲಿ ನೂರಾರು ರೈತ ಸಂಘದ ಕಾರ್ಯಕರ್ತರು ಆಗಮಿಸಿದ್ದರು. ರಸ್ತೆ ತಡೆಗೆ ಮುಂದಾದ ರೈತರನ್ನು ಪೊಲೀಸರು ಮನವೊಲಿಸಲು ಪ್ರಯತ್ನಿಸಿದರು.

ಈ ವೇಳೆ ರೈತರು ಮತ್ತು ಪೋಲೀಸರ ನಡುವೆ ವಾಕ್ಸಮರ ನಡೆಯಿತು. ಆದರೆ, ರೈತ ಸಂಘದ ಕಾರ್ಯಕರ್ತರು ಪೊಲೀಸರ ಮನವೊಲಿಕೆಗೆ ಬಗ್ಗದೇ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನಗಾಡಿಗಳ ಮೂಲಕ ಬ್ಯಾರಿಕೇಡ್ ಕಡೆಗೆ ನುಗ್ಗಲು ಯತ್ನಿಸಿದಾಗ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದರು.

ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಹೆದ್ದಾರಿ ತಡೆದು ಶಾಂತಿಯುತ ಪ್ರತಿಭಟನೆಗೆ ಮುಂದಾದ ನಮ್ಮನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಾಗಿದೆ. ಈ ಕೂಡಲೇ ಅಣೆಕಟ್ಟೆಯಿಂದ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ಬಂಧಿಸಿರುವ ರೈತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ರಾಜ್ಯದಿಂದ ತಮಿಳುನಾಡಿಗೆ 80,000 ಕ್ಯೂಸೆಕ್​ ನೀರು ಬಿಡಲಾಗಿದೆ. ಈಗಾಗಲೇ ತಮಿಳುನಾಡು ಪಾಲಿನ ನೀರನ್ನು ಹಂಚಿಕೆ ಮಾಡಲಾಗಿದೆ. ಆದರೂ ತಮಿಳುನಾಡು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದೆ. ಇದರ ಬೆನ್ನಲ್ಲೇ ಮತ್ತೆ ಹನ್ನೊಂದು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ರಾಜ್ಯದ ರೈತರ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಕಾಲುವೆಗಳಿಗೆ ಕೇವಲ ಎರಡು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಈ ನೀರು ಇನ್ನೂ ಆಯಾ ನಾಲೆಗಳಿಗೆ ತಲುಪಿಲ್ಲ. ರಾಜ್ಯ ಸರ್ಕಾರ ಈ ಕೂಡಲೇ ತಮಿಳನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇನ್ನು ಕಾವೇರಿ, ಮಹದಾಯಿ ಜಲವಿವಾದವನ್ನು ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ನಾಳೆ ಸರ್ವಪಕ್ಷಗಳ ಸಭೆ ಕರೆದಿದೆ.

ಇದನ್ನೂ ಓದಿ:ತಮಿಳುನಾಡಿಗೆ ನೀರು ನಿಲ್ಲಿಸಲು ಸಂಜೆಯೊಳಗೆ ಸರ್ಕಾರದಿಂದ ತೀರ್ಮಾನ: ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ

Last Updated : Aug 22, 2023, 4:59 PM IST

ABOUT THE AUTHOR

...view details