ಕರ್ನಾಟಕ

karnataka

ಕೊಡಗಿನಲ್ಲಿ ವರುಣನ ಅಬ್ಬರ.. ತ್ರಿವೇಣಿ ಸಂಗಮ ಜಲಾವೃತ

By

Published : Aug 6, 2019, 5:44 PM IST

ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದೆ.

ಕೊಡಗಿನಲ್ಲಿ ವರುಣನ ಅಬ್ಬರ

ಕೊಡಗು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ವರುಣನ ಅಬ್ಬರಕ್ಕೆ ಕೊಡಗಿನ ಪುಣ್ಯ ಕ್ಷೇತ್ರವಾದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದ್ದು, ನಾಪೋಕ್ಲು-ಮಡಿಕೇರಿ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

ಎಡಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಜನತೆ ಪರದಾಡುವಂತಾಗಿದೆ. ಪ್ರತಿ ವರ್ಷ ಜುಲೈನಲ್ಲಿ ಭರ್ತಿಯಾಗುತ್ತಿದ್ದ ತ್ರಿವೇಣಿ ಸಂಗಮ ಈ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿಯುತ್ತಿರುವ ಮಳೆಗೆ ಜಲಾವೃತಗೊಂಡಿದೆ. ಕೇವಲ 2 ದಿನಗಳಿಂದ ಬ್ರಹ್ಮಗಿರಿ ತಪ್ಪಲಿನಲ್ಲಿ ಸುರಿದ ಮಳೆಗೆ ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೂ ನೀರು ನಿಂತಿದೆ. ಇನ್ನು ಕ್ಷಣಕ್ಷಣಕ್ಕೂ ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಮುಂಜಾಗೃತವಾಗಿ ಬೋಟ್ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ತಟದ ಕೊಳ್ಳಗಳು ತುಂಬಿ ಹರಿಯುತ್ತಿವೆ. ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಸೇರಿದಂತೆ ಇನ್ನೂ ಕೆಲವು ಪ್ರದೇಶಗಳಲ್ಲಿ ಮಳೆ ಜೋರಾಗಿದೆ.

ಕೊಡಗಿನಲ್ಲಿ ವರುಣನ ಅಬ್ಬರ

ವಿದ್ಯುತ್ ಸಂಪರ್ಕ ಕಡಿತ :

ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕತ್ತಲಲ್ಲಿ ಕಾಲಕಳೆಯುವಂತಾಗಿದೆ. ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ದೇವಾಲಯದ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಬೋಟ್ ನಲ್ಲಿ ತೆರಳಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಅಲ್ಲಲ್ಲಿ ರಸ್ತೆ ಕುಸಿಯುತ್ತಿದ್ದು, ಪ್ರವಾಹ ನಿಭಾಯಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ‌. ವಿಶೇಷವಾಗಿ ಭಾಗಮಂಡಲ-ತಲಕಾವೇರಿ ಸಂಪರ್ಕಿಸುವ ರಸ್ತೆ ಮೇಲೆ ನೀರಿನ ಹರಿವು ಹೆಚ್ಚಿದ್ದು, ಹಲವು ವರ್ಷಗಳ ಬೇಡಿಕೆ ಆಗಿರುವ ಮೇಲ್ಸೇತುವೆ ಕಾಮಗಾರಿಯನ್ನು ಮಳೆ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವರುಣನ ನರ್ತನಕ್ಕೆ ಆತಂಕಗೊಂಡ ಜನತೆ :

ಈಗಾಗಲೇ ಜಿಲ್ಲಾಡಳಿತ ಆಗಸ್ಟ್ 10 ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಮತ್ತು ರೆಡ್ ಅಲರ್ಟ್ ಕೂಡ ಘೋಷಿಸಿದೆ. ಕೊಡಗಿನಾದ್ಯಂತ ಕಳೆದೆರಡು ದಿನಗಳಿಂದ ವರುಣನ ನರ್ತನಕ್ಕೆ ಜಿಲ್ಲೆ ಜನತೆ ಆತಂಕಗೊಂಡಿದ್ದಾರೆ. ಕಳೆದ ವರ್ಷದಂತೆ ಜಿಲ್ಲೆಯಲ್ಲಿ ಪ್ರವಾಹ ಮರುಕಳಿಸಿದಿರಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ.

TAGGED:

ABOUT THE AUTHOR

...view details