ಕರ್ನಾಟಕ

karnataka

ಕಲಬುರಗಿ: ಪೊಲೀಸ್ ಠಾಣೆಯಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು; ಕುಟುಂಬಸ್ಥರ ಆಕ್ರೋಶ

By

Published : Aug 17, 2023, 9:46 PM IST

ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.

ಉದಯ್ ಪಾರ್ದಿ
ಉದಯ್ ಪಾರ್ದಿ

ಮೃತ ಉದಯ್​ ಅವರ ಪತ್ನಿ ವಿಮಲಾಬಾಯಿ ಪ್ರತಿಕ್ರಿಯೆ

ಕಲಬುರಗಿ‌ :ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯ ವಶದಲ್ಲಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯೆದುರು ಮೃತದೇಹವಿಟ್ಟು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಮೃತನ ಹೆಸರು ಉದಯ್ ಪಾರ್ದಿ (55) ಎಂದು ತಿಳಿದುಬಂದಿದೆ. ಕಲಬುರಗಿ ತಾಲೂಕಿನ ಮಡ್ಡಿ ಸಿರಸಗಿ ಗ್ರಾಮದ ಮೂಲದವನಾದ ಉದಯ್ ಪಾರ್ದಿ, ಅನಾರೋಗ್ಯ ಹಿನ್ನೆಲೆಯಲ್ಲಿ ಮನೆಯಲ್ಲಿ ಇರುತ್ತಿದ್ದ. ಆದರೆ, ಕೆಲ ದಿನಗಳ ಹಿಂದೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವೊಂದರಲ್ಲಿ ಓರ್ವ ಆರೋಪಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಕಳ್ಳತನವಾಗಿದ್ದ ಮನೆಯಲ್ಲಿ ಫಿಂಗರ್ ಪ್ರಿಂಟ್ ಪರಿಶೀಲನೆ ವೇಳೆ ಮಡ್ಡಿ ಸಿರಸಗಿ ಗ್ರಾಮದ ಉದಯ್‌ ಪಾರ್ದಿ ಫಿಂಗರ್ ಪ್ರಿಂಟ್​ಗೆ ಹೋಲಿಕೆಯಾಗಿತ್ತು.

ಹೀಗಾಗಿ, ಉದಯ್​ನನ್ನು ಮಡ್ಡಿ ಸಿರಸಗಿ ಗ್ರಾಮದಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಯದಿಂದ ಕೆಳಗೆ ಕುಸಿದು ಬಿದ್ದ ಉದಯ್​ನನ್ನು ತಕ್ಷಣವೇ ಪೊಲೀಸರು ನಗರದ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ.‌ ತದನಂತರ ಮೃತಪಟ್ಟಿದ್ದಾನೆಂದು ವೈದ್ಯರು ಹೇಳಿದ್ದಾರೆ. ಆದರೆ, ಪ್ರಕರಣ ತಿರುವು ಪಡೆದುಕೊಂಡಿದ್ದು, ಅಶೋಕ ನಗರ ಠಾಣೆ ಪೊಲೀಸರೇ ಯಾವುದೇ ತಪ್ಪು ಮಾಡದ ಉದಯ್​ನನ್ನು ಕರೆದುಕೊಂಡು ಹೋಗಿ ವಿಚಾರಣೆ ನೆಪದಲ್ಲಿ ಹೊಡೆದು ಸಾಯಿಸಿದ್ದಾರೆ ಅಂತ ಮೃತ ಉದಯ್​ನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಉದಯ್ ಕೆಲ ದಿನಗಳಿಂದ ಕಳ್ಳತನ ಮಾಡುವುದನ್ನು ಬಿಟ್ಟು ಮನೆಯಲ್ಲೇ ಇರುತ್ತಿದ್ದ. ಹೀಗಾಗಿ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ವಸ್ತುಗಳನ್ನು ಕಳ್ಳರಿಂದ ತಾನೇ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್, ''ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಕೇಸ್​ ದಾಖಲಿಸಿಕೊಳ್ಳಲಾಗುವುದು. ಪ್ರಕರಣದ ತನಿಖೆ ನಡೆಸಲು ಸಿಐಡಿಗೆ ಕೇಸ್ ಹಸ್ತಾಂತರ ಮಾಡಲಾಗುವುದು'' ಎಂದರು.

ಉದಯಕುಮಾರನನ್ನು ಕಳ್ಳತನ ಪ್ರಕರಣದ ಆರೋಪದಲ್ಲಿ ಗುರುವಾರ ಬೆಳಿಗ್ಗೆ ಪೊಲೀಸರು ಬಂದು ವಿಚಾರಣೆಗಾಗಿ ಕರೆದೊಯ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾಗಿ ಹೇಳಿದರು. ಅವರಿಗೆ ಹಾರ್ಟ್​ ಅಟ್ಯಾಕ್ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಪೊಲೀಸರು ಅವರಿಗೆ ಹೊಡೆದಿದ್ದಾರೋ ನಮಗೆ ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ಏನೂ ತಪ್ಪು ಮಾಡದವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಈಗ ವಕೀಲರು ಅವರಿಗೆ ಹೃದಯಾಘಾತವಾಗಿದೆ ಎನ್ನುತ್ತಿದ್ದಾರೆ ಎಂದು ಮೃತನ ಪತ್ನಿ ವಿಮಲಾಬಾಯಿ ಬೇಸರ ವ್ಯಕ್ತಪಡಿಸಿದರು.

ಘಟನೆಯನ್ನು ಖಂಡಿಸಿ ಕುಟುಂಬಸ್ಥರು ಹಾಗೂ ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರ ಮತ್ತು ಪುತ್ರಿಯರು ಇದ್ದಾರೆ.

ಇದನ್ನೂ ಓದಿ:ಪೊಲೀಸ್​ ಠಾಣೆಯಲ್ಲಿ ಮೃತಪಟ್ಟ ದಲಿತ ಯುವಕ: ಲಾಕ್​ ಅಪ್​ ಡೆತ್​ ಆರೋಪ

ABOUT THE AUTHOR

...view details