ಕರ್ನಾಟಕ

karnataka

ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳಲಾಗುತ್ತಿದೆ : ಆರ್ ಅಶೋಕ್

By ETV Bharat Karnataka Team

Published : Nov 21, 2023, 11:01 PM IST

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ಹಣವನ್ನೂ ರಾಜ್ಯ ಸರ್ಕಾರ ನಿಲ್ಲಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್

ಕಲಬುರಗಿ : ಪಂಚರಾಜ್ಯಗಳ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಬ್ಯುಸಿಯಾಗಿದೆ. ಈ ರಾಜ್ಯಗಳ ಚುನಾವಣಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರ್ ಅಶೋಕ್ ಅವರು ಟೀಕಿಸಿದರು. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ತಾಲೂಕಿನ ಶ್ರೀನಿವಾಸ ಸರಡಗಿ, ಪಾಳಾ ಗ್ರಾಮದ ಹೊರವಲಯದಲ್ಲಿ ಬರ ವೀಕ್ಷಣೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ರೈತರಿಗೆ ಕೇಂದ್ರದಿಂದ ರೂ. 6 ಸಾವಿರ ನೀಡುತ್ತಿದ್ದರು. ಅದಕ್ಕೆ ರಾಜ್ಯದ ನಾಲ್ಕು ಸಾವಿರ ಸೇರಿಸಿ ರೂ. 10 ಸಾವಿರ ನೀಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಅದನ್ನೂ ನಿಲ್ಲಿಸಿದೆ. ಇಷ್ಟು ಸಾಲದು ಎಂಬಂತೆ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿದ್ದ ಹಣವನ್ನೂ ರಾಜ್ಯ ಸರ್ಕಾರ ನಿಲ್ಲಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸದ್ಯಕ್ಕಂತೂ ರಾಜ್ಯ ಸರ್ಕಾರದ ಬಳಿ ನಯಾಪೈಸೆ ಹಣವಿಲ್ಲ. ಇದೇನಿದ್ದರೂ ಕೇವಲ ಎಟಿಎಂ ಸರ್ಕಾರ ಎಂದು ಲೇವಡಿ ಮಾಡಿದ ಅವರು, ಕೇಂದ್ರ ಸರ್ಕಾರ ಏನು ಕೊಡಬೇಕೋ ಅದನ್ನು ನೀಡುತ್ತಾ ಬಂದಿದೆ. ಮನಮೋಹನಸಿಂಗ್ ಅವರು ಮಾಡಿದ ನೀತಿಗೆ ಅನುಗುಣವಾಗಿಯೇ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಾ ಬಂದಿದೆ ಎಂದು ಅವರು ಸಮಜಾಯಿಷಿ ನೀಡಿದರು. ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷ ನಾವೇ ಹಣ ಕೊಟ್ಟಿದ್ದೇವೆ. ಆದರೆ ಇವರ ಖಜಾನೆಯಲ್ಲಿ ಹಣ ಇಲ್ಲದ ಕಾರಣಕ್ಕಾಗಿ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈವರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಎದುರೇಟು ನೀಡಿದ ಅಶೋಕ್, ನಮ್ಮ ಸರ್ಕಾರ ಇದ್ದಾಗ ಕೇಂದ್ರದ ಹಣ ಮಂಜೂರಾತಿಗೆ ಕಾಯದೆ ನಮ್ಮ ಖಜಾನೆಯಿಂದ ಹಣ ನೀಡಲಾಗಿತ್ತು. ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಟ್ಟರೆ ಬಳಿಕ ಅದನ್ನು ಕೇಂದ್ರ ಸರ್ಕಾರದಿಂದ ಪಡೆಯಬಹುದು ಎಂದರು.

ಚುನಾವಣೆಗೂ ಮುನ್ನ ಎಲ್ಲಾ ಫ್ರೀ ಫ್ರೀ ಎಂದು ಹೇಳಿ ಈಗ ಏನೂ ನೀಡುತ್ತಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಹೇಗೆ ನಿಭಾಯಿಸಿದೆವು ಎಂಬುದಕ್ಕೆ ದಾಖಲೆಗಳೇ ಸಾಕ್ಷಿ ನುಡಿಯುತ್ತವೆ. ನಮ್ಮದೇನಾದರೂ ತಪ್ಪಿದ್ದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧ ಎಂದು ಹೇಳಿದರು. ಜಿಲ್ಲೆಯ ರೈತರಿಗೆ ನ್ಯಾಯ ಸಿಗಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಇದೇ ಅಂಶದ ಮೇಲೆ ನಿಲುವಳಿ ಸೂಚನೆ ತಂದು ಚರ್ಚಿಸುವುದಾಗಿ ಹೇಳಿದರು.

ಇದನ್ನೂ ಓದಿ :ಬರ ಅಧ್ಯಯನ ಪ್ರವಾಸಕ್ಕೂ ಮುನ್ನ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಪ್ರತಿಪಕ್ಷ ನಾಯಕ ಆರ್.ಅಶೋಕ್

ABOUT THE AUTHOR

...view details