ETV Bharat / state

ಬರ ಅಧ್ಯಯನ ಪ್ರವಾಸಕ್ಕೂ ಮುನ್ನ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಪ್ರತಿಪಕ್ಷ ನಾಯಕ ಆರ್.ಅಶೋಕ್

author img

By ETV Bharat Karnataka Team

Published : Nov 20, 2023, 12:33 PM IST

Updated : Nov 20, 2023, 3:37 PM IST

R.Ashok visits Adichunchanagiri Math: ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಇಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದ್ದರು.

ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಆರ್.ಅಶೋಕ್
ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಆರ್.ಅಶೋಕ್

ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಪ್ರತಿಪಕ್ಷ ನಾಯಕ ಆರ್.ಅಶೋಕ್

ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಬರ ಅಧ್ಯಯನವನ್ನು ಬಿಜೆಪಿ ನಾಯಕರು ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಶಾಸಕ ಗೋಪಾಲಯ್ಯ, ಮುನಿರಾಜು, ಮಾಜಿ ಎಂಎಲ್​ಸಿ ಅಶ್ವಥ್ ನಾರಾಯಣ ಸೇರಿ ಕೆಲ ಪ್ರಮುಖರು ಜೊತೆಗಿದ್ದರು. ಶ್ರೀಗಳೊಂದಿಗೆ ಅಶೋಕ್ ಕೆಲಕಾಲ ಚರ್ಚೆ ನಡೆಸಿ ಮಾರ್ಗದರ್ಶನ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಶೋಕ್, "ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಬರ ಪರಿಹಾರ ಕಾರ್ಯಾಚರಣೆಯಲ್ಲಿ ಸರ್ಕಾರ ವಿಫಲವಾಗಿದೆ. ಹಾಗಾಗಿ ನಾಳೆಯಿಂದಲೇ ನಾವು ಬರ ಅಧ್ಯಯನ ಪ್ರವಾಸ ಮಾಡುತ್ತೇವೆ. ಬರಗಾಲದ ವಿಚಾರವಾಗಿ ಶಾಸಕರ ಜೊತೆ ಮಾತನಾಡಿದ್ದೇನೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಜೆಡಿಎಸ್ ಕೂಡ ಬೆಂಬಲ ನೀಡುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ನೀಡದೆ, ಕೇಂದ್ರದ ಕಡೆ ಬೆರಳು ಮಾಡುತ್ತಿದೆ. ಎಲ್ಲ ಶಾಸಕರಿಗೆ ಬರ ಅಧ್ಯಯನ ಮಾಡಿ ವರದಿ ಸಿದ್ಧ ಮಾಡಿಕೊಂಡು ಬರುವಂತೆ ಹೇಳಿದ್ದೇನೆ" ಎಂದರು.

"ಬರ ಅಧ್ಯಯನ ಪ್ರವಾಸದ ಬಗ್ಗೆ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗು ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜೊತೆ ಮಾತನಾಡಿದ್ದೇನೆ. ಒಂದು ತಂಡವಾಗಿ ನಾವೆಲ್ಲ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ಕಿವಿ ಹಿಂಡುವ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕಿದೆ. ಆದರೂ ಎಚ್ಚರವಾಗದಿದ್ದರೆ ಬೇರೆ ಮದ್ದು ಹುಡುಕುತ್ತೇವೆ" ಎಂದು ಆರ್​ ಅಶೋಕ್​ ಹೇಳಿದರು.

"ಹಿಂದಿನ ಶ್ರೀಗಳು ಪ್ರತಿದಿನ ನನಗೆ ಸಲಹೆ ಕೊಡುತ್ತಿದ್ದರು. ಈಗಿನ ಶ್ರೀಗಳು ಸಹ ಅವರೇ ಕರೆ ಮಾಡಿ ಮಾತನಾಡುತ್ತಾರೆ. ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಸಮರ್ಥ ವಿರೋಧಪಕ್ಷದ ನಾಯಕನಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿನ್ನೆ ಸುತ್ತೂರು ಶ್ರೀಗಳಿಗೆ ಕರೆ ಮಾಡಿದ್ದೆವು. ಎಲ್ಲ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ" ಎಂದು ಪ್ರತಿಪಕ್ಷ ನಾಯಕ ಆರ್​ ಅಶೋಕ್​ ತಿಳಿಸಿದರು.

"ಕಲ್ಯಾಣ ಕರ್ನಾಟಕದಿಂದ ಬರ ಪ್ರವಾಸ ಮಾಡುತ್ತೇವೆ. ಈ ವೇಳೆ ಅಸಮಾಧಾನಿತರ ಮನೆಗೇ ಹೋಗಿ ಮಾತನಾಡುತ್ತೇನೆ. ಯಾರೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಮಾಜಿ ಸಚಿವ ಸೋಮಣ್ಣ ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಕಾರಣಾಂತರಗಳಿಂದ ಸೋಮಣ್ಣ ಅವರಿಗೆ ಸೋಲಾಗಿದೆ. ನಾನು ಅವರು ಸಹೋದರರ ರೀತಿ ಇದ್ದೇವೆ" ಎಂದು ಹೇಳಿದರು.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ದತ್ತಮಾಲೆ ಧರಿಸುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, "ಬಹಳಷ್ಟು ಜನ ಭಾರತ ಮಾತಾಕಿ ಜೈ ಎನ್ನಲು ಆರಂಭಿಸಿದ್ದಾರೆ. ಕುಮಾರಸ್ವಾಮಿ ದತ್ತಮಾಲೆ ಧರಿಸುತ್ತೇನೆ ಎಂದಿದ್ದಕ್ಕೆ ಸ್ವಾಗತ. ಇದು ಭಾರತದ ಪರಂಪರೆ. ನಮ್ಮ ತಂದೆ, ತಾತ ಎಲ್ಲರೂ ಮಾಲೆ ಧರಿಸಿದ್ದರು. ಶಿವಮಾಲೆ, ದತ್ತಮಾಲೆ, ಶಬರಿ ಮಾಲೆ ಹೀಗೆ ಅನೇಕ ಮಾಲೆ ಧರಿಸುವುದು ನಮ್ಮ ಪರಂಪರೆ ಆಗಿದೆ. ದೇವರ ಮೇಲೆ ಭಕ್ತಿ ತೋರಿಸುವುಕ್ಕೆ ಭೇದ ಭಾವ ಬೇಡ, ಆ ತರ ಮಾಡುವುದು ಕಾಂಗ್ರೆಸ್" ಎಂದು ಟೀಕಿಸಿದರು.

ಇದನ್ನೂ ಓದಿ: ಅಶೋಕ್ ಗುಡುಗಿದರೆ ವಿಧಾನಸೌಧ ನಡುಗಲಿದೆ ಎಂದ ಬಿ ವೈ ವಿಜಯೇಂದ್ರ

Last Updated :Nov 20, 2023, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.